ಭಾರತದಲ್ಲಿ ಸಂವಿಧಾನ ಆತಂಕದಲ್ಲಿದೆ, ಪ್ರಜಾಪ್ರಭುತ್ವವನ್ನು ಉಳಿಸುವಂತೆ ಅಮೇರಿಕಾ, ಯೂರೋಪ್‌ನಲ್ಲಿ ಕೇಳುತ್ತಿರುವ ಎಐಸಿಸಿ ಮುಖಂಡ ರಾಹುಲ್‌ ಗಾಂಧಿಯನ್ನು ದೇಶದ ಜನತೆ ಎಂದಿಗೂ ಸಹಿಸುವುದೂ ಇಲ್ಲ, ಕ್ಷಮಿಸುವುದೂ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ವಾಗ್ದಾಳಿ ನಡೆಸಿದರು. 

ದಾವಣಗೆರೆ (ಮಾ.19): ಭಾರತದಲ್ಲಿ ಸಂವಿಧಾನ ಆತಂಕದಲ್ಲಿದೆ, ಪ್ರಜಾಪ್ರಭುತ್ವವನ್ನು ಉಳಿಸುವಂತೆ ಅಮೇರಿಕಾ, ಯೂರೋಪ್‌ನಲ್ಲಿ ಕೇಳುತ್ತಿರುವ ಎಐಸಿಸಿ ಮುಖಂಡ ರಾಹುಲ್‌ ಗಾಂಧಿಯನ್ನು ದೇಶದ ಜನತೆ ಎಂದಿಗೂ ಸಹಿಸುವುದೂ ಇಲ್ಲ, ಕ್ಷಮಿಸುವುದೂ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ವಾಗ್ದಾಳಿ ನಡೆಸಿದರು. ನಗರದ ಜಿಎಂಐಟಿ ಸಮೀಪ ಮಾ.25ರಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಐತಿಹಾಸಿಕ ಸಮಾವೇಶ, ರೋಡ್‌ ಶೋ ಸಿದ್ಧತೆ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ವಿದೇಶಗಳ ಬಾಗಿಲಿಗೆ ಹೋಗಿ ಭಾರತದಲ್ಲಿ ಸಂವಿಧಾನ ಅಪಾಯದಲ್ಲಿದೆ.

ಪ್ರಜಾಪ್ರಭುತ್ವವನ್ನು ಉಳಿಸಿ ಎಂಬುದಾಗಿ ಬೇಡುತ್ತಿರುವ ರಾಹುಲ್‌ ಗಾಂಧಿಯನ್ನು ಜನತೆ ಕ್ಷಮಿಸುವುದಿಲ್ಲ. ಅವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಭಾರತ್‌ ಜೋಡೋ ಯಾತ್ರೆ ಮಾಡಿದ ರಾಹುಲ್‌ ಗಾಂಧಿ ನಂತರ ವಿದೇಶಗಳಿಗೆ ಹೋಗಿ ಭಾರತದ ಮಾನ ಕಳೆಯುವ ಕೆಲಸ ಮಾಡುತ್ತಿದ್ದಾರೆ. ರಾಹುಲ್‌ ಗಾಂಧಿ ವಿದೇಶಗಳಲ್ಲಿ ಭಾರತಕ್ಕೆ ಅಪಮಾನ ಮಾಡುತ್ತಿದ್ದಾರೆ. ಅಮೇರಿಕಾ, ಯುರೋಪ್‌ ದೇಶಗಳಲ್ಲಿ ಭಾರತದ ಬಗ್ಗೆ ಆಡುತ್ತಿರುವ ಮಾತುಗಳನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಟೀಕಿಸಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾ​ರ​ಸ್ವಾಮಿ ಟೀಕೆ

ದೇಶಕ್ಕೆ ಅಪಮಾನ ಮಾಡುತ್ತಿರುವ ರಾಹುಲ್‌ ಗಾಂಧಿ ಹಾಗೂ ಇತರರಿಂದಾಗಿಯೇ ಕಾಂಗ್ರೆಸ್‌ ದೇಶಾದ್ಯಂತ ಕುಸಿಯುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ಸನ್ನು ಜನತೆ ತಿರಸ್ಕರಿಸಲಿದ್ದಾರೆ. ಬರಲಿರುವ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ಸಿಗೆ ತಕ್ಕ ಉತ್ತರ ನೀಡಲಿದ್ದಾರೆ. ಎಲ್ಲೆಡೆ ಬಿಜೆಪಿ ಪರ ಅಲೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿಗೆ ಜನ ಆಶೀರ್ವದಿಸಲಿದ್ದಾರೆ ಎಂದು ಅವರು ಹೇಳಿದರು.

ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಪಕ್ಷದ ಸಂಸದೀಯ ಮಂಡಳಿ ನಿರ್ಧಾರ ಮಾಡುತ್ತದೆ. ಮಾ.25ರಂದು ದಾವಣಗೆರೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ನಡೆಯಲಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ರೋಡ್‌ ಶೋ ನಡೆಸಿ, ಸಮಾವೇಶವದಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕರ್ನಾಟಕದ ಬಗ್ಗೆ ಮೋದಿಗೆ ವಿಶೇಷ ಪ್ರೀತಿ, ಅಭಿಮಾನವಿದೆ. ಸಮಾವೇಶದಲ್ಲಿ ಬಡವರು, ದೀನ ದಲಿತರು, ಮಹಿಳೆಯರು, ಯುವಕರು, ಹಿರಿಯರು ಹೀಗೆ ಎಲ್ಲರನ್ನು ಖುದ್ದಾಗಿ ಅಭಿನಂದಿಸಲು ಮೋದಿ ಇಲ್ಲಿಗೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿಯತ್ತ ಮುಖ ಮಾಡಿದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ

10 ಲಕ್ಷ ಜನ ಭಾಗಿ: ಇದು ಸುಮಾರು 10 ಲಕ್ಷಕ್ಕೂ ಅಧಿಕ ಜನರು ಸೇರುವ ರಾಜ್ಯದ ಐತಿಹಾಸಿಕ ಸಮಾವೇಶ. ನಾಲ್ಕೂ ಕಡೆ ನಡೆಯುತ್ತಿರುವ ಯಾತ್ರೆ ದಾವಣಗೆರೆಯಲ್ಲಿ ಮಹಾ ಸಂಗಮವಾಗಲಿವೆ. ಬಿಜೆಪಿ ಯಾತ್ರೆಗೆ ಜನತೆ ಅಭೂತಪೂರ್ವವಾಗಿ ಸ್ಪಂದಿಸುತ್ತಿದ್ದು, ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಯಾತ್ರೆ ಕಾಣುತ್ತಿಲ್ಲ. ಡಬಲ್‌ ಇಂಜಿನ್‌ನ ಬಿಜೆಪಿ ಸರ್ಕಾರದ ಜನಪರ ಕಾಳಜಿ, ಅಭಿವೃದ್ಧಿ ಮಂತ್ರ, ಎಲ್ಲಾ ವರ್ಗದ ಜನರಿಗೆ ಸ್ಪಂದನೆ, ಪ್ರಧಾನಿ ®ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನಾಯಕತ್ವ ಜನ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅರುಣ್‌ ಸಿಂಗ್‌ ತಿಳಿಸಿದರು.