ಬಹುತೇಕ 94ರಿಂದ 2004ರ ವರೆಗೆ ದಿಲ್ಲಿಯಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್‌ ಫೈನಲ್‌ ಮಾಡಿ ಕಳುಹಿಸಿದ ಹೆಸರುಗಳು ಒಪ್ಪಿಗೆ ಆಗುತ್ತಿದ್ದವು. 2004 ರಲ್ಲಿ ಇಬ್ಬರ ನಡುವೆ ವೈಮನಸ್ಯ ಶುರುವಾದ ನಂತರ ಒಮ್ಮೆ ಅವರದು, ಇನ್ನೊಮ್ಮೆ ಇವರದು ನಡೆಯುತ್ತಿತ್ತು. ಆದರೆ 2019 ರಲ್ಲಿ ಮೊದಲ ಬಾರಿಗೆ ರಾಜ್ಯ ಕೋರ್‌ ಕಮಿಟಿ ಕಳುಹಿಸಿದ ಹೆಸರನ್ನು ಪೂರ್ತಿ ನಜರ್‌ ಅಂದಾಜ್‌ ಮಾಡಿ, ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತಕುಮಾರ್‌ ಹೆಸರು ಪಕ್ಕಕ್ಕಿಟ್ಟು, 28ರ ಹರೆಯದ ತೇಜಸ್ವಿ ಸೂರ್ಯಗೆ ಟಿಕೆಟ್‌ ನೀಡಲಾಗಿತ್ತು.

ಇನ್ನು 2ನೇ ಬಾರಿ ರಾಜ್ಯದ ನಾಯಕರಿಗೆ ಶಾಕ್‌ ಸಿಕ್ಕಿದ್ದು ವಿಧಾನಸಭಾ ಚುನಾವಣೆಯಲ್ಲಿ ಸೋತರೂ ದಿಲ್ಲಿ ನಾಯಕರು ಲಕ್ಷ್ಮಣ ಸವದಿಗೆ ಕೊಟ್ಟಉಪ ಮುಖ್ಯಮಂತ್ರಿ ಸ್ಥಾನದಿಂದ. ಒಂದೇ ಏಟಿಗೆ ಹೈಕಮಾಂಡ್‌ ಜಗದೀಶ್‌ ಶೆಟ್ಟರ್‌, ಈಶ್ವರಪ್ಪ, ಬೊಮ್ಮಾಯಿ, ಯತ್ನಾಳ್‌, ಕತ್ತಿ ಇವರೆಲ್ಲರ ಸೀನಿಯಾರಿಟಿ ಹೊಡೆದು ಹಾಕಿತ್ತು. ಈಗ ಮೂರನೇ ಬಾರಿ ಹೈಕಮಾಂಡ್‌ ಕತ್ತಿ, ಕೋರೆಯಂಥ ಹಣ ಮತ್ತು ಜಾತಿ ಪ್ರಭಾವ ಇದ್ದವರನ್ನೂ ಪಕ್ಕಕ್ಕೆ ಸರಿಸಿ, ಅತ್ಯಂತ ಸಾಮಾನ್ಯರಲ್ಲಿ ಸಾಮಾನ್ಯರನ್ನು ತಂದು ಸಂಸದರನ್ನಾಗಿ ಮಾಡುತ್ತಿದೆ. ಇದರ ಪ್ಲಸ್‌ ಏನು, ಮೈನಸ್‌ ಏನು ಎಂದು ಈಗಲೇ ಹೇಳೋದು ಕಷ್ಟ.

ಹಣೆಯಲ್ಲಿ ಗೆರೆಗಳಿದ್ದರೆ ಸಾಲದು, ಸೀಟಿನಲ್ಲೂ ಗೆರೆಗಳು ಇರಬೇಕು; ಈರಣ್ಣನ ನಸೀಬು ನೋಡಿ!

ಪರಿಷತ್‌ಗೆ ಬಿಸ್‌ವೈ ನಿರ್ಧಾರಕ?

ರಾಜ್ಯಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತು ನಡೆದಿಲ್ಲ. ಹೀಗಾಗಿ ಅವರು ಅಸಮಾಧಾನಗೊಂಡಿರುವುದು ಸಹಜ. ಹೀಗಿರುವಾಗ ಬಹುತೇಕ ವಿಧಾನ ಪರಿಷತ್‌ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಡಿಯೂರಪ್ಪ ಹೇಳಿದಂತೆ ದಿಲ್ಲಿ ನಾಯಕರು ಕೇಳುವ ಸಾಧ್ಯತೆ ಹೆಚ್ಚು ಎನ್ನುತ್ತಿವೆ ದಿಲ್ಲಿ ಮೂಲಗಳು.

ಯಡಿಯೂರಪ್ಪನವರು ಹೊರಗಿನಿಂದ ಬಂದಿರುವ ಮೂವರು ಕುರುಬ ನಾಯಕರಿಗೂ ಟಿಕೆಟ್‌ ಕೊಡಬೇಕು ಎನ್ನುವ ಒತ್ತಡ ಹಾಕುವುದು ನಿಶ್ಚಿತವಾಗಿದ್ದು, ಉಮೇಶ್‌ ಕತ್ತಿ ಒತ್ತಡ ಹಾಕಿದರೆ ರಮೇಶ್‌ ಕತ್ತಿಯನ್ನು ಎಂಎಲ್‌ಸಿ ಮಾಡುವ ಪ್ರಯತ್ನವನ್ನೂ ಕೂಡ ಬಿಎಸ್‌ವೈ ಮಾಡಬಹುದು.

ಆದರೆ, ಸಂಘದ ಹಿನ್ನೆಲೆಯ ಇಬ್ಬರನ್ನು ಎಂಎಲ್‌ಸಿ ಮಾಡಲು ನಳಿನ್‌ ಕಟೀಲ್‌ ಮತ್ತು ಈಶ್ವರಪ್ಪ ಒತ್ತಡ ಹಾಕಲಿದ್ದು, ನಿಶ್ಚಿತವಾಗಿ ಇದಕ್ಕೆ ದೆಹಲಿಯ ಸಂತೋಷ್‌ ಒಪ್ಪಿಗೆ ಇರಲಿದೆ. ಮೂಲಗಳ ಪ್ರಕಾರ ಬೆಂಗಳೂರಿನ ನಿರ್ಮಲ್‌ ಕುಮಾರ್‌ ಸುರಾನಾ ಮತ್ತು ಹುಬ್ಬಳ್ಳಿಯ ಮಹೇಶ್‌ ಟೆಂಗಿನಕಾಯಿ ಕೂಡ ರೇಸ್‌ನಲ್ಲಿದ್ದಾರೆ.

ಯಡಿಯೂರಪ್ಪನವರಿಗೆ ಪರ್ಯಾಯ ಎಲ್ಲಿದೆ?

ತಾನೇ ಚುಚ್ಚಿಕೊಂಡ ಕತ್ತಿ

ರಾಜ್ಯ ಕೋರ್‌ ಕಮಿಟಿ ಹೆಸರು ಕಳುಹಿಸಿ, ಯಡಿಯೂರಪ್ಪನವರ ಬೆಂಬಲ ಇದ್ದರೂ ದಿಲ್ಲಿಯ ನಾಯಕರು ಹೆಸರು ತಿರಸ್ಕರಿಸಲು ಮುಖ್ಯ ಕಾರಣ ಆಗಾಗ ಉಮೇಶ್‌ ಕತ್ತಿ ಆಡುವ ಮಾತುಗಳು ಮತ್ತು ಬಂಡಾಯದ ಬೆದರಿಕೆ. 2014ರಲ್ಲಿ ಉಮೇಶ್‌ ಕತ್ತಿ ಚಿಕ್ಕೋಡಿಯಲ್ಲಿ, ‘ಮೋದಿದೇನು ನಡೆಯೋದಿಲ್ಲ, ನಾನೇ ಮೋದಿ’ ಎಂದರು ನೋಡಿ. ಮುನಿಸಿಕೊಂಡ ಮೋದಿ ಫಿಕ್ಸ್‌ ಆದ ಸಭೆ ರದ್ದುಪಡಿಸಿದರು, ಚಿಕ್ಕೋಡಿಗೆ ಹೋಗಲಿಲ್ಲ. ಕತ್ತಿ ಕೈಯಲ್ಲಿದ್ದ ಚುನಾವಣೆ ಸೋತರು.  

2018 ರಲ್ಲಿ ಕತ್ತಿ, ಜಾರಕಿಹೊಳಿ ಜೊತೆ ಸೇರಿ ಅಥಣಿಯಲ್ಲಿ ತಲೆ ಹಾಕಿ ಲಕ್ಷ್ಮಣ್‌ ಸವದಿಯನ್ನು ಸೋಲಿಸಿದರು ಎಂಬ ಮಾತಿದೆ. 2019ರಲ್ಲಿ ಲಕ್ಷ್ಮಣ್‌ ಸವದಿ ಮತ್ತು ಪ್ರಭಾಕರ ಕೋರೆ ಸೇರಿ ರಮೇಶ್‌ ಕತ್ತಿಗೆ ಲೋಕಸಭೆ ಟಿಕೆಟ್‌ ತಪ್ಪಿಸಿದರು ಎಂದೂ ಹೇಳಲಾಗುತ್ತದೆ. ಮುಂದೆ ಉಮೇಶ್‌ ಕತ್ತಿಗೆ ಮಂತ್ರಿ ಸ್ಥಾನ ಬೇಡ ಎಂದ ಹೈಕಮಾಂಡ್‌, ಲಕ್ಷ್ಮಣ್‌ ಸವದಿಯನ್ನು ಉಪ ಮುಖ್ಯಮಂತ್ರಿ ಮಾಡಿದರೆ, ಶಶಿಕಲಾ ಜೊಲ್ಲೆಯನ್ನು ಮಂತ್ರಿ ಮಾಡಿತು.

ಮೊದಲೆಲ್ಲಾ ಉಮೇಶ್‌ ಕತ್ತಿಯಂಥ ಲಿಂಗಾಯತ ಪ್ರಭಾವಿಗಳು ಗುಟುರು ಹಾಕಿದರೆ ಗಡ್ಕರಿ, ರಾಜನಾಥ್‌ ಸಿಂಗ್‌ ಮಾತುಕತೆಗಾದರೂ ಕರೆಯುತ್ತಿದ್ದರು. ಈಗ ಅಮಿತ್‌ ಶಾ ಕ್ಯಾರೇ ಎನ್ನುವುದಿಲ್ಲ. ಮುಂದೆ ಕತ್ತಿಗಿರುವುದು ಎರಡೇ ಹಾದಿ. ಒಂದು, ಬಿಜೆಪಿ ಆರ್‌ಎಸ್‌ಎಸ್‌ ನಾಯಕರನ್ನು ಸಂಭಾಳಿಸಿ ಯಡಿಯೂರಪ್ಪನವರ ಬೆನ್ನು ಹತ್ತಿ ಮಂತ್ರಿ ಆಗುವುದು. ಇಲ್ಲವೇ, ಜಾರಕಿಹೊಳಿ ಕಾಂಗ್ರೆಸ್‌ನಲ್ಲಿ ಮಾಡಿದ ರೀತಿ ಬಂಡಾಯ ಶುರು ಮಾಡುವುದು. ಆದರೆ ಉಡಾಫೆ ಸ್ವಭಾವದ ಉಮೇಶ್‌ ಕತ್ತಿಗೆ ಅಷ್ಟೊಂದು ತಾಳ್ಮೆ ಇದ್ದಂತಿಲ್ಲ. ಅಂದ ಹಾಗೆ, ಉಮೇಶ್‌ ಕತ್ತಿಯವರು ಯಡಿಯೂರಪ್ಪ, ಈಶ್ವರಪ್ಪ, ಶೆಟ್ಟರ್‌, ಅಶೋಕ್‌, ಲಿಂಬಾವಳಿ ಮನೆಗೆ ಹೋಗಿ, ‘ನನ್ನನ್ನು ಮಂತ್ರಿ ಮಾಡಬೇಡಿ. ತಮ್ಮನನ್ನು ಸಂಸದ ಮಾಡಿ, ಇಲ್ಲವಾದಲ್ಲಿ ಮನೆಯಲ್ಲಿ ಜಗಳವಾಗುತ್ತದೆ’ ಎಂದು ಹೇಳಿದ್ದರಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ