ಕರ್ನಾಟಕದ ಸಾರ್ವಭೌಮತ್ವ ಕಾಪಾಡುತ್ತೇವೆಂಬ ಸೋನಿಯಾ ನುಡಿ ದೇಶ ವಿಭಜನೆ ಸಂಕೇತ: ಬಿಜೆಪಿ, ಸೋನಿಯಾ ವಿರುದ್ಧ ಕ್ರಮ ಮತ್ತು ಕಾಂಗ್ರೆಸ್‌ ಪಕ್ಷದ ಮಾನ್ಯತೆ ರದ್ದತಿಗೆ ಬಿಜೆಪಿ ಆಗ್ರಹ, ಮಲ್ಲಿಕಾರ್ಜುನ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್‌

ಬೆಂಗಳೂರು/ನವದೆಹಲಿ(ಮೇ.09):  ‘ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ, ‘ಕರ್ನಾಟಕದ ಸಾರ್ವಭೌಮತ್ವ ಕಾಪಾಡಲಾಗುವುದು’ ಎಂದು ಹೇಳಿರುವ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ನೀಡಿರುವ ಮಾನ್ಯತೆ ರದ್ದುಗೊಳಿಸಬೇಕು’ ಎಂದು ಭಾರತೀಯ ಜನತಾ ಪಕ್ಷ, ದಿಲ್ಲಿಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಇದೇ ವೇಳೆ, ಸೋಮವಾರ ಕೇಂದ್ರ ಸಚಿವೆ ಹಾಗೂ ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ ಕೇಂದ್ರ ಆಯೋಗದ ಕಚೇರಿಗೂ ದೂರು ಸಲ್ಲಿಸಿದ್ದಾರೆ.
ಇದರ ಬೆನ್ನಲ್ಲೇ ಆಯೋಗವು ಈ ಬಗ್ಗೆ ಸ್ಪಷ್ಟನೆ ಕೋರಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನೋಟಿಸ್‌ ನೀಡಿದೆ.

Karnataka Election 2023: ಬೆಂಗಳೂರು ರೀತಿ, ಹುಬ್ಬಳ್ಳಿ, ಮಂಗಳೂರು, ಮೈಸೂರು ಅಭಿವೃದ್ಧಿ, ಪ್ರಿಯಾಂಕಾ

ದೂರು ಏನು?:

ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ನೇತೃತ್ವದಲ್ಲಿ ಸೋಮವಾರ ಆಯೋಗಕ್ಕೆ ಈ ಬಗ್ಗೆ ಮನವಿ ಸಲ್ಲಿಸಿರುವ ಬಿಜೆಪಿ ನಿಯೋಗ ‘ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಅತ್ಯಂತ ಪ್ರಮುಖ ಸದಸ್ಯ ರಾಜ್ಯವಾಗಿದೆ. ಆದರೆ ಇಂಥ ರಾಜ್ಯದ ಸಾರ್ವಭೌಮತ್ವ ಕಾಪಾಡುವುದಾಗಿ ನೀಡಿರುವ ಹೇಳಿಕೆಯು ರಾಜ್ಯವನ್ನು ಪ್ರತ್ಯೇಕಗೊಳಿಸುವ ಕರೆಯನ್ನು ಕೊಡುವ ರೀತಿಯಲ್ಲಿದೆ. ಇಂಥ ಯಾವುದೇ ಪ್ರಯತ್ನವು ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಬಲ್ಲದು. ಇಂಥ ಹೇಳಿಕೆಯು ಕಟ್ಟಾರಾಷ್ಟ್ರೀಯವಾದಿಗಳನ್ನು, ಶಾಂತಿಯನ್ನು ಪ್ರೀತಿಸುವವರನ್ನು, ಪ್ರಗತಿಪರರನ್ನು ಮತ್ತು ಜಾಗತಿಕವಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಜನರನ್ನು ಪ್ರಚೋದಿಸುವ ಯತ್ನವಾಗಿದೆ. ಇದರ ಹಿಂದೆ ಜನರ ನೆಮ್ಮದಿ ಹಾಳು ಮಾಡುವ, ಸೌಹಾರ್ಧತೆಗೆ ಧಕ್ಕೆ ತರುವ ಮತ್ತು ಶಾಂತಿಯನ್ನು ಕದಡುವ ಉದ್ದೇಶವನ್ನು ಹೊಂದಿದೆ. ಭಾರತದ ರಾಜ್ಯವಾಗಿರುವುದನ್ನು ವಿರೋಧಿಸುವ ಆಯ್ದ ಸಮುದಾಯ ಅಥವಾ ಗುಂಪುಗಳ ಮತಗಳಿಕೆಯ ಉದ್ದೇಶದಿಂದ ಇಂಥ ಹೇಳಿಕೆ ನೀಡಲಾಗಿದೆ’ ಎಂದು ಆರೋಪಿಸಿದೆ.

ಶೋಭಾ ಆಕ್ರೋಶ:

ಬೆಂಗಳೂರಿನಲ್ಲಿ ಶೋಭಾ ಕರಂದ್ಲಾಜೆ ಮಾತನಾಡಿ, ‘ಹುಬ್ಬಳ್ಳಿಯಲ್ಲಿ ಸೋನಿಯಾ ಗಾಂಧಿ ಅವರು ಭಾರತದ ಸಾರ್ವಭೌಮತ್ವದ ವಿರುದ್ಧ ಮಾತು ಆಡಿದ್ದಾರೆ. ದೇಶದ ಏಕತೆ, ಅಖಂಡತೆ, ಭದ್ರತೆ, ಸಾರ್ವಭೌಮತ್ವದ ಮಾತನ್ನು ಬಿಜೆಪಿ ಹೇಳುತ್ತದೆ. ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ನಾಯಕರು ದೇಶ ವಿಭಜನೆ ಮಾಡುವ, ವೋಟ್‌ ಬ್ಯಾಂಕ್‌ ರಾಜಕಾರಣದ ಉದ್ದೇಶ ಹೊಂದಿದ್ದಾರೆ. ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೋನಿಯಾ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸೋನಿಯಾ ಹೇಳಿದ್ದೇನು?

ಮೇ 6ರಂದು ಹುಬ್ಬಳ್ಳಿಯಲ್ಲಿ ಸೋನಿಯಾ ಗಾಂಧಿ ಭಾಷಣ ಮಾಡಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌, ‘ಕರ್ನಾಟಕದ ಘನತೆ, ಸಾರ್ವಭೌಮತೆ ಅಥವಾ ಸಮಗ್ರತೆಗೆ ಬೆದರಿಕೆ ಹಾಕಲು ಯಾರಿಗೂ ಕಾಂಗ್ರೆಸ್‌ ಅವಕಾಶ ನೀಡುವುದಿಲ್ಲ ಎಂದು ಸೋನಿಯಾ ಹೇಳಿದ್ದಾರೆ. 6.5 ಕೋಟಿ ಕನ್ನಡಿಗರಿಗೆ ಬಲವಾದ ಸಂದೇಶ ರವಾನಿಸಿದ್ದಾರೆ’ ಎಂದು ಹೇಳಿತ್ತು. ಬಳಿಕ ಈ ಬಗ್ಗೆ ಕರ್ನಾಟಕ ಚುನಾವಣಾ ಪ್ರಚಾರದ ವೇಳೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ತುಕ್ಡೇ ತುಕ್ಡೇ ಗ್ಯಾಂಗಿನ ಕಾಯಿಲೆ ಇದೀಗ ಕಾಂಗ್ರೆಸ್‌ನ ಉನ್ನತ ನಾಯಕರನ್ನೂ ತಲುಪಿದೆ’ ಎಂದು ಪರೋಕ್ಷವಾಗಿ ಸೋನಿಯಾ ಹೇಳಿಕೆ ವಿರುದ್ಧ ಕಿಡಿಕಾರಿದ್ದರು.

ಮತದಾನಕ್ಕೆ ಕ್ಷಣಗಣನೆ: ಭದ್ರತೆಗೆ 1,56,000 ಪೋಲಿಸರ ನಿಯೋಜನೆ..!

ಸಾರ್ವಭೌಮತೆ ಹೇಳಿಕೆ ದೇಶ ವಿಭಜಿಸುವ ಸಂಚು

‘ಕರ್ನಾಟಕದ ಸಾರ್ವಭೌಮತೆ ಕಾಪಾಡುವ ಕುರಿತು ಸೋನಿಯಾ ಗಾಂಧಿ ನೀಡಿರುವ ಹೇಳಿಕೆಯು, ದೇಶವನ್ನು ವಿಭಜಿಸುವ ಕಾಂಗ್ರೆಸ್‌ನ ಆಳವಾದ ಸಂಚನ್ನು ಬಹಿರಂಗಪಡಿಸಿದೆ. ಬಿಜೆಪಿಯ ಒಂದು ದೇಶ ಒಂದು ಧ್ವಜ ನೀತಿಯನ್ನು ಅಣಕವಾಡುವ ಸಲುವಾಗಿ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ರಚಿಸುವ ಕಾಂಗ್ರೆಸ್‌ನ ಕುಚೇಷ್ಟೆಯ ಯತ್ನವನ್ನು ರಾಜ್ಯದ ಜನರು ಇನ್ನೂ ಮರೆತಿಲ್ಲ. ಸೋನಿಯಾ ಅಥವಾ ಕಾಂಗ್ರೆಸ್‌, ಎಂದಿಗೂ ಭಾರತವನ್ನು ಒಂದು ದೇಶವನ್ನು ಒಪ್ಪಿಲ್ಲ, ಕಾಂಗ್ರೆಸ್‌ನ ಇಂಥ ಯೋಜನೆಯನ್ನು ಕನ್ನಡಿಗರು ಈ ಬಾರಿ ವಿಫಲಗೊಳಿಸಲಿದ್ದಾರೆ ಅಂತ ಕೇಂದ್ರ ವಾರ್ತಾ-ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ. 

‘ಸ್ವಾತಂತ್ರ್ಯದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮತ್ತು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಕಲೆ, ಸಂಸ್ಕೃತಿ, ಶಿಕ್ಷಣ, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯವನ್ನು ಪ್ರತ್ಯೇಕಿಸುವ ಸಣ್ಣದೊಂದು ಸುಳಿವು ನೀಡುವ ಇಂಥ ಹೇಳಿಕೆಗಳು ದುರದೃಷ್ಟಕರ ಮತ್ತು ಸೂಕ್ತವಲ್ಲದಾಗಿದೆ. ಜೊತೆಗೆ ರಾಜ್ಯದ ಜನರನ್ನು ಅವಮಾನಿಸುವ ಮತ್ತು ಅಪಮಾನಿಸುವ ಕೆಲಸವಾಗಿದೆ. ಹೀಗಾಗಿ ಟ್ವೀಟ್‌ ಮೂಲಕ ಇಂಥ ಹೇಳಿಕೆ ನೀಡಿದ ಸೋನಿಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ದೇಶದ ಸಮಗ್ರತೆ ಕಾಪಾಡುವುದಾಗಿ ಜನಪ್ರತಿನಿಧಿ ಕಾಯ್ದೆಯಡಿ ತೆಗೆದುಕೊಂಡಿರುವ ಪ್ರಮಾಣವನ್ನು ಉಲ್ಲಂಘಿಸಿರುವ ಕಾಂಗ್ರೆಸ್‌ ಪಕ್ಷಕ್ಕೆ ನೀಡಿರುವ ಮಾನ್ಯತೆ ರದ್ದುಪಡಿಸಬೇಕು’ ಎಂದು ಬಿಜೆಪಿ ಮನವಿ ಮಾಡಿದೆ.