ಬಿಜೆಪಿಯಲ್ಲಿ ಹಿರಿಯರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಹೆತ್ತ ತಾಯಿಯಂತಿದ್ದ ಪಕ್ಷವನ್ನು ಬಿಟ್ಟು ಹೋಗಿರುವುದರ ಪರಿಣಾಮ ಅವರಿಗೆ ಭವಿಷ್ಯದಲ್ಲಿ ತಿಳಿಯಲಿದೆ ಎಂದು ಕೇಂದ್ರ ರೈತ ಕಲ್ಯಾಣ ಹಾಗೂ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

ದೊಡ್ಡಬಳ್ಳಾಪುರ (ಏ.19): ಬಿಜೆಪಿಯಲ್ಲಿ ಹಿರಿಯರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಹೆತ್ತ ತಾಯಿಯಂತಿದ್ದ ಪಕ್ಷವನ್ನು ಬಿಟ್ಟು ಹೋಗಿರುವುದರ ಪರಿಣಾಮ ಅವರಿಗೆ ಭವಿಷ್ಯದಲ್ಲಿ ತಿಳಿಯಲಿದೆ ಎಂದು ಕೇಂದ್ರ ರೈತ ಕಲ್ಯಾಣ ಹಾಗೂ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಇಲ್ಲಿನ ಬಿಜೆಪಿ ಅಭ್ಯರ್ಥಿ ಧೀರಜ್‌ ಮುನಿರಾಜ್‌ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ರೋಡ್‌ ಶೋದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯನ್ನು ಬಿಟ್ಟು ಹೋಗಿರುವ ನಾಯಕರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. 

ಶೆಟ್ಟರ್‌ ಅವರಿಗೆ ಪಕ್ಷ ಎಲ್ಲ ಹಂತಗಳಲ್ಲಿ ಮನ್ನಣೆ ನೀಡಿತ್ತು. ಜನಸಂಘದ ಹಿನ್ನೆಲೆಯ ಅವರಿಗೆ ಶಾಸನಸಭೆ ಪ್ರವೇಶಿಸುವ ಅವಕಾಶ ಕೊಟ್ಟಿದ್ದು ಬಿಜೆಪಿ. ಅಂದಿನ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಬಿ.ಬಿ.ಶಿವಪ್ಪ ಅವರನ್ನ ವಿರೋಧ ಕಟ್ಟಿಕೊಂಡು ಅನಂತ್‌ ಕುಮಾರ್‌ ಹಾಗೂ ಯಡಿಯೂರಪ್ಪ ಅವರು ಜಗದೀಶ್‌ ಶೆಟ್ಟರ್‌ ಬೆನ್ನಿಗೆ ನಿಂತು ಬೆಳೆಸಿದರು. ಇಂದು ಕಾಂಗ್ರೆಸ್‌ ಶೆಟ್ಟರ್‌ ಅವರನ್ನು ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಾಧ್ಯಕ್ಷ ಎಂದು ಕರೆಯುತ್ತಿದೆ ಎಂದರೆ ಅದಕ್ಕೆ ಬಿಜೆಪಿ ಕಾರಣ ಎಂಬುದು ಉಲ್ಲೇಖಾರ್ಹ ಎಂದರು.

10 ಬಾರಿ ಒಂದೇ ಪಕ್ಷ, ಒಂದೇ ಚಿಹ್ನೆಯಡಿ ಸ್ಪರ್ಧಿಸಿ ದಾಖಲೆ ನಿರ್ಮಿಸುವತ್ತ ಆರಗ ಜ್ಞಾನೇಂದ್ರ!

ಸಂತೋಷ್‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಲ್‌.ಸಂತೋಷ್‌ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಜಗದೀಶ್‌ ಶೆಟ್ಟರ್‌ ದೂಷಣೆ ಮಾಡುವುದನ್ನ ನೋಡಿದ್ರೆ ಅವರು ನಿಜವಾಗಿಯೂ ಅವರು ಬಿಜೆಪಿಲ್ಲಿ ಇದ್ದವರಾ ಎಂಬ ಅನುಮಾನ ಉಂಟಾಗುತ್ತಿದೆ ಎಂದರು.

ಮೋದಿ ಚುನಾವಣಾ ರ್ಯಾಲಿ: ಇದೇ 30ರ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಪ್ರವಾಸ ಮಾಡಲಿದ್ದಾರೆ. ರಾಜ್ಯಾದ್ಯಂತ ಹಲವು ರಾರ‍ಯಲಿಗಳಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೆ ಜೆ.ಪಿ.ನಡ್ಡಾ ಅವರು ರಾಜ್ಯದಲ್ಲಿ ಪ್ರವಾಸ ಮಾಡ್ತಿದ್ದಾರೆ. ಯೋಗಿ ಆದಿತ್ಯನಾಥ್‌, ಅಮಿತ್‌ ಶಾ ಸೇರಿದಂತೆ ಹಲವು ನಾಯಕರು ಪ್ರಚಾರಕ್ಕೆ ಬರಲಿದ್ದಾರೆ ಎಂದರು.

ಡಬಲ್‌ ಇಂಜಿನ್‌ ಸರ್ಕಾರಕ್ಕೆ ಬಲ ನೀಡಿ: ರಾಜ್ಯ ಮತ್ತು ಕೇಂದ್ರದ ತಂಡದಿಂದ ಡಬಲ್‌ ಇಂಜಿನ್‌ ಸರ್ಕಾರ ಮುಂದುವರೆಸಬೇಕು ಶಕ್ತಿ ತುಂಬಬೇಕು. ಈ ಬಾರಿ ರಾಜ್ಯದ ಜನತೆ ಮತ್ತೊಮ್ಮೆ ಬಿಜೆಪಿಗೆ ಸ್ಪಷ್ಟಬಹುಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಅಭ್ಯರ್ಥಿ ಧೀರಜ್‌ ಮುನಿರಾಜ್‌, ಹಿರಿಯ ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ನೀಡಿ ‘ರಾಜಕೀಯ’ಕ್ಕೆ ಎಂಟ್ರಿ ಕೊಟ್ಟ ಸುಭಾಶ್ಚಂದ್ರ ರಾಠೋಡ

ರೋಡ್‌ ಶೋದಲ್ಲಿ ಜನಜಾತ್ರೆ: ನೆಲದಾಂಜನೇಯ ಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿ ವೃತ್ತದವರೆಗೆ ನಡೆದ ರೋಡ್‌ ಶೋದಲ್ಲಿ ಸಹಸ್ರಾರು ಕಾರ‍್ಯಕರ್ತರು ಪಾಲ್ಗೊಂಡು, ಬಿಜೆಪಿ ಹಾಗೂ ಅಭ್ಯರ್ಥಿಯ ಪರ ಘೋಷಣೆ ಕೂಗಿದರು. ರೋಡ್‌ ಶೋ ಬಳಿಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ ಧೀರಜ್‌ ಮುನಿರಾಜ್‌ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.