ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಅಭ್ಯರ್ಥಿ ಆಯ್ಕೆಗೆ ಕಸರತ್ತು ತೀವ್ರಗೊಳಿಸಿದ್ದಾರೆ. ಈಗಾಗಲೇ 7 ಹೆಸರು ಘೋಷಿಸಿರುವ ಕಾಂಗ್ರೆಸ್ ಇದೀಗ 15 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ.
ಬೆಂಗಳೂರು(ಮಾ.12): ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವಾಗಲೇ, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಅಭ್ಯರ್ಥಿ ಆಯ್ಕೆಗೆ ಕಸರತ್ತು ತೀವ್ರಗೊಳಿಸಿದ್ದಾರೆ. ಈಗಾಗಲೇ 7 ಹೆಸರು ಘೋಷಿಸಿರುವ ಕಾಂಗ್ರೆಸ್ ಇದೀಗ 15 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬಿ.ಎಲ್. ಸಂತೋಷ್ ಅವರೂ ಇದ್ದರು. ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಇಂದು/ನಾಳೆ ಕರ್ನಾಟಕದ 15-20 ಕ್ಷೇತ್ರಗಳ ಬಿಜೆಪಿ ಪಟ್ಟಿ ಪ್ರಕಟ?, ಇಲ್ಲಿದೆ ಸಂಭಾವ್ಯರ ಪಟ್ಟಿ
ಮತ್ತೊಂದೆಡೆ, ಈಗಾಗಲೇ 7 ಅಭ್ಯರ್ಥಿಗಳ ಹೆಸರು ಪ್ರಕಟಿಸಿರುವ ಕಾಂಗ್ರೆಸ್, ಉಳಿದ 21 ಅಭ್ಯರ್ಥಿಗಳ ಆಯ್ಕೆ ಸಲುವಾಗಿ ಸೋಮವಾರ ತಡರಾತ್ರಿವರೆಗೆ ಸ್ಕ್ರೀನಿಂಗ್ ಸಮಿತಿ ಸಭೆ ನಡೆಸಿತು. ಹದಿನೈದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ತೀವ್ರ ಪೈಪೋಟಿಯಿರುವ ಆರು ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವ ಬಗ್ಗೆ ತಡರಾತ್ರಿಯವರೆಗೂ ಚರ್ಚೆ ನಡೆದಿತ್ತು. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಿತಿ ಸದಸ್ಯರಾದ ಜಿಗ್ನೇಶ್ ಮೇವಾನಿ, ವಿಶ್ವಜಿತ್ ಕದಮ್ ಸೇರಿ ಹಲವರು ಭಾಗವಹಿಸಿದ್ದರು.
