ರಾಜ್ಯ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ನಿಶ್ಚಿತ: ಸಚಿವ ಸುಧಾಕರ್
ಜನೋತ್ಸವ ನಮ್ಮ ಉತ್ಸಾಹ ಹೆಚ್ಚಿಸುವ ಉತ್ಸವವಾಗಲಿದೆ. ಆ ಮೂಲಕ ಪಕ್ಷದ ಸಂಘಟನೆಗೆ ಅನುಕೂಲವಾಗಲಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟಕ್ಷೇತ್ರದಿಂದ ಬಿಜೆಪಿ ಶಾಸಕರು ಆಯ್ಕೆಯಾಗುವಂತೆ ಪಕ್ಷವನ್ನು ಸಂಘಟಿಸಬೇಕು ಎಂದು ಕರೆ ನೀಡಿದ ಸುಧಾಕರ್
ಚಿಕ್ಕಬಳ್ಳಾಪುರ(ಸೆ.04): ಸೆ.8ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಜನೋತ್ಸವ ಕಾರ್ಯಕ್ರಮದಿಂದ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಲಿದ್ದು, ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭವಿಷ್ಯ ನುಡಿದರು. ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟದಲ್ಲಿ ಶನಿವಾರ ಆಯೋಜಿಸಿದ್ದ ಜನೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನೋತ್ಸವ ನಮ್ಮ ಉತ್ಸಾಹ ಹೆಚ್ಚಿಸುವ ಉತ್ಸವವಾಗಲಿದೆ. ಆ ಮೂಲಕ ಪಕ್ಷದ ಸಂಘಟನೆಗೆ ಅನುಕೂಲವಾಗಲಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟಕ್ಷೇತ್ರದಿಂದ ಬಿಜೆಪಿ ಶಾಸಕರು ಆಯ್ಕೆಯಾಗುವಂತೆ ಪಕ್ಷವನ್ನು ಸಂಘಟಿಸಬೇಕು ಎಂದು ಕರೆ ನೀಡಿದರು.
ಒಂದು ಅವಕಾಶ ಬಿಜೆಪಿಗೆ ಕೊಡಿ
ಚಿಂತಾಮಣಿ, ಶಿಡ್ಲಘಟ್ಟವಿಧಾನಸಭಾ ಕ್ಷೇತ್ರದಾದ್ಯಂತ ನಾನೂ ಪ್ರವಾಸ ಮಾಡುತ್ತೇನೆ. ಜೊತೆಗೆ ಪಕ್ಷದ ನಾಯಕರೂ ಪ್ರವಾಸ ಮಾಡಲಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ನೋಡಿದ್ದೀರಿ ನಮಗೂ ಒಂದು ಅವಕಾಶ ನೀಡಿ ಎಂದು ಮತದಾರರನ್ನು ಕೇಳೋಣ. ಒಂದು ಅವಕಾಶದ ಮೂಲಕ ಕ್ಷೇತ್ರದಲ್ಲಿ ಕಮಲ ಅರಳಿಸಲು ಶ್ರಮಿಸೋಣ ಎಂದರು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರುವುದು ನೂರಕ್ಕೆ ನೂರುರಷ್ಟುಸತ್ಯ, ಅಲ್ಲದೆ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿಯವರು ಪ್ರಧಾನಿಯಾಗುವುದು ನಿಶ್ಚಿತ ಎಂದರು.
ಗೌರಿಬಿದನೂರು ಕ್ಷೇತ್ರದಲ್ಲಿ ಕಮಲ ಅರಳಿಸಲು ಶ್ರಮಿಸಿ: ಸಚಿವ ಡಾ.ಕೆ.ಸುಧಾಕರ್
ಚಿಂತಾಮಣಿಯಲ್ಲಿ ಬಿಜೆಪಿ ಅಲೆ
ದೇಶದಾದ್ಯಂತ ಮೋದಿ ಅಲೆ ಇರುವ ರೀತಿಯಲ್ಲಿಯೇ ಚಿಂತಾಮಣಿಯಲ್ಲಿಯೂ ಬಿಜೆಪಿ ಪರ ಅಲೆ ಬರಲಿದ್ದು, ಮುಂದಿನ ಆರು ತಿಂಗಳಲ್ಲಿ ಚಿಂತಾಮಣಿಯಲ್ಲಿ ಬಿಜೆಪಿ ಬಲಿಷ್ಠ ಪಕ್ಷವಾಗಿ ಹೊರಹುಮ್ಮಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯ ಪಟ್ಟರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ, ಮಾಜಿ ಶಾಸಕ ರಾಜಣ್ಣ, ಮಂಡಳ ಅಧ್ಯಕ್ಷರಾದ ಸುರೇಂದ್ರಗೌಡ ಮತ್ತು ನಂದೀಶ, ಮುರಳೀರ್ಧ, ರಘು, ನಾರಾಯಣಸ್ವಾಮಿ, ದೇವರಾಜ, ರಂಜಿತ್ ಕುರ್ಮಾ, ವೆಂಕಟೇಶ, ಆಂಜನೇಯಗೌಡ, ಶ್ರೀರಾಮರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.