ಬಿಜೆಪಿಯಲ್ಲಿ ತಾರಕಕ್ಕೇರಿದ ಬಣ ಜಗಳ: ವಿಜಯೇಂದ್ರ ವಿರುದ್ಧ ಯತ್ನಾಳ್ ಟೀಂ ಅಬ್ಬರ
ಅತ್ತ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ತೆರಳಿ ವಿಜಯೇಂದ್ರ ಆಪ್ತರು ಒತ್ತಡ ಹೇರಿದ ಬೆನ್ನಲ್ಲೇ ಇತ್ತ ಬೆಳಗಾವಿಯಲ್ಲಿ ಯತ್ನಾಳ್ ಬಣ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಅಬ್ಬರಿಸಿದೆ.
ಬೆಳಗಾವಿ : ಅತ್ತ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ತೆರಳಿ ವಿಜಯೇಂದ್ರ ಆಪ್ತರು ಒತ್ತಡ ಹೇರಿದ ಬೆನ್ನಲ್ಲೇ ಇತ್ತ ಬೆಳಗಾವಿಯಲ್ಲಿ ಯತ್ನಾಳ್ ಬಣ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಅಬ್ಬರಿಸಿದೆ.
ಬೆಳಗಾವಿಯಲ್ಲಿ ಯತ್ನಾಳ್ ಬಣದ ಸದಸ್ಯರು ವಕ್ಫ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ಬಳಿಕ ಮಾತನಾಡಿ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ಅವರ ವಿರುದ್ಧ ಕ್ರಮ ವಹಿಸದೆ, ಜನಪರ ಹೋರಾಟ ಮಾಡುತ್ತಿರುವ ತಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳುತ್ತೀರಿ ಎಂದು ಯತ್ನಾಳ್ ಗುಡುಗಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ, ಹುಷಾರ್ ಎಂದು ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಗುಡುಗಿದರು.
ದಾವಣಗೆರೆಯಲ್ಲಿ ಸಮಾವೇಶ:
ನಗರದ ಮಹಾತ್ಮ ಗಾಂಧಿ ಭವನದಲ್ಲಿ ವಕ್ಫ್ ವಿರುದ್ಧದ ಜನಜಾಗೃತಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್, ನಮ್ಮನ್ನು ಆಪರೇಷನ್ ಮಾಡಿದರೆ ನಿಮ್ಮನ್ನು ಕಟ್ ಮಾಡುತ್ತೇವೆ. ದಾವಣಗೆರೆಯಲ್ಲಿ ಹಿಂದುಗಳ ಬೃಹತ್ ಸಮಾವೇಶ ಮಾಡುತ್ತೇವೆ. 25 ಲಕ್ಷ ಜನರನ್ನು ಸೇರಿಸುತ್ತೇವೆ. ಆ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತೇವೆ. ನಮ್ಮ ಶಕ್ತಿ ಏನೆಂಬುದನ್ನು ದಾವಣಗೆರೆಯಲ್ಲಿ ಪ್ರದರ್ಶಿಸುತ್ತೇವೆ ಎಂದು ವಿಜಯೇಂದ್ರ ಬಣಕ್ಕೆ ತಿರುಗೇಟು ನೀಡಿದರು.
ವಕ್ಫ್ ವಿರುದ್ಧದ ನಮ್ಮ ಹೋರಾಟ ಬೆಂಬಲಿಸುತ್ತಿರುವ ಹಾಲಿ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರ ನಮ್ಮ ನಿಯೋಗದಿಂದ ದೆಹಲಿಗೆ ತೆರಳಿ, ವಕ್ಫ್ ಭೂಕಬಳಿಕೆ ವಿರುದ್ಧ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸುತ್ತೇವೆ. ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದಾರೆ. ಈ ಮೂಲಕ ರಮೇಶ ಅವರು ತಮ್ಮ ತಾಕತ್ತು ಏನು ಎಂಬುದನ್ನು ತೋರಿಸಿದ್ದಾರೆ. ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಮಾತನ್ನು ಆಡುತ್ತಿದ್ದೀರಿ. ಆದರೆ, ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ಅವರ ವಿರುದ್ಧ ಕ್ರಮ ವಹಿಸದ ನೀವು ಜನಪರ ಹೋರಾಟ ಮಾಡುತ್ತಿರುವ ನಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ಅರವಿಂದ ಲಿಂಬಾವಳಿ ಮಾತನಾಡಿ, ವಕ್ಫ್ ಬೋರ್ಡ್ ಭೂಕಬಳಿಕೆ ವಿರುದ್ಧದ ನಮ್ಮ ಹೋರಾಟ ಜನಪರವಾದುದು. ಹೋರಾಟದ ನೇತೃತ್ವ ವಹಿಸಿರುವ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡ್ತಿನಿ ಅಂತಿರಾ? ನೀವೂ ವಕ್ಫ್ ಬೋರ್ಡ್ ವಿರುದ್ಧ ರಸ್ತೆಗಿಳಿದು ಹೋರಾಟ ಮಾಡಿ. ನಮ್ಮ ಪಾಲಿಗೆ ನಾವು ಹೋರಾಟ ಮಾಡ್ತಿವಿ. ಜನಪರ ಕೆಲಸ ಮಾಡಲಿ ಎಂದು ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಹಾದಿಬೀದಿಯಲ್ಲಿ ಮಾತನಾಡ್ತಿರಾ? ಎಂದು ಕಿಡಿಕಾರಿದರು. ನಿಮ್ಮ ಹೊಂದಾಣಿಕೆ ರಾಜಕಾರಣದ ಕಾರಣಕ್ಕಾಗಿಯೇ ನಾವು ಇಂದು ವಿರೋಧ ಪಕ್ಷದಲ್ಲಿ ಕುಳಿತಿದ್ದೇವೆ. ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ.. ಹುಷಾರ್! ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ರ್‍ಯಾಲಿಗೂ ಮುನ್ನ ಯತ್ನಾಳ್ ಬಣದ ಸದಸ್ಯರು ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ರಹಸ್ಯ ಸಭೆ ನಡೆಸಿದರು. ಸಭೆಯಲ್ಲಿ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ರಮೇಶ ಜಾರಕಿಹೊಳಿ, ಮಾಜಿ ಸಂಸದ ಪ್ರತಾಪ ಸಿಂಹ, ಮಾಜಿ ಶಾಸಕ ಮಹೇಶ ಕುಮಟಳ್ಳಿ, ಎನ್.ಆರ್. ಸಂತೋಷ ಸೇರಿ ಹಲವರು ಭಾಗಿಯಾಗಿದ್ದರು.