ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಎರಡನೇ ಟ್ರೈಲರ್ ಸೆ.8ಕ್ಕೆ ಬಿಡುಗಡೆ: ಸಚಿವ ಸುಧಾಕರ್
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರಗಳ ಸಂಕಲ್ಪ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಎರಡನೇ ಟ್ರೈಲರ್ ಸೆ.8ಕ್ಕೆ ಬಿಡುಗಡೆ. ಜನೋತ್ಸವ ಪೂರ್ವಭಾವಿ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಮತ
ವರದಿ: ರವಿಕುಮಾರ್, ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕಬಳ್ಳಾಪುರ (ಸೆ.3): ಸ್ವಾತಂತ್ರ್ಯಾ ನಂತರ ಆಡಳಿತ ನಡೆಸಿದ ಎಲ್ಲ ಸರ್ಕಾರಗಳೂ ಬಾಗೇಪಲ್ಲಿ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರ ಮಾತ್ರ ಕ್ಷೇತ್ರಕ್ಕೆ ಎಚ್ಎನ್ ವ್ಯಾಲಿ, ಎತ್ತಿನಹೊಳೆ ಸಹಿತ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಪಾದಿಸಿದರು. ಸೆ.8ರಂದು ನಡೆಯಲಿರುವ ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಾಗೇಪಲ್ಲಿ ಶಾಸಕರು ಹೇಳಿದ್ದಾರೆ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯ ಅಂತಿಮ ಸಂಪುಟ ಸಭೆಯಲ್ಲಿ ಎಚ್ಎನ್ ವ್ಯಾಲಿ ಘೋಷಣೆಯಾಗಿದೆ ಎಂದು, ಆದರೆ ಕೇವಲ ತೀರ್ಮಾನ ಮಾಡಿದರೆ, ಅನುಷ್ಠಾನಕ್ಕೆ ಅನುದಾನ ನೀಡುವವರು ಯಾರು ? ಸುಬ್ಬಾರೆಡ್ಡಿಯವರಾ ಎಂದು ಪ್ರಶ್ನಿಸಿದರು. ಸಮ್ಮಿಶ್ರ ಸರ್ಕಾರದ ಅಂತಿಮ ಸಂಪುಟ ಸಭೆಯಲ್ಲಿ ಯೋಜನೆ ಕುರಿತು ತೀರ್ಮಾನವಾದರೂ ಅದಕ್ಕೆ 60 ಕೋಟಿ ರೂಪಾಯಿ ಅನುದಾನ ನೀಡಿದ್ದು ಬಿಜೆಪಿ ಸರ್ಕಾರ. ಹಿಂದಿನ ಯಾವ ಪಕ್ಷದ ಸರ್ಕಾರವೂ ಬಾಗೇಪಲ್ಲಿ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಈಗ ನಮ್ಮಬಿಜೆಪಿ ಸರ್ಕಾರ ಹೆಚ್ಚಿನ ಒತ್ತು ನೀಡಿ, ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ ಎಂದು ಹೇಳಿದರು.
ಇದು ಕೇವಲ ಟ್ರೇಲರ್ ಮಾತ್ರ!
ಶುಕ್ರವಾರ ಮಂಗಳೂರಿನಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದಾರೆ. ಈ ಜನ ಇಡೀ ರಾಜ್ಯದಿಂದ ಬಂದ ಜನರಲ್ಲ, ಬದಲಿಗೆ ಕೇವಲ ಒಂದು ಜಿಲ್ಲೆಯಿಂದ ಬಂದ ಜನ ಮಾತ್ರ. ಕಾಂಗ್ರೆಸ್ ಸ್ನೇಹಿತರು ಕೇಳುತ್ತಾರೆ ಬಿಜೆಪಿ ಎಲ್ಲಿದೆ ಎಂದು, ಅವರಿಗೆ ಕಣ್ಣಿದ್ದರೆ ನಿನ್ನೆ ಕಾರ್ಯಕ್ರಮ ನೋಡಿದ್ದರೆ ಬಿಜೆಪಿ ಎಲ್ಲಿದೆ ಎಂಬುದು ಕಾಣುತ್ತಿತ್ತು ಎಂದು ಸಚಿವರು ಲೇವಡಿ ಮಾಡಿದರು.
ಮಂಗಳೂರಿನಲ್ಲಿ ನೆನ್ನೆ ನಡೆದ ಕಾರ್ಯಕ್ರಮ ಕೇವಲ ಟ್ರೇಲರ್ ಮಾತ್ರ. ಮತ್ತೊಂದು ಟ್ರೇಲರ್ ಸೆ.8 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬಾಗೇಪಲ್ಲಿ ಕ್ಷೇತ್ರ ಒಂದರಿಂದಲೇ 20 ಸಾವಿರ ಮಂದಿ ಬರಬೇಕು, ಈಗಾಗಲೇ ಹಬ್ಬಗಳೆಲ್ಲ ಮುಗಿದಿವೆ. ಹಾಗಾಗಿ ಹೆಚ್ಚು ಜನ ಬಂದು ಬಿಜೆಪಿ ಮತ್ತು ಸರ್ಕಾರದ ಜೊತೆ ಇದ್ದೇವೆ ಎಂಬುದನ್ನು ತೋರಿಸಿಕೊಡಬೇಕು ಎಂದು ಕೋರಿದರು.
ಎಲ್ಲ ವರ್ಗಕ್ಕೂ ಯೋಜನೆಗಳು
ಡಬಲ್ ಇಂಜಿನ್ ಸರ್ಕಾರಗಳು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ರೈತರಿಗೆ ಸೇರಿದಂತೆ ಪ್ರತಿಯೊಂದು ವರ್ಗದ ಜನರಿಗೂ ಒಂದಲ್ಲ ಒಂದು ಕಾರ್ಯಕ್ರಮ ನೀಡಿವೆ. ದೇಶವನ್ನು ಅತ್ಯಂತ ಸಮೃದ್ಧಿಯಾಗಿ ಬೆಳೆಸುವ ಪ್ರಯತ್ನ ಪ್ರಧಾನಿ ಮೋದಿಜೀ ಅವರ ನಾಯಕತ್ವದಲ್ಲಿ ಆಗುತ್ತಿದೆ. ಇಡೀ ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ನಾಯಕ ನರೇಂದ್ರ ಮೋದಿ ಎಂದು ಈಗಾಗಲೇ ಸಾಬೀತಾಗಿದೆ. ಇಂತಹ ನಾಯಕರನ್ನು ಹೊಂದಿರುವ ಪಕ್ಷ ಬಿಜೆಪಿ ಎಂದು ಗರ್ವದಿಂದ ಹೇಳಬಹುದಾಗಿದೆ ಎಂದರು.
ಬಾಗೇಪಲ್ಲಿಯಲ್ಲಿ ಕಮಲ ಅರಳಬೇಕು
2023ರ ವಿಧಾನ ಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾಗಬೇಕು. ಇದಕ್ಕೆ ಸೆ.8 ರಂದು ನಡೆಯಲಿರುವ ಜನೋತ್ಸವ ಕಾರ್ಯಕ್ರಮದಿಂದಲೇ ಸಂದೇಶ ರವಾನೆಯಾಗಬೇಕು. ಹಿಂದೆ ಹಲವು ಸರ್ಕಾರಗಳಿದ್ದವು ಎಚ್ಎನ್ ವ್ಯಾಲಿಯಿಂದ ಹನಿ ನೀರು ನೀಡಲಿಲ್ಲ, ಆದರೆ ಬಿಜೆಪಿ ಸರ್ಕಾರದಿಂದ ಎಚ್ಎನ್ ವ್ಯಾಲಿ ನೀರು ಜಿಲ್ಲೆಗೆ ಬರಲಿದ್ದು, ಶೀಘ್ರದಲ್ಲಿಯೇ ಎತ್ತಿನಹೊಳೆ ನೀರೂ ಬಾಗೇಪಲ್ಲಿಗೆ ಬರಲಿದೆ ಎಂದು ಸಚಿವರು ಭರವಸೆ ನೀಡಿದರು.
ಕೈಗಾರಿಕೆಗಳ ಸ್ಥಾಪನೆ
ಬಾಗೇಪಲ್ಲಿ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದೆ. ಇಲ್ಲಿ ಯಾವುದೇ ಕೈಗಾರಿಕೆಗಳಿಲ್ಲದ ಕಾರಣ ಯುವಕರು ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗುವಂತಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ಉದ್ಯೋಗವಕಾಶಗಳನ್ನು ಕಲ್ಪಿಸಲಾಗುವುದು. ಕೈಗಾರಿಕೆಗಳಿಗಾಗಿ ಭೂಸ್ವಾಧಿನ ಪ್ರಕ್ರಿಯೆಗೆ ಇದ್ದ ತಾಂತ್ರಿಕ ತೊಂದರೆಗಳನ್ನು ಶೀಘ್ರವೇ ಬಗೆಹರಿಸಿ, ಕೈಗಾರಿಕೆಗಳ ಸ್ಥಾಪನೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಬಾಗೇಪಲ್ಲಿ ಕ್ಷೇತ್ರಕ್ಕೆ ಶಾಶ್ವತ ನೀರಾವರಿ, ಕೈಗಾರಿಕೆಗಳ ಸ್ಥಾಪನೆ ಎಲ್ಲವೂ ಆಗಬೇಕಿದ್ದರೆ ಅದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಹಾಗಾಗಿ ಪಕ್ಷದ ಮುಖಂಡರು ಪ್ರತಿ ಗ್ರಾಪಂಗೆ ಭೇಟಿ ನೀಡಿ, ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಸಂಘಟನೆ ಮಾಡಬೇಕು. ಆ ಮೂಲಕ ಪಕ್ಷ ಬಲಿಷ್ಠವಾಗಲು ಸಹಕಾರ ನೀಡಬೇಕು ಎಂದರು.
ರೈತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿದ ಸರ್ಕಾರ
ದೇಶದಲ್ಲಿ ಪ್ರಥಮ ಬಾರಿಗೆ ರೈತರಿಗೆ ವಾರ್ಷಿಕ ಧನಸಹಾಯ ನೀಡಿದ ಏಕೈಕ ಸರ್ಕಾರ ಬಿಜೆಪಿ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ ಏಕೈಕ ಸರ್ಕಾರ, ಮಹಿಳೆಯರ ಆರ್ಥಿಕ ಚೈತನ್ಯಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸಮೃದ್ಧಿ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ಮಹಿಳೆಯರಿಗೆ ಧನ ಸಹಾಯ ಮಾಡುವ ಜೊತೆಗೆ ಅವರ ಸ್ವಾವಲಂಬಿ ಜೀವನಕ್ಕಾಗಿ ವಿಶೇಷ ತರಬೇತಿ ನೀಡಿ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ಯುವಕರನ್ನು ಬಡಿದೆಬ್ಬಿಸುವ ಕೆಲಸ ಮಾಡೋಣ
ಜಿಲ್ಲೆಯ ಪ್ರತಿ ಗ್ರಾಮದಲ್ಲಿಯೂ ಸ್ವಾಮಿ ವಿವೇಕಾನಂದರ ಸಂಘ ಸ್ಥಾಪನೆಯಾಗಬೇಕು. ಯುವಕರಿಗೆ ಸ್ಪೂರ್ತಿಯಾದವರು ಸ್ವಾಮಿ ವಿವೇಕಾನಂದರು. ಅವರು ಹೇಳಿದಂತೆ ಏಳಿ, ಏದ್ದೇಳಿ ಎಂಬ ಮಾತನ್ನು ಈಗ ಅನುಷ್ಠಾನ ಮಾಡುವ ಕಾಲ ಕೂಡಿಬಂದಿದೆ. ಪ್ರತಿ ಗ್ರಾಮದ ಯುವಕರನ್ನು ಈಗ ಬಡಿದೆಬ್ಬಿಸಬೇಕು. ಇದಕ್ಕೆ ಯುವಕರು ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಬಿಜೆಪಿ ಜನೋತ್ಸವದ ದಿನ ಕಾಂಗ್ರೆಸ್‌ನಿಂದ ಭ್ರಷ್ಟೋತ್ಸವ: ಡಿಕೆಶಿ
ಪ್ರತಿ ಭೂತಿನಲ್ಲಿ ಬಲಿಷ್ಠವಾಗಿ ಪಕ್ಷ ಸಂಘಟನೆ ಮಾಡಬೇಕು. ನಾನು ಸಚಿವನಾಗಿದ್ದರೂ ನನ್ನ ಭೂತಿನಲ್ಲಿ ಹೆಚ್ಚು ಮತ ತಂದರೆ ಮಾತ್ರ ನಾನು ನಾಯಕನಾಗಲು ಸಾಧ್ಯ. ಅದೇ ರೀತಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ, ಗೃಹ ಸಚಿವರಾದ ಅಮಿತ್ ಶಾ, ಪ್ರಧಾನಿ ಮೋದಿ ಜೀ ಅವರೂ ಕೂಡ ಅವರವರ ಭೂತಿಗೆ ಮಾನ್ಯತೆ ನೀಡಿದ್ದಾರೆ. ಹಾಗಾಗಿಯೇ ಅವರು ಆ ಮಟ್ಟಕ್ಕೆ ಬೆಳೆದು ನಾಯಕರಾಗಿದ್ದಾರೆ ಎಂಬುದನ್ನು ಅರಿಯಬೇಕು ಎಂದರು.
ಜನೋತ್ಸವಕ್ಕೆ ಕೋಲಾರ ಜಿಲ್ಲೆಯಿಂದ 200 ಬಸ್: ಸಚಿವ ಮುನಿರತ್ನ
ಪ್ರತಿ ಭೂತಿನ ಮುಖ್ಯಸ್ಥರೂ ಅವರವರ ಭೂತಿನಲ್ಲಿ ಸಂಘಟನೆ ಮಾಡಿದರೆ, ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷ ಬಲವರ್ಧನೆಯಾಗಲಿದೆ. ಸೆ.8ರಂದು ಬೆಳಗ್ಗೆ 11 ಗಂಟೆಗೆ ಎಲ್ಲರೂ ದೊಡ್ಡಬಳ್ಳಾಪುರ ತಲುಪಬೇಕು. ರಾಷ್ಟ್ರೀಯ ಅಧ್ಯಕ್ಷರು, ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಕಾರ್ಯಕ್ರಮ ಯಶಸ್ವಿ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂಬ ಸಂದೇಶವನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾರಬೇಕಿದೆ ಎಂದು ಸಚಿವರು ಹೇಳಿದರು.