ಬೊಮ್ಮಾಯಿ, ಸುಧಾಕರ್‌ ಜೊತೆ ಸಂತೋಷ್‌ ಚರ್ಚೆ: ಕುತೂಹಲ ಮೂಡಿಸಿದೆ ಬೆಳವಣಿಗೆ!

ಬೊಮ್ಮಾಯಿ, ಸುಧಾಕರ್‌ ಜೊತೆ ಸಂತೋಷ್‌ ಚರ್ಚೆ: ಕುತೂಹಲ| ಸರ್ಕಾರಕ್ಕೆ 1 ವರ್ಷ: ಸಚಿವರ ಮೌಲ್ಯಮಾಪನ ಗುಸುಗುಸು| ಬೆಂಗಳೂರು ಗಲಭೆ, ಕೊರೋನಾ ಚರ್ಚೆ: ಸಚಿವರ ಸ್ಪಷ್ಟನೆ

BJP Leader BL Santosh Meets Minister Dr K Sudhakar and Basavaraj Bommai

ಬೆಂಗಳೂರು(ಆ.23): ಬಹುದಿನಗಳ ನಂತರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌ ಅವರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡು ವಿವರ ಪಡೆದುಕೊಂಡಿದ್ದಾರೆ.

ರಾಜಧಾನಿಯಲ್ಲಿ ನಡೆದ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಬೊಮ್ಮಾಯಿ ಅವರನ್ನು ಮತ್ತು ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸುಧಾಕರ್‌ ಅವರನ್ನು ಕರೆಸಿ ಆ ಕುರಿತ ಮಾಹಿತಿ ಪಡೆದುಕೊಳ್ಳುವುದರ ಜತೆಗೆ ಪಕ್ಷ ಸಂಘಟನೆಯಲ್ಲೂ ಸಚಿವರು ತೊಡಗಿಸಿಕೊಳ್ಳಬೇಕು ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಬೆಳವಣಿಗೆ ಸಹಜವಾಗಿಯೇ ಆಡಳಿತಾರೂಢ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ್ದು, ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಚಿವರ ಕಾರ್ಯವೈಖರಿಯನ್ನು ಪಕ್ಷದ ವತಿಯಿಂದ ಮೌಲ್ಯಮಾಪನ ಮಾಡಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಇದೇ ರೀತಿ ಸಂತೋಷ್‌ ಅವರು ಇತರ ಸಚಿವರನ್ನೂ ಕರೆಸಿ ಮಾತುಕತೆ ನಡೆಸುವುದನ್ನು ಮುಂದುವರೆಸಿದಲ್ಲಿ ಮೌಲ್ಯಮಾಪನ ನಡೆಸುವ ಸುದ್ದಿ ಖಚಿತವಾಗಲಿದೆ.

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ದೆಹಲಿಯಲ್ಲಿಯೇ ತಂಗಿದ್ದ ಸಂತೋಷ್‌ ಅವರು ಗುರುವಾರ ನಗರಕ್ಕೆ ಆಗಮಿಸಿದ್ದಾರೆ. ಶುಕ್ರವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರನ್ನು ಬಸವರಾಜ ಬೊಮ್ಮಾಯಿ ಮತ್ತು ಡಾ.ಕೆ.ಸುಧಾಕರ್‌ ಭೇಟಿ ಮಾಡಿ ರಾಜ್ಯದಲ್ಲಿನ ಬೆಳವಣಿಗೆ ಕುರಿತು ಮಾಹಿತಿ ಒದಗಿಸಿದರು. ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದಿರುವ ಗಲಭೆ, ಕೈಗೊಂಡಿರುವ ಮಾಹಿತಿಗಳನ್ನು ಬಸವರಾಜ ಬೊಮ್ಮಾಯಿ ನೀಡಿದರು. ಅಂತೆಯೇ ಕೊರೋನಾ ಪರಿಸ್ಥಿತಿ ಕುರಿತು ಮತ್ತು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಸೇರಿದಂತೆ ಇತರೆ ವಿವರಗಳನ್ನು ಸುಧಾಕರ್‌ ಒದಗಿಸಿದರು.

ಸಂತೋಷ್‌ ಜತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಕ್ಷ ಸಂಘಟನೆ, ಗಣೇಶೋತ್ಸವ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮಾತುಕತೆ ನಡೆಸಲಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ವಿಧಿಸಿರುವ ನಿರ್ಬಂಧಗಳ ಕುರಿತು ಮಾಹಿತಿ ನೀಡಲಾಗಿದೆ. ವಿಶೇಷವಾಗಿ ಹಾವೇರಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮತ್ತು ಜಿಲ್ಲಾ ಕಚೇರಿ ನಿರ್ಮಾಣದ ಬಗ್ಗೆಯೂ ಸಂತೋಷ್‌ ಜತೆ ಚರ್ಚಿಸಲಾಗಿದೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ರಾಜ್ಯದಲ್ಲಿ ಕೊರೋನಾ ಸೋಂಕಿನ ಪರಿಸ್ಥಿತಿ ಮತ್ತು ನಿಯಂತ್ರಣ ಕುರಿತು ಮಾಹಿತಿ ಕೇಳಿದ್ದು, ಅದನ್ನು ವಿಸ್ತೃತವಾಗಿ ವಿವರಿಸಲಾಗಿದೆ. ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರಿಗೆ ವರದಿ ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂತೋಷ್‌ ಅವರು ಸಂತಸ ವ್ಯಕ್ತಪಡಿಸಿದರು. 65 ಸಾವಿರ ಇರುವ ಪರೀಕ್ಷೆಗಳನ್ನು 1 ಲಕ್ಷಕ್ಕೆ ಹೆಚ್ಚಿಸುವಂತೆ ಹೇಳಿದ್ದಾರೆ. ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವೈದ್ಯಾಧಿಕಾರಿ ಕುಟುಂಬಕ್ಕೆ ಸಾಂತ್ವನ ಹೇಳಿ, ಕೊರೋನಾ ಯೋಧರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ ಎಂದಿದ್ದಾರೆ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.

"

Latest Videos
Follow Us:
Download App:
  • android
  • ios