ಕಾಂಗ್ರೆಸ್ ಪಕ್ಷದಂತೆ ನಿಮಗೆ ಇಲ್ಲಿ ನೋವು ಇರುವುದಿಲ್ಲ. ಇಲ್ಲಿ ನಿಮಗೆ ಆನಂದ ಸಿಗಲಿದೆ. ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಗಳಿಸಲು ಹೋರಾಡುವ ಪಕ್ಷ. ಬಿಜೆಪಿ ದೇಶವನ್ನು ಉಳಿಸಲು ಕಾರ್ಯ ಮಾಡುವ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರು (ಫೆ.23): ಕಾಂಗ್ರೆಸ್ ಪಕ್ಷದಂತೆ ನಿಮಗೆ ಇಲ್ಲಿ ನೋವು ಇರುವುದಿಲ್ಲ. ಇಲ್ಲಿ ನಿಮಗೆ ಆನಂದ ಸಿಗಲಿದೆ. ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಗಳಿಸಲು ಹೋರಾಡುವ ಪಕ್ಷ. ಬಿಜೆಪಿ ದೇಶವನ್ನು ಉಳಿಸಲು ಕಾರ್ಯ ಮಾಡುವ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮತ್ತವರ ಬೆಂಬಲಿಗರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅತ್ಯುನ್ನತ ಸ್ಥಾನಕ್ಕೆ ಏರಿದೆ.
ಮೋದಿ ಅವರ ಶತಾಯುಷಿ ತಾಯಿಯವರ ನಿಧನ ಆದಾಗ ಮಗನಾಗಿ ಅಂತ್ಯಸಂಸ್ಕಾರವನ್ನು ಮಾಡಿ, ಕೇವಲ ಎರಡೂವರೆ ಗಂಟೆಯಲ್ಲಿ ದೇಶದ ಕಾರ್ಯಕ್ಕೆ ಮತ್ತೆ ಮರಳಿದರು. ಇದು ನಮ್ಮ ನಾಯಕರ ಆದರ್ಶ. ಇಂಥ ಆದರ್ಶಗಳಿಂದ ನಮ್ಮ ಪಕ್ಷ ಬೆಳೆದಿದೆ ಎಂದು ತಿಳಿಸಿದರು. ನಮ್ಮ ಪಕ್ಷ ಕಾರ್ಯಕರ್ತರ ಆಧರಿತ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ ಮೂಲ ನಿವಾಸಿಗರು ಮತ್ತು ವಲಸಿಗರು ಎಂಬ ಭಾವನೆ, ಕಿತ್ತಾಟ ಇದೆ. ವಲಸಿಗ ಮುಖ್ಯಮಂತ್ರಿ ಆಗಬೇಕೇ ಅಥವಾ ಮೂಲ ನಿವಾಸಿ ಮುಖ್ಯಮಂತ್ರಿ ಆಗಬೇಕೇ ಎಂಬ ಚರ್ಚೆ ನಡೆಯುತ್ತಿದೆ. ಐದು ವರ್ಷ ಆಡಳಿತ ಮಾಡಿ 2018ರಲ್ಲಿ ಚುನಾವಣೆಗೆ ಹೋದಾಗ ಮುನಿರತ್ನ, ಸುಧಾಕರ್ ಮೊದಲಾದವರು ಕಾಂಗ್ರೆಸ್‌ನಲ್ಲಿದ್ದರು.
ಬಾದಾಮಿಯಲ್ಲಿ ಜನರಿಗೆ ದ್ರೋಹ ಮಾಡಿಲ್ಲ: ಬಿಎಸ್‌ವೈಗೆ ತಿರುಗೇಟು ನೀಡಿದ ಸಿದ್ದು
ಆದರೂ ಕಾಂಗ್ರೆಸ್ ಪಡೆದದ್ದು ಕೇವಲ 80 ಸೀಟು. ಈಗ ಅವರೆಲ್ಲ ಬಿಜೆಪಿಯಲ್ಲಿದ್ದಾರೆ. ಹೀಗಾಗಿ ನಮ್ಮ ಸೀಟು ಹೆಚ್ಚಲಿದೆ. ಕಾಂಗ್ರೆಸ್ ಸೀಟು ಇನ್ನಷ್ಟುಕಡಿಮೆ ಆಗಲಿದೆ. ನಮ್ಮ ಪಕ್ಷ ಹಾಲು ಇದ್ದಂತೆ. ಸ್ವಲ್ಪ ಸಕ್ಕರೆ ಹಾಕಿದಾಗ ಸಕ್ಕರೆ ಕಾಣುವುದಿಲ್ಲ. ಆದರೆ, ಹಾಲು ಸಿಹಿ ಆಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ಪರಿವಾರವಾದದಿಂದ ಬೇಸತ್ತು ರಾಷ್ಟ್ರವಾದದ ಚಿಂತನೆಯನ್ನು ಅಳವಡಿಸಿಕೊಳ್ಳಲು ಬಂದ ಎಲ್ಲ ನಾಯಕರಿಗೂ ಸ್ವಾಗತ. ರಾಜಕಾರಣದಲ್ಲಿ ಪಕ್ಷ ತೊರೆದಾಗ ಆತಂಕ, ಉದ್ವೇಗ ಸಹಜ. ಆದರೆ, ಸ್ವಲ್ಪ ದಿನಗಳ ಬಳಿಕ ನೀವೂ ಬಿಜೆಪಿಯಲ್ಲಿ ಖುಷಿಯಲ್ಲಿ ಇರುತ್ತೀರಿ. ಅದು ನಮ್ಮ ಪಕ್ಷದ ವಿಶೇಷತೆ ಎಂದರು.
ರಾಜ್ಯದ ಹಳ್ಳಿಗಳ ನಿಜವಾದ ಚಿತ್ರಣ ತಿಳಿದುಕೊಳ್ಳಲು ಪಂಚರತ್ನ ಯಾತ್ರೆ: ಎಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್‌ನ ಮಾಜಿ ರಾಜ್ಯ ಕಾರ್ಯದರ್ಶಿ ಸಪ್ತಗಿರಿ ಶಂಕರ ನಾಯಕ್, ವೀರಶೈವ ಮಹಾಸಭಾದ ಮುಖಂಡ ರೇಣುಕಾ ಪ್ರಸಾದ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬೂದಿಹಾಳ್ ಹನುಮಂತರಾಜು, ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ತುಳಸಿ ರಾಮ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಉಮೇಶ್ ತಮ್ಮ ಬೆಂಬಲಿಗರ ಜತೆಗೆ ಬಿಜೆಪಿ ಸೇರಿದರು. ಆರೋಗ್ಯ ಸಚಿವ ಸಚಿವ ಡಾ. ಕೆ.ಸುಧಾಕರ್, ತೋಟಗಾರಿಕಾ ಸಚಿವ ಎನ್.ಮುನಿರತ್ನ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ, ಹಿರಿಯ ನಾಯಕ ಲಕ್ಷ್ಮೇನಾರಾಯಣ ಮತ್ತಿತರರಿದ್ದರು.
