ಹಣ ಪಡೆದು ಟಿಕೆಟ್ ನೀಡುವ ಸ್ಥಿತಿ ಬಿಜೆಪಿಯಲ್ಲಿಲ್ಲ: ಶೋಭಾ ಕರಂದ್ಲಾಜೆ
ಬಿಜೆಪಿಯಲ್ಲಿ ಹಣ ಪಡೆದು ಟಿಕೆಟ್ ನೀಡುವ ಸ್ಥಿತಿ ಇಲ್ಲ, ಅಂತಹ ಸ್ಥಿತಿ ಪಕ್ಷಕ್ಕೆ ಬರುವುದೂ ಇಲ್ಲ, ನನಗೆ ಟಿಕೆಟ್ ಸಿಗುತ್ತದೆ, ನಾನು ಇಂತಹ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದರೆ ಬಿಜೆಪಿಯಲ್ಲಿ ಬೆಲೆಯೂ ಇಲ್ಲ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಖಡಕ್ ಆಗಿ ಹೇಳಿದ್ದಾರೆ.
ಉಡುಪಿ (ಸೆ.16): ಬಿಜೆಪಿಯಲ್ಲಿ ಹಣ ಪಡೆದು ಟಿಕೆಟ್ ನೀಡುವ ಸ್ಥಿತಿ ಇಲ್ಲ, ಅಂತಹ ಸ್ಥಿತಿ ಪಕ್ಷಕ್ಕೆ ಬರುವುದೂ ಇಲ್ಲ, ನನಗೆ ಟಿಕೆಟ್ ಸಿಗುತ್ತದೆ, ನಾನು ಇಂತಹ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದರೆ ಬಿಜೆಪಿಯಲ್ಲಿ ಬೆಲೆಯೂ ಇಲ್ಲ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಖಡಕ್ ಆಗಿ ಹೇಳಿದ್ದಾರೆ. ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೇಟ್ ಕೊಡಿಸುವುದಾಗಿ 5 ಕೋಟಿ ರು. ವಂಚಿಸಿದ ಚೈತ್ರಾ ಕುಂದಾಪುರ, ಈ ಬಾರಿ ಉಡುಪಿ ಚಿಕ್ಕಮಗಳೂರಿನ ಲೋಕಸಭಾ ಟಿಕೆಟ್ ಶೋಭಾ ಕರಂದ್ಲಾಜೆಗೆ ಇಲ್ಲ, ತನಗೆ ಸಿಗುತ್ತದೆ ಎಂದೆಲ್ಲಾ ಹೇಳಿಕೊಂಡು ಓಡಾಡುತ್ತಿದ್ದ ಬಗ್ಗೆ ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಶುಕ್ರವಾರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು, ಎಲ್ಲಿ ಟಿಕೆಟ್ ಕೊಡಬೇಕು ಅನ್ನೋದು ವರಿಷ್ಠರು ತೀರ್ಮಾನ ಮಾಡುತ್ತಾರೆ, ಬಿಜೆಪಿಯಲ್ಲಿ ಗಟ್ಟಿಯಾದ ನೇತೃತ್ವ ಇದೆ, ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಯಾರಿಗೆ ಎಲ್ಲಿ ಟಿಕೆಟ್ ನೀಡಬೇಕು ಅಂತ ತೀರ್ಮಾನ ಮಾಡುತ್ತಾರೆ ಎಂದರು. ಚೈತ್ರಾ ಜೊತೆ ನನಗೆ ಯಾವುದೇ ರೀತಿಯ ನೇರ ಸಂಪರ್ಕ ಇರಲಿಲ್ಲ, ಕಾರ್ಯಕ್ರಮದಲ್ಲಿ ನನ್ನ ಜೊತೆ ಫೋಟೋ ತೆಗೆಸಿಕೊಂಡಿರಬಹುದು, ಅದು ನನ್ನ ಗಮನಕ್ಕೆ ಬಂದಿಲ್ಲ. ಆಕೆ ನನಗೆ ಫೋನ್ ಮಾಡ್ಲಿಲ್ಲ, ನಾನು ಕೂಡ ಅವಳಿಗೆ ಫೋನ್ ಮಾಡುವ ಅವಶ್ಯಕತೆಯೂ ಇಲ್ಲ, ಆಕೆ ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದರ ಬಗ್ಗೆಯೂ ತನಿಖೆಯಾಗಲಿ ಎಂದವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನದ ಬಗ್ಗೆ ಶಾಸಕ ವಿಜಯೇಂದ್ರ ಹೇಳಿದ್ದೇನು?
ಸರ್ಕಾರ ನಿಷ್ಪಕ್ಷ ತನಿಖೆ ನಡೆಸಲಿ: ರಾಜಕೀಯ, ಸಾಮಾಜಿಕ ಜೀವನದಲ್ಲಿ ಯಾರೇ ತಪ್ಪು, ಮೋಸ ಮಾಡಿದ್ದರೂ ಶಿಕ್ಷೆ ಆಗಲೇಬೇಕು, ಉಪ್ಪು ತಿಂದವರು ನೀರು ಕುಡಿಯಲೇಬೇಕು, ಚೈತ್ರ ಉದ್ಯಮಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರು. ಪಡೆದಿರುವ ಬಗ್ಗೆಯೂ ಸರ್ಕಾರ ಉನ್ನತ ಮಟ್ಟದ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಬಿಜೆಪಿಯ ಯಾರೂ ಕೂಡ ಆಕೆಯನ್ನು ರಕ್ಷಣೆ ಮಾಡುತ್ತಿಲ್ಲ, ಟಿಕೆಟ್ ತೆಗೆಸಿಕೊಡುವುದಾಗಿ ಆಕೆ ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ನಾಯಕರ ಹೆಸರನ್ನು ದುರುಪಯೋಗ ಮಾಡಿದ್ದರ ಬಗ್ಗೆಯೂ, ತನಿಖೆಯಾಗಲಿ, ಈ ಬಗ್ಗೆ ಆಕೆಗೆ ಕುಮ್ಮಕ್ಕು ನೀಡಿದವರ ಬಗ್ಗೆಯೂ ತನಿಖೆ ನಡೆಯಲಿ ಎಂದರು.