ಬೆಂಗಳೂರು(ಡಿ.26): ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಂದು ಹೇಳಿಕೆ ಮೂಲಕ ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಸಂಕ್ರಾಂತಿಯ ವೇಳೆಗೆ ರಾಜ್ಯ ರಾಜಕೀಯ ಕ್ರಾಂತಿಯಾಗಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು ಇವರ ಹೇಳಿಕೆಯಿಂದ ಪಕ್ಷದಲ್ಲಿ ಭಾರೀ ಸಂಚಲನ ಮೂಡಿಸಿದೆ. ಯತ್ನಾಳ್ ಹೇಳಿಕೆಯಿಂದ ರಾಜ್ಯ ಬಿಜೆಪಿ ಮುಜುಗರಕ್ಕೊಳಗಾಗಿದೆ.  ಹೀಗಾಗಿ ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ನಾಯಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. 

ಸಂಕ್ರಮಣ ಬಳಿಕ ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗುತ್ತೆ: ಬಿಜೆಪಿ ನಾಯಕನ ಮಾತು

ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪಕ್ಷದಿಂದ ನೋಟಿಸ್ ಕೊಡುವ ಬಗ್ಗೆ ಗಂಭೀರವಾದ ಚರ್ಚೆ ನಡೆದಿದೆ. ಆಕ್ಷೇಪಾರ್ಹ ಹೇಳಿಕೆಗಳನ್ನ ನಿಲ್ಲಿಸುವಂತೆ ಈ ಮೂಲಕ ತಾಕೀತು ಮಾಡುವ ಸಾಧ್ಯತೆ ಇದೆ. ಪಕ್ಷದ ಒಳಗೆ ಯತ್ನಾಳ್ ಹೇಳಿಕೆಯಿಂದ ಸಂಚಲನ ಉಂಟಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ನಾಯಕರು ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರಿಗೆ ಮಾಹಿತಿ ರವಾನೆ ಮಾಡಿದ್ದಾರೆ. 

ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನು ಕೇಂದ್ರದ ನಾಯಕರಿಗೂ ತಿಳಿಸಲು ಪ್ಲಾನ್‌ ಕೂಡ ಮಾಡಲಾಗುತ್ತಿದೆ. ನಂತರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಮಾಹಿತಿ ರವಾನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಅರುಣ್ ಸಿಂಗ್ ಜೊತೆಗೆ ನಳಿನ್ ಕುಮಾರ್​ ಕಟೀಲ್ ಮಾತುಕತೆಯಾಗುವ ಸಾಧ್ಯತೆ ಇದೆ. 

ಅರುಣ್ ಸಿಂಗ್ ಅವರ ಸೂಚನೆಯಂತೆ ಜನವರಿ 2 ರ ಬಳಿಕ ಯತ್ನಾಳ್‌ಗೆ ನೊಟೀಸ್ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಜನವರಿ 1 ರಂದು ರಾಜ್ಯಕ್ಕೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಲಿದ್ದಾರೆ. ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕಾರಿಣಿಯಲ್ಲಿ ಅರುಣ್ ಸಿಂಗ್ ಭಾಗವಹಿಸಲಿದ್ದಾರೆ.