ಮುಡಾ ಹಗರಣ ರಾಜಕಾರಣಕ್ಕಾಗಿ ಕತೆ ಕಟ್ಟಿದ್ದಲ್ಲ: ಸಿದ್ದರಾಮಯ್ಯ ದಾಖಲೆ ಸಮೇತ ಸಿಕ್ಕಿಬಿದ್ದಿದ್ದಾರೆ: ಆರಗ ಜ್ಞಾನೇಂದ್ರ
ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ (ಆ.17): ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸಿಗರು ಹೇಳುವಂತೆ ಮುಡಾ ಹಗರಣ ರಾಜಕಾರಣಕ್ಕಾಗಿ ಕತೆ ಕಟ್ಟಿರುವುದು ಅಲ್ಲ. ಸಿದ್ದರಾಮಯ್ಯ ದಾಖಲೆ ಸಮೇತ ಸಿಕ್ಕಿಹಾಕಿಕೊಂಡಿದ್ದಾರೆ. ಕಾಂಗ್ರೆಸ್ಸಿಗರು ಅವರನ್ನು ಸಮರ್ಥನೆ ಮಾಡಲು ಬರೊಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಮುಡಾ ನಿವೇಶನಗಳನ್ನು ಪಡೆದಿದ್ದಾರೆ. ಇದರಲ್ಲಿ ಸಿಎಂ ಹಾಗೂ ಸಿಎಂ ಪತ್ನಿ ಭಾಗಿಯಾಗಿರುವ ಹಿನ್ನೆಲೆ ಇದು ಸಾಮಾನ್ಯ ಹಗರಣ ಅಲ್ಲ. ಸಿಎಂ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು. ತಾವು ತಪ್ಪು ಮಾಡಿಲ್ಲ ಎಂಬ ವಿಶ್ವಾಸ ಇದ್ದರೆ ಮೊದಲು ರಾಜೀನಾಮೆ ಕೊಡಲಿ. ತನಿಖೆ ಬಳಿಕ ತಮ್ಮ ತಪ್ಪಿಲ್ಲ ಎಂದು ಸಾಬೀತಾದರೆ ಅಧಿಕಾರದಲ್ಲಿ ಮುಂದುವರಿಯಲಿ. ಆದರೆ ಸಿಎಂ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಮೇಲೆ ಪ್ರಭಾವ ಬೀರಿ ಮುಡಾ ಹಗರಣ ಚರ್ಚೆಗೆ ಅವಕಾಶ ನೀಡದೆ ಬೆನ್ನು ತೋರಿಸಿ ಓಡಿಹೋಗಿದ್ದರು. ಹಗರಣ ನಡೆದ ಹಿನ್ನೆಲೆ ನಗರಾಭಿವೃದ್ಧಿ ಸಚಿವರು ಹೆಲಿಕಾಪ್ಟರ್‌ನಲ್ಲಿ ಹೋಗಿ ದಾಖಲೆಗಳನ್ನು ತುಂಬಿಕೊಂಡು ಬಂದಿದ್ದರು ಎಂದರು.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ವಾಟಾಳ್ ನಾಗರಾಜ್ ಕೆಂಡ!
62 ಕೋಟಿ ರೂ. ಪರಿಹಾರ ನೀಡಿದರೆ ನಿವೇಶನಗಳನ್ನು ಬಿಟ್ಟುಕೊಡುವುದಾಗಿ ಹೇಳುತ್ತಾರೆ. ಮೂರು ಕಾಸಿನ ಜಮೀನಿಗೆ 62 ಕೋಟಿ ಹೇಗೆ ಪರಿಹಾರ ನೀಡುತ್ತಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದು ಸರಿಯಾಗಿದೆ. ರಾಜಭವನವನ್ನು ಬಿಜೆಪಿ ರಾಜಕಾರಣಕ್ಕಾಗಿ ಬಳಸುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಅವರು, ಮುಡಾ ಹಗರಣದಲ್ಲಿ ರಾಜ್ಯಪಾಲರಿಗೆ ಬಿಜೆಪಿ ದೂರು ಕೊಟ್ಟಿಲ್ಲ. ಖಾಸಗಿ ವ್ಯಕ್ತಿಗಳು ನೀಡಿದ ದೂರಿನ ಮೇಲೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅನುಮತಿ ನೀಡುವ ವೇಳೆ ಸಾಕಷ್ಟು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ವಿಳಂಬವಾದರೂ ಅನುಮತಿ ನೀಡಿದ್ದಾರೆ. ತರಾತುರಿಯಲ್ಲಿ ನೀಡಿದ್ದಲ್ಲ ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವಧಿಯಲ್ಲಿ ಕಾಂಗ್ರೆಸ್ಸಿಗರು ರಾಜಭವನನ್ನು ಕಾಂಗ್ರೆಸ್ ಕಚೇರಿಯನ್ನಾಗಿ ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಇಂದೇ ರಾಜೀನಾಮೆ ನೀಡಬೇಕು. ಅವರ ಮೇಲಿನ ತನಿಖೆ ನಡೆಸಲು ಪಾರದರ್ಶಕ ವಾತಾವರಣ ಸೃಷ್ಟಿ ಮಾಡಿಕೊಡಬೇಕು. ಸಿದ್ದರಾಮಯ್ಯ ತಮ್ಮ ಬಟ್ಟೆ ಮೇಲೆ ಕಪ್ಪು ಚುಕ್ಕಿ ಇಲ್ಲ ಎನ್ನುತ್ತಿದ್ದರು ಇದೀಗ ಬಟ್ಟೆ ತುಂಬಾ ಬಣ್ಣ ಆಗಿದೆ ಎಂದು ಲೇವಡಿ ಮಾಡಿದರು.