- ವಿಜಯ್ ಮಲಗಿಹಾಳ

ಬೆಂಗಳೂರು(ಅ.09): ಸದ್ಯಕ್ಕೆ ಯಾವುದೇ ಸಾರ್ವತ್ರಿಕ ಚುನಾವಣೆ ಇಲ್ಲದಿದ್ದರೂ ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆ ಬಲಗೊಳಿಸುವ ಉದ್ದೇಶದಿಂದ ಆಡಳಿತಾರೂಢ ಬಿಜೆಪಿ, ಉತ್ತರ ಕರ್ನಾಟಕದಲ್ಲಿ ಅನ್ಯ ಪಕ್ಷಗಳಿಂದ ದೊಡ್ಡ ಮಟ್ಟದ ನಾಯಕರನ್ನು ಕರೆತರುವ ತಂತ್ರ ರೂಪಿಸಿದೆ.

"

ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಈಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಬಹುದು ಎಂಬ ಲೆಕ್ಕಾಚಾರದ ಆಧಾರದ ಮೇಲೆ ಭವಿಷ್ಯದಲ್ಲಿ ಅದರಿಂದಾಗುವ ಕೊರತೆಯನ್ನು ಭರಿಸಲು ಬಿಜೆಪಿ ವರಿಷ್ಠರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ವಿವಿಧ ಸಮುದಾಯಗಳ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಮುದಾಯದ ಮುಖಂಡರನ್ನು ಕರೆತರುವ ಪ್ರಯತ್ನ ಸದ್ದಿಲ್ಲದೇ ನಡೆದಿದೆ.

ಇತ್ತೀಚೆಗಷ್ಟೇ ಧಾರವಾಡ ಜಿಲ್ಲೆಯ ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಇದೀಗ ಅದರ ಬೆನ್ನಲ್ಲೇ ಮುಂಬೈ ಕರ್ನಾಟಕ ಭಾಗದ ಮತ್ತೊಬ್ಬ ಲಿಂಗಾಯತ ನಾಯಕರೂ ಆಗಿರುವ ವಿಜಯಪುರ ಜಿಲ್ಲೆಯ ಕಾಂಗ್ರೆಸ್ಸಿನ ಮಾಜಿ ಸಚಿವರೊಬ್ಬರನ್ನು ಬಿಜೆಪಿ ನಾಯಕರು ಸಂಪರ್ಕಿಸಿ ಸಮಾಲೋಚನೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

"

ಬೆಳಗಾವಿ ಟಿಕೆಟ್‌ ಅಂಗಡಿ ಕುಟುಂಬಕ್ಕೆ ನೀಡಲು ಲಾಬಿ, ಅಂಗಡಿ ಪುತ್ರಿ ಪರ ಶೆಟ್ಟರ್‌!

ಒಂದು ವೇಳೆ ಆ ಮಾಜಿ ಸಚಿವರು ಒಪ್ಪಿದಲ್ಲಿ ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿದ ಅಶೋಕ್‌ ಗಸ್ತಿ ಅವರಿಂದ ತೆರವಾಗಿರುವ ರಾಜ್ಯಸಭೆಗೆ ಕಳುಹಿಸಿ ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರನ್ನಾಗಿಸುವ ಪ್ರಸ್ತಾಪವನ್ನು ಬಿಜೆಪಿ ನಾಯಕರು ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಆ ಮಾಜಿ ಸಚಿವರು ಇದುವರೆಗೆ ತಮ್ಮ ಅಂತಿಮ ನಿರ್ಧಾರ ತಿಳಿಸಿಲ್ಲ. ಯೋಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ನಿರಾ​ಶ​ರಾ​ಗಿ​ರುವ ಕಾಂಗ್ರೆಸ್‌ ನಾಯ​ಕ:

ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರಿಂದ ತುಸು ದೂರ ಉಳಿದಿರುವ ಆ ಮಾಜಿ ಸಚಿವರು ಕೆಲದಿನಗಳ ಹಿಂದೆ ನಡೆದ ಕಾಂಗ್ರೆಸ್ಸಿನ ರಾಷ್ಟ್ರೀಯ ಪದಾಧಿಕಾರಿಗಳ ನೇಮಕದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಂತರ ನಡೆದ ಬೆಳವಣಿಗೆಗಳಿಂದ ನಿರಾಸೆ ಹೊಂದಿರುವ ಅವರು ಕಾಂಗ್ರೆಸ್ಸಿನಲ್ಲಿ ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಹೀಗಾಗಿ, ಬಿಜೆಪಿಯತ್ತ ವಲಸೆ ಬರಬಹುದು ಎಂಬ ಲೆಕ್ಕಾಚಾರ ಬಿಜೆಪಿ ಪಾಳೆಯದಲ್ಲಿದೆ.

ಈ ಮಾಜಿ ಸಚಿವರು ಸದ್ಯ ಶಾಸಕರೂ ಆಗಿರುವುದರಿಂದ ಹಿಂದೆ ಬಿಜೆಪಿ ಸರ್ಕಾರ ರಚನೆ ವೇಳೆಯೂ ಅವರ ಹೆಸರು ಕೇಳಿಬಂದಿತ್ತು. ಬಿಜೆಪಿ ನಾಯಕರು ಅವರನ್ನು ಸಂಪರ್ಕಿಸಿ ಆಹ್ವಾನ ನೀಡಿದ್ದರು. ಆದರೆ, ಆ ವೇಳೆ ಬಿಜೆಪಿಗೆ ಬರಲು ನಿರಾಕರಿಸಿದ ಮಾಜಿ ಸಚಿವರು ಈಗ ಮನಸ್ಸು ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ.

ಯಡಿಯೂರಪ್ಪ ಅವರ ನಂತರ ಬಿಜೆಪಿಗೆ ಪ್ರಬಲ ಬೆಂಬಲ ನೀಡುತ್ತಿರುವ ಲಿಂಗಾಯತ ಸಮುದಾಯ ಕೈಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಿದೆ. ಲಿಂಗಾಯತ ಸಮುದಾಯ ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದೆ. ಹೀಗಾಗಿ, ಆ ಭಾಗದ ಇತರ ಪಕ್ಷಗಳಲ್ಲಿನ ಲಿಂಗಾಯತ ಮುಖಂಡರನ್ನು ನಮ್ಮ ಪಕ್ಷಕ್ಕೆ ಕರೆತರುವ ಮೂಲಕ ಮುಂದಾಗುವ ಕೊರತೆಯನ್ನು ಭರಿಸಿಕೊಳ್ಳಲು ಈಗಿನಿಂದಲೇ ತಂತ್ರ ರೂಪಿಸಬೇಕಾಗಿದೆ. ಆ ತಂತ್ರದ ಭಾಗವಾಗಿಯೇ ಹಲವು ಮುಖಂಡರ ಜೊತೆ ಮಾತುಕತೆ, ಸಮಾಲೋಚನೆ ನಡೆದಿದೆ. ಇದರಲ್ಲಿ ಎಷ್ಟುಮಂದಿ ಬಿಜೆಪಿಗೆ ಬರುತ್ತಾರೆ ಎಂಬುದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ ಎಂದು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬಿಜೆಪಿಯ ದೆಹಲಿ ಮಟ್ಟದ ನಾಯಕರೊಬ್ಬರು ಮಾಹಿತಿ ನೀಡಿದರು.