Asianet Suvarna News Asianet Suvarna News

BJP Janotsava: ಜನೋತ್ಸವ ಕಾರ್ಯಕ್ರಮದಲ್ಲಿ 3 ಲಕ್ಷ ಜನ ಭಾಗಿಯಾಗಗುವ ನಿರೀಕ್ಷೆ

ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದಲ್ಲಿ ನಡೆಯುತ್ತಿರುವ ‘ಜನೋತ್ಸವ ಕಾರ್ಯಕ್ರಮ’ಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಸುಮಾರು ಮೂರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಾರ್ಯಕ್ರಮದ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಉಸ್ತುವಾರಿಯೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ

BJP Janotsava 3 lakh peoples are expected to participate inprogramme doddaballapuru
Author
First Published Sep 7, 2022, 8:26 AM IST

ದೊಡ್ಡಬಳ್ಳಾಪುರ (ಸೆ.7) : ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹೊರವಲಯದಲ್ಲಿ ನಡೆಯುತ್ತಿರುವ ‘ಜನೋತ್ಸವ ಕಾರ್ಯಕ್ರಮ’ಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಸುಮಾರು ಮೂರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಾರ್ಯಕ್ರಮದ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಉಸ್ತುವಾರಿಯೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

BJP Janotsav: ದೊಡ್ಡಬಳ್ಳಾಪುರ ಜನೋತ್ಸವ: 2-3 ಲಕ್ಷ ಜನ ಸೇರಿಸಿ ಭರ್ಜರಿ ಯಶಸ್ಸಿಗೆ ಸಿದ್ಧತೆ

ಮಂಗಳವಾರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ಥತೆಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(BJP National President JP Nadda) ಅವರು ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಕೆಲ ವಿಧಾನಸಭಾ ಕ್ಷೇತ್ರಗಳು, ಬೆಂಗಳೂರು(Bengaluru) ಗ್ರಾಮಾಂತರ, ಕೋಲಾರ(Kolara), ಚಿಕ್ಕಬಳ್ಳಾಪುರ(Chikkaballapura), ತುಮಕೂರು(Tumakuru) ಜಿಲ್ಲೆಯ ಮಧುಗಿರಿ ಭಾಗದ ಕೆಲ ಕ್ಷೇತ್ರಗಳನ್ನೂ ಒಳಗೊಂಡಂತೆ 19ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಂದ ಜನರು ಹಾಗೂ ಪಕ್ಷದ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಇದು ವ್ಯಕ್ತಿ ಉತ್ಸವ ಅಲ್ಲ. ಪಕ್ಷದ ಉತ್ಸವವೂ ಅಲ್ಲ. ಜನಪರ ಆಡಳಿತದ ಸಂಭ್ರಮ. ಜನರಿಂದ ಜನರಿಗಾಗಿ ಜನಪರ ಕೆಲಸಗಳ ಬಗ್ಗೆ ನಡೆಯುವ ಸಮಾವೇಶವಾಗಿದೆ. ಅತ್ಯಂತ ಪರಿಣಾಮಕಾರಿ ಹಾಗೂ ವೈಜ್ಞಾನಿಕವಾಗಿ ಅಭಿವೃದ್ಧಿ ಕಾರ‍್ಯಗಳು ಪಕ್ಷದ ಆಡಳಿತಾವಧಿಯಲ್ಲಿ ನಡೆದಿವೆ. ಪ್ರಣಾಳಿಕೆಯ ಭಾಗವಾಗಿ ಜಾರಿಗೆ ಬಂದ ಯೋಜನೆಗಳ ಕುರಿತು ಸಮಾವೇಶ ಬೆಳಕು ಚೆಲ್ಲಲಿದೆ. ಕೋವಿಡ್‌ ಸಂಕಷ್ಟವನ್ನು ಸಮರ್ಥವಾಗಿ ನಿರ್ವಹಿಸಿದ ಸರ್ಕಾರ ಕೈಗಾರಿಕೆ, ಉದ್ಯಮಶೀಲತೆ ವೃದ್ಧಿಗೆ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ನವೋದ್ಯಮಗಳಲ್ಲಿ ಮುಂಚೂಣಿಯಲ್ಲಿದೆ. ಈ ಎಲ್ಲ ವಿಚಾರಗಳು ಜನೋತ್ಸವದಲ್ಲಿ ಚರ್ಚೆಯಾಗಲಿವೆ. ಸರ್ಕಾರದ ಮೂರು ವರ್ಷಗಳ ಸಾಧನೆಯ ಅನಾವರಣ ಈ ಸಮಾವೇಶದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಚುನಾವಣೆ ದಿಕ್ಸೂಚಿ ಕಾರ್ಯಕ್ರಮ:

ದೊಡ್ಡಬಳ್ಳಾಪುರ(Doddaballapura)ದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಮುಂಬರುವ 2023ರ ವಿಧಾನಸಭಾ ಚುನಾವಣೆಯ ದಿಕ್ಸೂಚಿಯ ಆರಂಭ ಎಂದು ಇದೇ ವೇಳೆ ಸಚಿವ ಸುಧಾಕರ್‌ ಅಭಿಪ್ರಾಯಪಟ್ಟರು.ಹಳೇ ಮೈಸೂರು ಭಾಗದಲ್ಲಿ ಪಕ್ಷದ ಶಕ್ತಿ ಏನು ಎಂದು ಪ್ರಶ್ನಿಸುವವರಿಗೆ ಉತ್ತರ ಸಿಗಲಿದೆ. ಡಬಲ್‌ ಇಂಜಿನ್‌ ಸರ್ಕಾರ ಜನರಿಗೆ ಡಬಲ್‌ ಧಮಾಕಗಳನ್ನು ನೀಡಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ರಾಜ್ಯ ಅತ್ಯಂತ ಪ್ರಶಸ್ತ ಬಂಡವಾಳ ಹೂಡಿಕೆ ತಾಣವಾಗಿ ಮಾರ್ಪಟ್ಟಿದೆ. ಉದ್ಯೋಗ ಸೃಷ್ಠಿ, ಅವಕಾಶಗಳ ಹೆಚ್ಚಳದಲ್ಲಿ ಗಣನೀಯ ಕೆಲಸ ಮಾಡಿದ್ದು, 1 ವರ್ಷದ ರಿಪೋರ್ಚ್‌ ಕಾರ್ಡ್‌ನ್ನು ಸಮಾವೇಶದಲ್ಲಿ ಜನರ ಮುಂದಿಡಲಾಗುವುದು ಎಂದು ಹೇಳಿದರು.

ಐತಿಹಾಸಿಕ ಕ್ಷಣಕ್ಕೆ ಸಾಕ್ಷೀಭೂತರಾಗಿ: ಸುಧಾಕರ್‌ ಮನವಿ

ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುತ್ತಿರುವ ಈ ಸಮಾವೇಶಕ್ಕೆ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷೀಭೂತರಾಗುವಂತೆ ಸಚಿವ ಡಾ.ಕೆ.ಸುಧಾಕರ್‌ ಮನವಿ ಮಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆ, ಚಿಕ್ಕಬಳ್ಳಾಪುರ ತಾಲೂಕಿನ ಮಂಚೇನಹಳ್ಳಿ ಹೋಬಳಿ ಹಾಗೂ ತಿಪ್ಪೇನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸೋಮವಾರ ನಡೆದ ‘ಜನೋತ್ಸವ’ ಸಮಾವೇಶದ ಪೂರ್ವಭಾವಿ ಸಭೆಗಳಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಸೆಪ್ಟೆಂಬರ್‌ 8ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಸಮಾವೇಶದ ನಿಮಿತ್ತ ಪೂರ್ವಭಾವಿ ಸಭೆಗಳಿಗೆ ಹೋದಲ್ಲೆಲ್ಲಾ ಜನರು ಅಭೂತಪೂರ್ವ ಬೆಂಬಲ ತೋರುತ್ತಿದ್ದಾರೆ. ಜನೋತ್ಸವ(Janotsav) - ಸಾರ್ಥಕ ಸೇವೆ ಮತ್ತು ಸಬಲೀಕರಣ ಸಮಾವೇಶವಾಗಿದೆ ಎಂದು ಅವರು ತಿಳಿಸಿದರು. ಅಭಿವೃದ್ಧಿಯ ಸಂಕಲ್ಪ ಸಾಧನೆಯ ಹಾದಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ(BJP Govt) ಯಶಸ್ವೀ ಮೂರು ವರ್ಷ ಪೂರೈಸಿದೆ ಹಾಗೂ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ(Basavaraj Bommai) ಮುಖ್ಯಮಂತ್ರಿಗಳಾಗಿ ಒಂದು ವರ್ಷ ಪೂರೈಸಿದ್ದಾರೆ. ಈ ಹಿನ್ನಲೆಯಲ್ಲಿ ಐತಿಹಾಸಿಕ ಸಮಾವೇಶ ನಡೆಯುತ್ತಿದೆ ಎಂದರು. ಸ್ಥಳೀಯ ಮುಖಂಡರು ಹಾಗೂ ಕಾರ‍್ಯಕರ್ತರು ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಮುಖಂಡರ ಕಷ್ಟೋತ್ಸವಕ್ಕೆ ಕನಿಕರ:

ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನೋತ್ಸವ ಕಾರ್ಯಕ್ರಮವನ್ನು ಭ್ರಷ್ಟೋತ್ಸವ ಎಂದು ಟೀಕಿಸಿರುವ ಕಾಂಗ್ರೆಸ್‌(Congress) ಪಕ್ಷದ ಮುಖಂಡರ ಕಷ್ಟೋತ್ಸವ ನೋಡಿ ಕನಿಕರವಾಗುತ್ತಿದೆ ಎಂದು ಸಚಿವ ಡಾ.ಕೆ.ಸುಧಾಕರ್‌(Dr.K.Sudhakar) ಲೇವಡಿ ಮಾಡಿದ್ದಾರೆ. ಜನೋತ್ಸವ ಪೂರ್ವಭಾವಿಯಾಗಿ ಸಮಾವೇಶ ಸ್ಥಳದಲ್ಲಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರದಲ್ಲಿದ್ದ 2013ರಿಂದ 2018ರವರೆಗೆ ರಾಜ್ಯದ ಯಾವ ಇಲಾಖೆ ಭ್ರಷ್ಟಾಚಾರದಿಂದ ಮುಕ್ತವಾಗಿತ್ತು? ಮಕ್ಕಳ ಬಿಸಿಯೂಟದಿಂದ ಹಿಡಿದು ಹಾಸಿಗೆ, ದಿಂಬಿನವರೆಗೂ ಭ್ರಷ್ಟಾಚಾರ ಬೆಳೆದಿತ್ತು. ಶುದ್ಧ ಕುಡಿಯುವ ನೀರಿನ ಘಟಕ, ಅರ್ಕಾವತಿ ಬಡಾವಣೆ ಸೇರಿದಂತೆ ಅನೇಕ ಭೂ ಅಕ್ರಮಗಳ ಸಾಲೇ ಇದೆ. ಲೋಕಾಯುಕ್ತ ಮುಚ್ಚಿದ ಕಾಂಗ್ರೆಸ್‌, ಎಸಿಬಿಯನ್ನೂ ದುರ್ಬಲಗೊಳಿಸಿದ್ದು ಜನ ಇನ್ನೂ ಮರೆತಿಲ್ಲ. ಹೀಗಿರುವಾಗ ಯಾವ ನೈತಿಕತೆಯಿಂದ ಬಿಜೆಪಿಯನ್ನು ಪ್ರಶ್ನಿಸುತ್ತೀರಿ ಎಂದು ತಿರುಗೇಟು ನೀಡಿದರು.

ಭ್ರಷ್ಟ ಬಿಜೆಪಿ ಸರ್ಕಾ​ರಕ್ಕೆ ಜನೋತ್ಸವ ಆಚರಿಸುವ ನೈತಿಕತೆ ಇಲ್ಲ: ಸಿದ್ದು

3 ಲಕ್ಷ ಜನರಿಗೆ ತಿಂಡಿ-ಊಟ

ಬೃಹತ್‌ ವೇದಿಕೆ ಸಮಾವೇಶದಲ್ಲಿ ಸುಮಾರು 3 ಲಕ್ಷ ಜನರಿಗೆ ಊಟ-ತಿಂಡಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 3 ಲಕ್ಷ ಮಂದಿಗೆ ಊಟ, ತಿಂಡಿ ಸಿದ್ದಪಡಿಸಲು ಎರಡು ಕಂಪನಿಗಳಿಗೆ ಕ್ಯಾಟರಿಂಗ್‌ ಮಾಡುವರಿಗೆ ಗುತ್ತಿಗೆ ನೀಡಲಾಗಿದೆ ಎಂದು ಸಚಿವ ಸುಧಾಕರ್‌ ಮಾಹಿತಿ ನೀಡಿದರು.

ಬೃಹತ್‌ ವೇದಿಕೆಯಲ್ಲಿ ರಾಜ್ಯದ ಸಾಂಸ್ಕೃತಿಕ, ಸಾಮಾಜಿಕ ಚಿಂತನೆಗಳು ಅನಾವರಣಗೊಳ್ಳಲಿವೆ. ವೇದಿಕೆ, ಸಭಾಂಗಣ, ಅಡುಗೆ ಕೋಣೆ, ಊಟದ ಸಭಾಂಗಣ, ಭೋಜನ ವ್ಯವಸ್ಥೆ, ಮಾಧ್ಯಮ ಕೇಂದ್ರ, ತುರ್ತು ಸೇವಾ ಕೇಂದ್ರ, ಆಂಬ್ಯುಲೆನ್ಸ್‌ ವ್ಯವಸ್ಥೆ, ಪಾರ್ಕಿಂಗ್‌ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ವೇದಿಕೆ ಮುಂಭಾಗದಲ್ಲಿ ಒಂದೂವರೆ ಲಕ್ಷ ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಮಾವೇಶ ಸ್ಥಳಕ್ಕೆ ಪ್ರವೇಶಿಸಲು, ನಿರ್ಗಮಿಸಲು ಪ್ರತ್ಯೇಕ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಹಲವು ಕೃಷಿ ಜಮೀನು, ಖಾಲಿ ಜಾಗಗಳಲ್ಲಿ ವಾಹನ ನಿಲುಗಡೆ ಅವಕಾಶ ಕಲ್ಪಿಸಲಾಗಿದೆ. ವೇದಿಕೆ ನಿರ್ಮಾಣದಿಂದ ಹಿಡಿದು ಎಲ್ಲವನ್ನೂ ಸುಸಜ್ಜಿತವಾಗಿ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಜನೋತ್ಸವಕ್ಕೆ 4,500ಕ್ಕೂ ಹೆಚ್ಚು ಬಸ್ಸು

ದೊಡ್ಡಬಳ್ಳಾಪುರದ ಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನರಿಗಾಗಿ ಸುಮಾರು 4500ಕ್ಕೂ ಹೆಚ್ಚು ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ಬಿಜೆಪಿ ಮುಖಂಡರು ಬಸ್ಸುಗಳನ್ನು ಮುಂಗಡ ಕಾದಿರಿಸಿದ್ದಾರೆ. ಅಲ್ಲದೇ ಕಾರು, ಬೈಕ್‌ಗಳಲ್ಲಿ ಕೂಡ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಜನೋತ್ಸವದಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆ.

  • ಕೋಲಾರ, ಚಿಕ್ಕಬಳ್ಳಾಪುರ, ಗ್ರಾಮಾಂತರದಲ್ಲಿ ಬಿಜೆಪಿ ವಿಕ್ರಮ
  •  2023ರ ಚುನಾವಣೆಗಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ: ಸುಧಾಕರ್‌ ವಿಶ್ವಾಸ
  •  ಜನೋತ್ಸವಕ್ಕೆ ಮುನಿರತ್ನ, ಎಂಟಿಬಿ, ಪಕ್ಷದ ನಾಯಕರು, ಕಾರ‍್ಯಕರ್ತರ ಶ್ರಮ

ಪಕ್ಷದ ಬಲ ಕಡಿಮೆ ಇರುವ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಪಕ್ಷ ಸಾಧನೆ ಮಾಡಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರದ ಜನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನೋತ್ಸವದಿಂದ ನಮ್ಮ ಪಕ್ಷದ ಶಕ್ತಿ ಹೆಚ್ಚಾಗಲಿದೆ ಎಂದರು.

ಪ್ರಜಾಪ್ರಭುತ್ವದ ಮೂಲ ಅರ್ಥವೇ ಜನರಿಂದ ಜನರಿಗಾಗಿ ಜನರಿಗಾಗಿ ಸರ್ಕಾರ. ಅದೇ ಅರ್ಥದಲ್ಲಿ ಜನರೇ ಸೇರಿ ಆಚರಿಸುವ ಮೂಲಕ ಆಶಯವನ್ನು ಈ ಜನೋತ್ಸವ ಹೊಂದಿದೆ. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವನಾಗಿರುವುದರಿಂದ ಜನೋತ್ಸವ ಕಾರ್ಯಕ್ರಮದ ಹೆಚ್ಚು ಜವಾಬ್ದಾರಿ ನೋಡಿಕೊಳ್ಳುತ್ತಿದ್ದೇನೆ. ಅದೇ ರೀತಿ ಕೋಲಾರದ ಉಸ್ತುವಾರಿ ಸಚಿವರಾದ ಮುನಿರತ್ನ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂಟಿಬಿ ನಾಗರಾಜ್‌ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಪಕ್ಷದ ಹಿರಿಯ ನಾಯಕರು ಕೂಡ ಪಕ್ಷದ ಸಂಘಟನೆಗಾಗಿ ಜನೋತ್ಸವ ಯಶಸ್ವಿಗೆ ಶ್ರಮಿಸುತ್ತಿದ್ದಾರೆ ಎಂದರು.

ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇರುವುದರಿಂದ ಪಕ್ಷ ಬಲವರ್ಧನೆಗೆ ಎಲ್ಲಾ ನಾಯಕರು ಶ್ರಮಿಸಲಾಗುತ್ತಿದೆ ಎಂದರು. ಒಂದು ಡೊಡ್ಡ ಸಾಮೂಹದ ಸಂಘಟನೆಯ ಕಾರ್ಯಕ್ರಮ ಜನೋತ್ಸವ ಆಗಲಿದೆಯೆಂದರು. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 19 ಶಾಸಕ ಸ್ಥಾನಗಳ ಪೈಕಿ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಬಿಜೆಪಿ ಶಾಸಕನಾಗಿ ನಾನು ಇರುವೆ. ಮುಂದಿನ ಚುನಾವಣೆಯಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ. ಆ ಮೂಲಕ ಪಕ್ಷ ಸಂಘಟನೆಗಾಗಿ ಜನೋತ್ಸವ ನಮಗೆ ವೇದಿಕೆ ಕಲ್ಪಿಸಲಿದೆ ಎಂದರು.

ರಾಜ್ಯ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ನಿಶ್ಚಿತ: ಸಚಿವ ಸುಧಾಕರ್‌

ಜಿಲ್ಲೆಯಾದ್ಯಂತ ಬಿರುಸಿನ ಸಂಚಾರ:

ಜನೋತ್ಸವ ಕಾರ್ಯಕ್ರಮವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಅದರಲ್ಲೂ 2023ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ತಂದು ಕೊಡುವ ಪಣ ತೊಟ್ಟಿರುವ ಆರೋಗ್ಯ ಸಚಿವ ಸುಧಾಕರ್‌ ಮಂಗಳವಾರ ಜಿಲ್ಲೆಯಲ್ಲಿ ಬಿರುಸಿನ ಸಂಚಾರ ನಡೆಸಿ ಅದರಲ್ಲೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪ್ರತಿ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಖಂಡರ ಸಭೆ ನಡೆಸಿ ಜನೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮುಖಂಡರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಮುಖಂಡರಾದ ಆವುಲುಕೊಂಡರಾಯಪ್ಪ, ನಾರಾಯಣಸ್ವಾಮಿ, ವೆಂಕಟೇಶ್‌, ಸುಬ್ಬಾರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು

Follow Us:
Download App:
  • android
  • ios