ಕರ್ನಾಟಕದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದ ಎಸ್‌.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಇಬ್ಬರೂ ಕಳೆದ ಬಾರಿ ಕುಮಾರಸ್ವಾಮಿ ಸರ್ಕಾರವನ್ನು ಕೆಡವಿ ಬಿಜೆಪಿ ಸೇರಿದ್ದರು.

ಬೆಂಗಳೂರು (ಮೇ 27): ಕರ್ನಾಟಕದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದ ಎಸ್‌.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಇಂದಿನಿಂದ 6 ವರ್ಷಗಳ ಕಾಲ ಇಬ್ಬರನ್ನೂ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಇಬ್ಬರೂ ಶಾಸಕರು ಮೂಲವಾಗಿ ಕಾಂಗ್ರೆಸ್‌ ಪಕ್ಷದವರಾಗಿದ್ದು, ಕಳೆದ ಅವಧಿಯಲ್ಲಿ ಕುಮಾರಸ್ವಾಮಿ ಸರ್ಕಾರವನ್ನು ಕೆಡವಿ ಬಿಜೆಪಿಗೆ ಸೇರ್ಪಡೆಯಾಗಿ ಗೆದ್ದು ಸಚಿವರಾಗಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯ ಪಕ್ಷದ ಪರವಾಗಿ ಕೆಲಸ ಮಾಡದೇ ಕಾಂಗ್ರೆಸ್ ಪಕ್ಷದ ಪರವಾಗಿ ಹಾಗೂ ಕಾಂಗ್ರೆಸ್ ನಾಯಕರ ಪರವಾಗಿ ಮಾತನಾಡುತ್ತಿದ್ದರು. ಬಿಜೆಪಿಯಿಂದ ಕೈಗೊಳ್ಳುವ ಯಾವುದೇ ನಿರ್ಣಯಕ್ಕೂ ಅವರು ಬದ್ಧತೆ ಪ್ರದರ್ಶನ ಮಾಡುತ್ತಿರಲಿಲ್ಲ. 

ಸರ್ಕಾರದಿಂದ ಮಾಡುವ ಎಲ್ಲ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ನಾಯಕರಂತೆ ಗುರುತಿಸಿಕೊಂಡು, ವಿರೋಧ ಪಕ್ಷದವರಂತೆ ಕೆಲಸ ಮಾಡದೇ ಬಿಜೆಪಿ ಪಕ್ಷದ ಕಾರ್ಯ ಚಟುವಟಿಕೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಎಷ್ಟೇ ಎಚ್ಚರಿಕೆ ನೀಡಿದರೂ ತಮ್ಮ ನಡೆಯನ್ನು ತಿದ್ದಿಕೊಳ್ಳದ ಹಿನ್ನೆಲೆಯಲ್ಲಿ ಇದೀಗ ಯಶವಂತಪುರ ವಿಧಾನಸಭಾ ಕ್ಷೇತ್ರ ಎಸ್‌.ಟಿ. ಸೋಮಶೇಖರ್ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್ ಇಬ್ಬರನ್ನೂ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.

ವಿಜಯೇಂದ್ರ ಪ್ರತಿಕ್ರಿಯೆ:

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಇವರಿಬ್ಬರೂ ಪಕ್ಷ ವಿರೋಧಿ ಕೆಲಸ ಮಾಡಿದ್ದರು. ಕೇಂದ್ರಕ್ಕೆ ಮನವಿ ಮಾಡಿದ್ದೆವು. ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದೆವು. ಇದೀಗ ಕೇಂದ್ರದಿಂದ ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ಎಸ್‌.ಟಿ. ಸೋಮಶೇಖರ್ ಇಬ್ಬರನ್ನ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ನಮ್ಮ ಪಕ್ಷದ ತೀರ್ಮಾನಕ್ಕೆ ಡಿ.ಕೆ. ಶಿವಕುಮಾರ್ ಅವರು ನೋವುಪಡುವ ಅಗತ್ಯವಿಲ್ಲ. ಪಕ್ಷ ವಿರೋಧಿ ಕೆಲಸ ಮಾಡಿದ್ದು ಅವರಿಗೂ ಗೊತ್ತು. ಕೇಂದ್ರದ ನಾಯಕರಿಗೂ ಗೊತ್ತು. ಪಕ್ಷದಲ್ಲಿ ಅಧಿಕಾರ ಅನುಭವಿಸಿದ್ದರು. ವಿಪಕ್ಷದಲ್ಲಿ ಕೂರಲು ಕಷ್ಟ ಆಯ್ತು ಅನ್ಸತ್ತೆ. ಕೇಂದ್ರ ಶಿಸ್ತು ಸಮಿತಿ ನಿರ್ಧಾರ ಸ್ವಾಗತಿಸುತ್ತೇನೆ ಎಂದರು.

ಅವರೇನು ರೇಪ್ ಮಾಡಿದ್ರಾ? ಇಲ್ಲಾ ಹೆಚ್‌ಐವಿ ಇಂಜೆಕ್ಷನ್ ಮಾಡಿದ್ರಾ?

ಎಸ್.ಟಿ ಸೋಮಶೇಖರ್, ಹೆಬ್ಬಾರ್ ಉಚ್ಛಾಟನೆ ವಿಚಾರದ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಎಸ್.ಟಿ.ಸೋಮಶೇಖರ್ ಆಗಲಿ, ಶಿವರಾಂ ಹೆಬ್ಬಾರ್ ಆಗಲಿ ಅವರು ರೇಪ್ ಮಾಡಿದ್ದಾರಾ? ವಿಧಾನಸೌಧಸಲ್ಲಿ ಏನಾದ್ರೂ ರೇಪ್ ಮಾಡಿದ್ದಾರಾ? ಅವರೇನು ಹೆಚ್ ಐವಿ ಇಂಜೆಕ್ಷನ್ ಚುಚ್ಚಿದ್ದಾರಾ? ಮುತ್ತುರತ್ನಗಳನ್ನೆಲ್ಲ ಅವರೇ ಇಟ್ಟುಕೊಳ್ಳಲಿ. ಪರೋಕ್ಷವಾಗಿ ಮುನಿರತ್ನ ಯಾಕೆ ಮಾಡಲಿಲ್ಲ. ಇವರಿಬ್ಬರನ್ನ ಯಾಕೆ ಮಾಡಿದರು ಎಂದು ಬಿಜೆಪಿ ನಾಯಕರನ್ನ ಲೇವಡಿ ಮಾಡಿದರು.

ಕೆಲವು ತಿಂಗಳ ಹಿಂದೆ ಶಾಸಕ ಯತ್ನಾಳ್ ಉಚ್ಛಾಟನೆ:
ಇನ್ನು ಬಿಜೆಪಿಯ ನಾಯಕರಿಗೆ ಅಗೌರವ ತೋರುವುದು ಹಾಗೂ ಬಿಜೆಪಿಯ ಒಗ್ಗಟ್ಟಿಗೆ ಧಕ್ಕೆ ತರುವ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಇತ್ತೀಚಿನ ಕೆಲವು ತಿಂಗಳ ಹಿಂದೆ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೂ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು. ಇವರು ಯಾವುದೇ ಬೇರೆ ಪಕ್ಷದ ಜೊತೆಗೆ ಗುರುತಿಸಿಕೊಂಡಿರಲಿಲ್ಲ. ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ, ವಿಜಯೇಂದ್ರ ಅವರು ರಾಜ್ಯಧ್ಯಕ್ಷ ಆಗಿದ್ದನ್ನು ವಿರೋಧ ಮಾಡುತ್ತಿದ್ದರು. ಬಿಜೆಪಿಯ ಕೆಲವು ನಾಯಕರೊಂದಿಗೆ ಪ್ರತ್ಯೇಕ ಸಭೆ, ಪ್ರತ್ಯೇಕ ಹೋರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನೂ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿತ್ತು.