ಕತ್ತಿ, ಕೋರೆಗೆ ರಾಜ್ಯಸಭೆ ಟಿಕೆಟ್‌ ತಪ್ಪಿ ಏಕ್‌ದಂ ಸಾಮಾನ್ಯ ಕಾರ್ಯಕರ್ತರಾದ ಈರಣ್ಣ ಕಡಾಡಿ ಮತ್ತು ಅಶೋಕ್‌ ಗಸ್ತಿಗೆ ಟಿಕೆಟ್‌ ಸಿಕ್ಕಿದ್ದು ಅನೇಕ ಬಿಜೆಪಿ ನಾಯಕರಿಗೆ ಆಘಾತ ಉಂಟುಮಾಡಿದ್ದರೂ, ಇದು ಪ್ರಜಾಪ್ರಭುತ್ವದ ಶಕ್ತಿಯೂ ಹೌದು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಅವರ ಕೃಪೆ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂಬುದೂ ಅಷ್ಟೇ ನಿಜ.

ರಾಜ್ಯ ಕೋರ್‌ ಕಮಿಟಿ ಕಳುಹಿಸಿದ ಮೂರು ಹೆಸರುಗಳನ್ನು ಜೆ.ಪಿ. ನಡ್ಡಾ ರವಿವಾರ ಬೆಳಿಗ್ಗೆ ಅಮಿತ್‌ ಶಾ ಮುಂದಿಟ್ಟಾಗ ಸಂತೋಷ್‌ ಕೂಡ ಆ ಸಭೆಯಲ್ಲಿದ್ದರು. ನಿರ್ಮಲ್‌ ಕುಮಾರ್‌ ಸುರಾನಾ ಹೆಸರನ್ನು ಸಂತೋಷ್‌ ಅವರು ಅಮಿತ್‌ ಶಾ ಮುಂದೆ ಇಟ್ಟರಾದರೂ ಇದಕ್ಕೆ ಅಮಿತ್‌ ಶಾ ಒಪ್ಪಲಿಲ್ಲ. ಆಗ ಅಮಿತ್‌ ಶಾ ಈ ಪ್ರಬಲರ ಬದಲು ಸಾಮಾನ್ಯ ಕಾರ್ಯಕರ್ತರ ಹೆಸರು ತನ್ನಿ ಎಂದಾಗ 4 ಹೆಸರುಗಳು ಬಂದವು. 1.ಬೆಳಗಾವಿ ಪ್ರಭಾರಿ ಈರಣ್ಣ ಕಡಾಡಿ. 2.ಧಾರವಾಡ ಪ್ರಭಾರಿ ಲಿಂಗರಾಜ ಪಾಟೀಲ್‌. 3.ಮಾ. ನಾಗರಾಜ್‌ ಕುರುಬರು. 4.ಅಶೋಕ ಗಸ್ತಿ. ಕತ್ತಿ, ಕೋರೆ ಇಬ್ಬರೂ ಬೆಳಗಾವಿಯವರು, ಇಬ್ಬರೂ ಬಣಜಿಗರು. ಹೀಗಾಗಿ ಬೆಳಗಾವಿಯವರೇ ಆದ ಈರಣ್ಣ ಕಡಾಡಿ ಹೆಸರು ಫೈನಲ್‌ ಆಯಿತು.

ಬಿಎಸ್‌ವೈ ಕಣ್ಣೀರಿಗೆ ಬಂಡಾಯವೇ ಖತಂ!

ಇನ್ನು ವಿಧಾನಪರಿಷತ್ತಿನಲ್ಲಿ ಎಚ್‌.ವಿಶ್ವನಾಥ್‌, ಎಂಟಿಬಿ ನಾಗರಾಜ್‌ ಮತ್ತು ಶಂಕರ್‌ ಹೀಗೆ ಮೂರೂ ಕುರುಬರಿಗೆ ಸೀಟು ಕೊಡಬೇಕೆಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಹೀಗಾಗಿ ರಾಜ್ಯಸಭೆಗೆ ಕುರುಬರು ಬೇಡ ಎಂದು ಅನಿಲ್‌ ಗಸ್ತಿ ಹೆಸರನ್ನು ಅಂತಿಮಗೊಳಿಸಲಾಯಿತು. ಸೋಮವಾರ ಬೆಳಿಗ್ಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ನಡ್ಡಾ, ರಾಜ್ಯ ಕೋರ್‌ ಕಮಿಟಿ ಕಳುಹಿಸಿದ ಹೆಸರು ತಿರಸ್ಕರಿಸಿ ಹೊಸ ಹೆಸರು ತೆಗೆದುಕೊಂಡಿದ್ದೇವೆ, ಅದನ್ನೇ ಮುಂದಿಡುತ್ತೇನೆ ಎಂದಾಗ ಸಭೆಯಲ್ಲಿದ್ದವರು ಅಸ್ತು ಎಂದರಂತೆ. ರವಿವಾರ ಸಂಜೆಯೇ ಎಲ್ಲಾ ತೀರ್ಮಾನ ಆಗಿತ್ತು. ಸೋಮವಾರದ ಸಭೆ ಔಪಚಾರಿಕ ಅಷ್ಟೇ.

ಈರಣ್ಣನ ನಸೀಬು ನೋಡಿ

ಈರಣ್ಣ ಕಡಾಡಿ, ‘ನನಗೆ ಹೇಗಾದರೂ ಮಾಡಿ ವಿಧಾನ ಪರಿಷತ್‌ ಸ್ಥಾನ ಕೊಡಿ’ ಎಂದು ಕಳೆದ 15 ದಿನಗಳಿಂದ ಸುರೇಶ್‌ ಅಂಗಡಿ, ಲಕ್ಷ್ಮಣ್‌ ಸವದಿ ಮನೆಗೆ ಮತ್ತು ಹುಬ್ಬಳ್ಳಿ ಸಂಘ ಕಾರ್ಯಾಲಯಕ್ಕೆ ಓಡಾಡುತ್ತಿದ್ದರು. ರವಿವಾರ ಸಂಜೆಯೇ ಈರಣ್ಣ ಹೆಸರು ಫೈನಲ್‌ ಆಗಿದ್ದರೂ ಸೋಮವಾರ ಮಧ್ಯಾಹ್ನ 12 ಗಂಟೆಗೆ ಬೆಳಗಾವಿ ಸುವರ್ಣ ನ್ಯೂಸ್‌ ಪ್ರತಿನಿಧಿ ಅಭಿನಂದನೆ ತಿಳಿಸಿದರೆ, ‘ಅಯ್ಯೋ ಫೇಕ್‌ ನ್ಯೂಸ್‌ ಇರಬಹುದು ನೋಡಿ’ ಅಂದರಂತೆ.

ಇನ್ನು ಅಶೋಕ್‌ ಗಸ್ತಿ 30 ವರ್ಷ ಪಕ್ಷಕ್ಕಾಗಿ ಓಡಾಡಿ ಸುಸ್ತಾಗಿದ್ದರು. ಕಳೆದ ವರ್ಷ ರಾಯಚೂರು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ಮಾಡಿದ್ದರೂ ಸಿಕ್ಕಿರಲಿಲ್ಲ. ಹೀಗಾಗಿ ಸಂಘ ಕಾರ್ಯಾಲಯಕ್ಕೆ ಬಂದು ದುಃಖ ತೋಡಿಕೊಂಡಿದ್ದರಂತೆ. ಈಗ ಏಕಾಏಕಿ ಸವಿತಾ ಸಮುದಾಯಕ್ಕೆ ಸೇರಿದ ಗಸ್ತಿಗೆ ಟಿಕೆಟ್‌ ನೀಡಲಾಗಿದೆ. ಇಂಥ ನಿರ್ಣಯಗಳೇ ಡೆಮಾಕ್ರಸಿಯ ಅಂದವನ್ನು ಹೆಚ್ಚಿಸುತ್ತವೆ. ದುಡ್ಡೇ ದೊಡ್ಡಪ್ಪ, ಜಾತಿ ಅದರಪ್ಪ ಅನ್ನಿಸುತ್ತಿದ್ದಾಗಲೇ ಇಂಥ ಸಾಮಾನ್ಯರಿಗೆ ಟಿಕೆಟ್‌ ಸಿಕ್ಕಾಗ ವಿಶ್ವಾಸ ಮೂಡುತ್ತದೆ. ಅದಕ್ಕೇ ಹೇಳೋದು ರಾಜಕಾರಣಿಗಳಿಗೆ ಹಣೆಯಲ್ಲಿ ಗೆರೆಗಳಿದ್ದರೆ ಸಾಲದು, ಸೀಟಿನಲ್ಲೂ ಗೆರೆಗಳು ಇರಬೇಕು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ