Asianet Suvarna News Asianet Suvarna News

ಬಿಜೆಪಿ ಆಂತರಿಕ ಕಿತ್ತಾಟ ತೀವ್ರ: ಯತ್ನಾಳ್‌ ಹೇಳಿಕೆ ಪಕ್ಷಕ್ಕೆ ಭಾರೀ ಏಟು..!

ರಾಜ್ಯ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಕಲಹ ಇನ್ನಷ್ಟು ಬಿರುಸುಗೊಂಡಿದೆ. 

BJP Internal Bickering Intense in Karnataka after Defeated in Assembly Elections 2023 grg
Author
First Published Jun 29, 2023, 9:10 AM IST

ಬೆಂಗಳೂರು(ಜೂ.29): ಬೊಮ್ಮಾಯಿ ಅವರನ್ನು ಸಿಎಂ ಮಾಡಿ, ಅವರ ಕೈ ಕಟ್ಟಿ ಹಾಕಿದ್ದರು. ಸೈಕಲ್‌ ತುಳಿದು ಪಕ್ಷ ಕಟ್ಟಿದ ಯಡಿಯೂರಪ್ಪನವರಂಥವರ ಪರ ಮಾತನಾಡಿದರೆ ಕ್ರಮ ತೆಗೆದುಕೊಳ್ಳುತ್ತೀರಾ. ಆದರೆ ಅವರ ವಿರುದ್ಧ ಮಾತನಾಡಿದರೆ ಏಕೆ ಕ್ರಮ ತೆಗೆದುಕೊಳ್ಳಲ್ಲ? ಕಳೆದ ಕೆಲ ದಿನಗಳಿಂದ ಅತಿರಥ, ಮಹಾರಥರು ಮಾತನಾಡುತ್ತಿದ್ದಾರೆ. ಅವರ ಮೇಲೇಕೆ ಕ್ರಮ ಇಲ್ಲ? ಅಂತ ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. 

ಯತ್ನಾಳ್‌ ಹೇಳಿಕೆ ಪಕ್ಷಕ್ಕೆ ಭಾರಿ ಏಟು

ಬಿಜೆಪಿ ಸೋಲಿಗೆ ವಿಜಯಪುರ ನಗರ ಶಾಸಕರು (ಯತ್ನಾಳ್‌) ಕೂಡ ಕಾರಣ. ಮುಖ್ಯಮಂತ್ರಿ ಸ್ಥಾನಕ್ಕೆ ಸಾವಿರಾರು ಕೋಟಿ, ಮಂತ್ರಿ ಮಾಡಲು .100 ಕೋಟಿ, ನಿಗಮ ಅಧ್ಯಕ್ಷರನ್ನಾಗಿ ಮಾಡಲು ಕೋಟಿ ಕೋಟಿ ಹಣ ಸುರಿಯಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದು ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿತು ಅಂತ ಮಾಜಿ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ.  

ಇದು ಪಕ್ಕಾ ಶೇ.60 ಕಮಿಷನ್‌ ಸರ್ಕಾರ, ನಾವು ಕಾದು ನೋಡುತ್ತೇವೆ: ನಳಿನ್‌ ಕುಮಾರ್‌ ಕಟೀಲ್‌

ಹೊನ್ನಾಳಿ/ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಕಲಹ ಇನ್ನಷ್ಟು ಬಿರುಸುಗೊಂಡಿದೆ. ಬಿಜೆಪಿ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್‌ ಕುಮಾರ್‌ ಕಟೀಲ್‌ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರೆ, ವಿಜಯಪುರ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ವಿಜಯಪುರ ನಗರ ಶಾಸಕರೇ ಕಾರಣ ಎಂದು ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರೆತ್ತದೆ ಮಾಜಿ ಸಚಿವ ಮುರುಗೇಶ್‌ ನಿರಾಣಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರವಷ್ಟೇ ರೇಣುಕಾಚಾರ್ಯ ಅವರು ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದೇ ಪಕ್ಷದ ಹೀನಾಯ ಸೋಲಿಗೆ ಕಾರಣ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದರ ಜತೆಗೆ, ಒಳಮೀಸಲಾತಿ ಜಾರಿ, ಶೆಟ್ಟರ್‌, ಈಶ್ವರಪ್ಪರಂಥ ಹಿರಿಯರಿಗೆ ಟಿಕೆಟ್‌ ತಪ್ಪಿಸಿದ್ದು ಸೇರಿ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಪಕ್ಷದ ಸೋಲಿನ ಕುರಿತು ವಿಮರ್ಶೆ ಮಾಡಿದ್ದರು. ಇದೀಗ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧವೇ ತಿರುಗಿ ಬಿದ್ದಿರುವ ರೇಣುಕಾಚಾರ್ಯ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ನಳಿನ್‌ ಕುಮಾರ್‌ ಕಟೀಲ್‌ ಅವರೇ ಕಾರಣ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಆಗ್ರಹಿಸಿದ ಅವರು ವೀರಶೈವ ಲಿಂಗಾಯತ, ಒಕ್ಕಲಿಗ, ಹಾಲುಮತ, ಎಸ್ಸಿ, ಎಸ್ಟಿಸೇರಿ ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗುವ ಸಾಮರ್ಥ್ಯವಿರುವವರನ್ನು ಮುಂದಿನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಹೇಳಿದರು.

ಹೊನ್ನಾಳಿಯ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ನಾಯಕರ ಶಿಸ್ತು ಕ್ರಮದ ಎಚ್ಚರಿಕೆಗೂ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷ, ನಾಯಕರ ವಿರುದ್ಧ ಯಾರೇ ಮಾತನಾಡಿದರೂ ಅದು ಅಶಿಸ್ತು. ಆದರೆ ಸೈಕಲ್‌ ತುಳಿದು ಪಕ್ಷ ಕಟ್ಟಿದ ಯಡಿಯೂರಪ್ಪನಂಥವರ ಪರ ಮಾತನಾಡಿದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೀರಾ? ಅದೇ ಅವರ ವಿರುದ್ಧ ಮಾತನಾಡಿದವರ ವಿರುದ್ಧ ಕ್ರಮ ಯಾಕಿಲ್ಲ? ಕಳೆದ ಕೆಲ ದಿನಗಳಿಂದ ಅತಿರಥ, ಮಹಾರಥರು ಮಾತನಾಡುತ್ತಿದ್ದು, ಅವರ ಮೇಲೇಕೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳುತ್ತಿಲ್ಲ ಎಂದು ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿದರು.

ಬೊಮ್ಮಾಯಿ ಅವರನ್ನು ಸಿಎಂ ಮಾಡಿದರೂ ಅವರ ಕೈಕಟ್ಟಿಹಾಕಿದ್ದು, ಎಷ್ಟುಸರಿ ಎಂದು ಇದೇ ವೇಳೆ ಪ್ರಶ್ನಿಸಿದ ರೇಣುಕಾಚಾರ್ಯ, ಯಡಿಯೂರಪ್ಪರನ್ನು ಅಧಿಕಾರದಿಂದ ಇಳಿಸಿದ್ದು ದೊಡ್ಡ ಅಪರಾಧ ಎಂದು ಮುಖಂಡರು, ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ನಾವೆಲ್ಲ ಅಂದೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಯಡಿಯೂರಪ್ಪರನ್ನು ಮುಂದುವರಿಸಲು ಮನವಿ ಮಾಡಿದ್ದೆವು. ಆದರೆ ಅವರು ನಮ್ಮ ಮಾತು ಕೇಳಲಿಲ್ಲ. ಇದರ ಉದ್ದೇಶ ಏನೆಂದು ಜನ ಕೇಳುತ್ತಿದ್ದಾರೆ ಎಂದರು.

ಅಕ್ಕಿ ಬದಲು ಹಣ ನೀಡಿ ಎಂದವರೇ ಬಿಜೆಪಿಗರು, ಈಗ ವಿರೋಧಿಸುತ್ತಿದ್ದಾರೆ: ಸಚಿವ ಎಚ್‌.ಕೆ.ಪಾಟೀಲ್‌

ಮತ್ತೆ ನಿರಾಣಿ ವಾಗ್ದಾಳಿ:

ಬಿಜೆಪಿ ಶಾಸಕ ಯತ್ನಾಳ ವಿರುದ್ಧ ಇತ್ತೀಚೆಗೆ ವಿಜಯಪುರ ಸಮಾವೇಶದಲ್ಲಿ ತೀವ್ರ ಹರಿಹಾಯ್ದಿದ್ದ ಮಾಜಿ ಸಚಿವ ಮುರುಗೇಶ್‌ ಇದೀಗ ಮತ್ತೊಮ್ಮೆ ಅವರ ಹೆಸರೆತ್ತದೆ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ವಿಜಯಪುರ ನಗರ ಶಾಸಕರೇ ನೇರ ಹೊಣೆ. ಪಕ್ಷದ ನಾಯಕರ ಬಗ್ಗೆ ಟೀಕಿಸುವುದು ಅವರ ಛಾಳಿ. ಹಿರಿಯರಾದ ಯಡಿಯೂರಪ್ಪ, ದಿ.ಅನಂತಕುಮಾರ್‌, ಜೋಶಿ, ಈಶ್ವರಪ್ಪ ಮತ್ತಿತರರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಾವಿರಾರು ಕೋಟಿ, ಮಂತ್ರಿ ಮಾಡಲು .100 ಕೋಟಿ, ನಿಗಮ ಅಧ್ಯಕ್ಷರನ್ನಾಗಿ ಮಾಡಲು ಕೋಟಿ ಕೋಟಿ ಹಣ ಸುರಿಯಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದು ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿತು ಎಂದರು.

ಪಂಚಮಸಾಲಿ ಮೀಸಲಾತಿಗಾಗಿ ನಾನು, ಸಿ.ಸಿ.ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ ಸೇರಿ ಅನೇಕರು ಪ್ರಯತ್ನ ಮಾಡಿದೆವು. ಆದರೆ ಅವರು(ಯತ್ನಾಳ) ಆಡಳಿತ ಪಕ್ಷದಲ್ಲಿದ್ದರೂ ಕಾಂಗ್ರೆಸ್‌ ಜೊತೆ ಕೈಜೋಡಿಸಿ ವಿನಾಕಾರಣ ನಮ್ಮನ್ನೇ ಟೀಕಿಸಿದರು, ನಮ್ಮ ವಿರುದ್ಧ ಹೋರಾಟ ಮಾಡಿದ್ದರು ಎಂದು ಬುಧವಾರ ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು.

Follow Us:
Download App:
  • android
  • ios