Asianet Suvarna News Asianet Suvarna News

ಕಾಂಗ್ರೆಸ್‌ ಸರ್ಕಾರ ಬೀಳಿಸಲು ಬಿಜೆಪಿ, ಜೆಡಿಎಸ್‌ ಯತ್ನ: ಸಚಿವ ದರ್ಶನಾಪುರ ಹೊಸ ಬಾಂಬ್‌

ರಾಜ್ಯದ ಜನರು ತಾವಾಗಿಯೇ ಅಧಿಕಾರ ಕೊಟ್ಟರೆ ನಡೆಸಲಿ, ಬೇಡ ಎನ್ನಲ್ಲ. ಆದರೆ, ಶಾಸಕರಿಗೆ ಹಣದ ಆಫರ್ ನೀಡಿ, ಸರ್ಕಾರ ಬೀಳಿಸೋದು ಎಷ್ಟರ ಮಟ್ಟಿಗೆ ಸರಿ: ಸಚಿವ ಶರಣಬಸಪ್ಪ ದರ್ಶನಾಪುರ 

BJP JDS attempt to Topple Congress Government in Karnataka Says Darshanapur grg
Author
First Published Oct 13, 2023, 1:15 PM IST

ಹೊಸಪೇಟೆ(ಅ.13): ಬಿಜೆಪಿ, ಜೆಡಿಎಸ್‌ನವರು ಮೈತ್ರಿ ಮಾಡಿಕೊಂಡು ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೆಡವಲು ಹೊರಟಿದ್ದಾರೆ. ಶಾಸಕರನ್ನು ಖರೀದಿ ಮಾಡಿ ಸರ್ಕಾರ ಮಾಡೋದು ಸರಿನಾ? ಯಾರ ದುಡ್ಡಿನಿಂದ ಶಾಸಕರನ್ನು ಖರೀದಿ ಮಾಡಲು ಹೊರಟಿದ್ದಾರೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೊಸ ಬಾಂಬ್‌ ಸಿಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ತಾವಾಗಿಯೇ ಅಧಿಕಾರ ಕೊಟ್ಟರೆ ನಡೆಸಲಿ, ಬೇಡ ಎನ್ನಲ್ಲ. ಆದರೆ, ಶಾಸಕರಿಗೆ ಹಣದ ಆಫರ್ ನೀಡಿ, ಸರ್ಕಾರ ಬೀಳಿಸೋದು ಎಷ್ಟರ ಮಟ್ಟಿಗೆ ಸರಿ. ಈ ಹಿಂದೆ 17 ಶಾಸಕರ ರಾಜೀನಾಮೆ ಕೊಡಿಸಿದ್ದರು. ಒಬ್ಬೊಬ್ಬ ಶಾಸಕರಿಗೆ ತಲಾ ₹50 ಕೋಟಿ ಕೊಟ್ಟಿದ್ದರಂತೆ. ಮಾಜಿ ಸಿಎಂ ಯಡಿಯೂರಪ್ಪನವರ ಅಕೌಂಟ್‌ನಿಂದ ಕೊಟ್ಟಿದ್ದರಾ? ಏನೂ ಬಿಜೆಪಿಯವರ ಅಕೌಂಟ್‌ನಿಂದ ಕೊಟ್ಟಿದ್ದರಾ ಎಂದು ಸಚಿವರು ಪ್ರಶ್ನಿಸಿದರು.

ಇಂಡಿಯಾ ಹೆಸರು ಬದಲಾವಣೆ: ಕೇಂದ್ರದ ವಿರುದ್ಧ ಸಚಿವ ದರ್ಶನಾಪೂರ ವಾಗ್ದಾಳಿ..!

ಈ ಹಿಂದೆ ಕಾಂಗ್ರೆಸ್‌, ಜೆಡಿಎಸ್‌ ದೋಸ್ತಿ ಸರ್ಕಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೋಟೆಲ್‌ನಲ್ಲಿ ಕುಳಿತು ಅಧಿಕಾರ ಚಲಾಯಿಸಿದರು. ಸುಧಾಕರ್‌ ಹಾಗೂ ನನಗೆ ನಿಗಮ ಮಂಡಳಿ ಅಧ್ಯಕ್ಷರಾಗಲು ಬಿಡಲಿಲ್ಲ. ದೋಸ್ತಿ ಸರ್ಕಾರ ಪತನಗೊಳ್ಳುವ ಸಮಯದಲ್ಲಿ ವಿದೇಶದಲ್ಲಿದ್ದರು. ಉತ್ತಮ ಸರ್ಕಾರ ಕೊಟ್ಟಾಗ ಜನರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಹೋಟೆಲ್‌ನಲ್ಲಿ ಕುಳಿತು ಸರ್ಕಾರ ನಡೆಸಲು ಆಗುತ್ತದೆಯೇ? ಕುಮಾರಸ್ವಾಮಿಯವರು ಶಾಸಕರ ಕೈಗೂ ಸಿಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಸಮಾಧಾನ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದಲ್ಲಿ ಲಿಂಗಾಯತರಿಗೆ ಅನ್ಯಾಯ ಆಗಿಲ್ಲ. ಸರ್ಕಾರದಲ್ಲಿ ಜಿಲ್ಲಾಧಿಕಾರಿಗಳು, ಎಸ್ಪಿಗಳು ಕೂಡ ಇದ್ದಾರೆ. ಒಂದಿಬ್ಬರಿಗೆ ಅಸಮಾಧಾನ ಇರಬಹುದು. ನಮ್ಮ ನಾಯಕರು ಸರಿಪಡಿಸುತ್ತಾರೆ. ಬಿಜೆಪಿ ಲಿಂಗಾಯತರ ಪಕ್ಷ ಅಂತಾರೆ. ಲಿಂಗಾಯತರಿಗೆ ಬಿಜೆಪಿಯವರು ಏನೂ ಮಾಡಿಲ್ಲ. ಎಲ್ಲ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ರಾಜ್ಯ ಸರ್ಕಾರ ಅದನ್ನು ಮಾಡುತ್ತಿದೆ ಎಂದರು.

ನಾನೂ ಸಿಎಂ ಸ್ಥಾನದ ಆಕಾಂಕ್ಷಿ: ದರ್ಶನಾಪುರ

ಡಿಸಿಎಂ ಡಿ.ಕೆ. ಶಿವಕುಮಾರ ಸಿಎಂ ಆಗ್ತಾರೆ ಎನ್ನುವ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ ಅವರು ದುಡಿದಿದ್ದಾರೆ. ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಅವರು ಆಗಲಿ, ನಾನೂ ಸಿಎಂ ಸ್ಥಾನದ ಆಕಾಂಕ್ಷಿ ಆಗಿರುವೆ. ಏಳು ಬಾರಿ ಎಲೆಕ್ಷನ್‌ಗೆ ಸ್ಪರ್ಧಿಸಿರುವೆ. ಸಿಎಂ ಆಗಲು ಶಾಸಕರಾಗಿರಬೇಕು. ಹಾಗಾಗಿ 135 ಶಾಸಕರು ಕೂಡ ಸಿಎಂ ಸ್ಥಾನಕ್ಕೆ ಅರ್ಹತೆ ಹೊಂದಿದ್ದಾರೆ. ಹೈಕಮಾಂಡ್‌ ಸಿದ್ದರಾಮಯ್ಯನವರನ್ನು ಸಿಎಂ ಎಂದು ನಿಯೋಜನೆ ಮಾಡಿದೆ. ಇವತ್ತಿನ ಪ್ರಕಾರ ಐದು ವರ್ಷ ಸಿಎಂ ಆಗಿರುತ್ತಾರೆ. ನಾಳೆ ಏನಾಗುತ್ತದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ, ಬಹಳಷ್ಟು ಜನರು ಕನಸು ಕಾಣುತ್ತಿದ್ದಾರೆ. ಡಿಸೆಂಬರ್‌, ಜನವರಿಯಲ್ಲಿ ಸರ್ಕಾರ ಮಾಡ್ತಿವಿ ಎಂದು ಹೇಳುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ನವರು ರಾಜ್ಯ ಸರ್ಕಾರ ತಾನಾಗಿಯೇ ಬೀಳುವವರೆಗೆ ಕಾಯಬೇಕು ಎಂದು ಕುಟುಕಿದರು.

ಕರ್ನಾಟಕದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್, ಸಚಿವ ದರ್ಶನಾಪುರ ಹೇಳಿದ್ದಿಷ್ಟು

ರಾಜ್ಯದಲ್ಲಿ ವಿದ್ಯುತ್‌ ಸಮಸ್ಯೆ ಇಲ್ಲ, ಈಗ ಮಳೆಯಾಗಿಲ್ಲ, ಹಾಗಾಗಿ ವಿದ್ಯುತ್‌ ಉತ್ಪಾದನೆಗೆ ತೊಂದರೆಯಾಗಿದೆ. ಈ ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ. ಬೇರೆ ರಾಜ್ಯಗಳಿಂದ ವಿದ್ಯುತ್‌ ಖರೀದಿ ಮಾಡುತ್ತೇವೆ. ಸಮಸ್ಯೆ ಬಗೆಹರಿಸುತ್ತೇವೆ. ಈಗ ಬರ ಇದೆ. ಇರುವ ವ್ಯವಸ್ಥೆಯಲ್ಲಿ ಸರ್ಕಾರ ಎಲ್ಲವನ್ನೂ ನಿಭಾಯಿಸುತ್ತಿದೆ ಎಂದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮವಹಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ₹5000 ಕೋಟಿ ಮೀಸಲಿಟ್ಟಿದ್ದಾರೆ. ಈ ಭಾಗದ ಅಭಿವೃದ್ಧಿಗೆ ನಾವು ಕಟಿಬದ್ಧರಾಗಿದ್ದೇವೆ. ಈ ಹಿಂದೆ ಕಲ್ಯಾಣ ಕರ್ನಾಟಕಕ್ಕೆ370(ಜೆ) ಸ್ಥಾನಮಾನ ನೀಡಿದ್ದೇವೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತಿದೆ. ಮೆಡಿಕಲ್‌ ಸೀಟು ಸಿಗುತ್ತಿದೆ. ಸುಧಾರಣೆ ಕಾಣುತ್ತಿದೆ. ಬೊಮ್ಮಾಯಿ ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ₹3000 ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು, ಕೊಟ್ಟರಾ ಎಂಬುದನ್ನು ಬಿಜೆಪಿಯವರಿಗೆ ಕೇಳಬೇಕು ಎಂದರು.

Follow Us:
Download App:
  • android
  • ios