ನಿರುದ್ಯೋಗ ನಿವಾರಣೆಯೇ ನಮ್ಮ ಮೊದಲ ಆದ್ಯತೆ. ರಾಜ್ಯದ ಯುವಕರಿಗೆ ಸ್ಟಾರ್ಚ್‌ಅಪ್ ಯೋಜನೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 10 ಕೋಟಿ ರು. ಮೀಸಲಿಡುತ್ತೇವೆ. ಬೀದರ್‌ನಿಂದ ಚಾಮರಾಜನಗರದವರೆಗೆ ಕೈಗಾರಿಕಾ ಕಾರಿಡಾರ್ ಮಾಡುತ್ತೇವೆ. ಉದ್ಯೋಗ ಸೃಷ್ಟಿಗೆ ಇರುವ ಎಲ್ಲಾ ಅವಕಾಶಗಳನ್ನೂ ಬಳಸಿಕೊಳ್ಳುತ್ತೇವೆ: ಪ್ರಿಯಾಂಕಾ ಗಾಂಧಿ
ಬೆಂಗಳೂರು(ಮೇ.09): ‘ರಾಜಧಾನಿ ಬೆಂಗಳೂರಿನಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಮಾಡುವುದು ನಮ್ಮ ಗುರಿ. ಜತೆಗೆ ಹುಬ್ಬಳ್ಳಿ, ಮಂಗಳೂರು ಹಾಗೂ ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳನ್ನು ಬೆಂಗಳೂರಿನ ರೀತಿ ಮಾಡಬೇಕು ಎಂಬುದು ಕಾಂಗ್ರೆಸ್‌ನ ಕಲ್ಪನೆ. ಯುವಜನತೆಯ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕರೆ ನೀಡಿದ್ದಾರೆ.
ಬೆಂಗಳೂರಿನ ವಿಜಯನಗರ ಕ್ಷೇತ್ರದಲ್ಲಿ ಗೋವಿಂದರಾಜನಗರ ಹಾಗೂ ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ರೋಡ್ ಶೋ ನಡೆಸಿದ ಅವರು, ‘ನಿರುದ್ಯೋಗ ನಿವಾರಣೆಯೇ ನಮ್ಮ ಮೊದಲ ಆದ್ಯತೆ. ರಾಜ್ಯದ ಯುವಕರಿಗೆ ಸ್ಟಾರ್ಚ್‌ಅಪ್ ಯೋಜನೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 10 ಕೋಟಿ ರು. ಮೀಸಲಿಡುತ್ತೇವೆ. ಬೀದರ್‌ನಿಂದ ಚಾಮರಾಜನಗರದವರೆಗೆ ಕೈಗಾರಿಕಾ ಕಾರಿಡಾರ್ ಮಾಡುತ್ತೇವೆ. ಉದ್ಯೋಗ ಸೃಷ್ಟಿಗೆ ಇರುವ ಎಲ್ಲಾ ಅವಕಾಶಗಳನ್ನೂ ಬಳಸಿಕೊಳ್ಳುತ್ತೇವೆ’ ಎಂದು ಹೇಳಿದರು.
ರಾಹುಲ್, ಪ್ರಿಯಾಂಕಾ 41 ರ‍್ಯಾಲಿ, 12 ರೋಡ್ ಶೋ
ಈವರೆಗಿನ ಚುನಾವಣಾ ಪ್ರಚಾರದಲ್ಲಿ ಜನರ ಬವಣೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ಬೆಳಕು ಚೆಲ್ಲಿದೆ. ನಮ್ಮ ತಾಯಂದಿರಿಗೆ ಗ್ಯಾಸ್ ಸೇರಿದಂತೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆಯೇರಿಕೆ ಸಂಕಷ್ಟಗೊತ್ತಾಗಿದೆ. ಜನರ ಕಷ್ಟಅರಿತು ನಡೆದುಕೊಳ್ಳಲು ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ಶಾಸಕರನ್ನು ಖರೀದಿ ಅಧಿಕಾರಕ್ಕೆ ಬಂದ ಬಿಜೆಪಿ ಮೂರು ವರ್ಷದಿಂದ ಜನರ ಹಣ ಲೂಟಿ ಹೊಡೆಯುವುದರಲ್ಲಿ ನಿರತವಾಗಿದೆ. 40 ಪರ್ಸೆಂಟ್ ಕಮಿಷನ್ ಹೆಸರಿನಲ್ಲಿ ರಾಜ್ಯದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ ಕಳೆದಿದೆ. ಸರ್ಕಾರದ ಪ್ರತಿ ಕೆಲಸದಲ್ಲೂ ಲಂಚದ ಧ್ವನಿ ರಿಂಗಣಿಸುತ್ತಿದೆ. ಇದಕ್ಕೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಹೇಳಿದರು.
ಬೆಂಗಳೂರು ವಿಚಾರದಲ್ಲಂತೂ ಬಿಜೆಪಿಯ ನಿರ್ಲಕ್ಷ್ಯ ಮಿತಿ ಮೀರಿದೆ. ರಸ್ತೆ ಗುಂಡಿಗಳಿಂದಾಗಿಯೇ 30 ಮಂದಿ ಬಲಿಯಾಗಿದ್ದಾರೆ. ನರೇಂದ್ರ ಮೋದಿ ಬಂದಾಗ ಅವರು ಓಡಾಡುವ ರಸ್ತೆ ಹೊರತುಪಡಿಸಿ ಬೇರೆ ರಸ್ತೆ ಗುಂಡಿ ಮುಚ್ಚುವುದಿಲ್ಲ. ರಸ್ತೆ ಗುಂಡಿ ಮುಚ್ಚುವುದರಲ್ಲಿ ಆಗಿರುವ ಅಕ್ರಮವೂ ಜನರ ಮುಂದಿದೆ. ನಮ್ಮ ಸರ್ಕಾರ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಖರ್ಚು ಮಾಡಲಿದೆ. ಹೀಗಾಗಿ ಯೋಚಿಸಿ ಅಭಿವೃದ್ಧಿ ಪರ ಮತ ನೀಡಿ ಎಂದು ಮನವಿ ಮಾಡಿದರು.
ಇದಕ್ಕೂ ಮೊದಲು ಚಿಕ್ಕಪೇಟೆ ಕ್ಷೇತ್ರದಲ್ಲಿ ಆರ್.ವಿ. ದೇವರಾಜ ಪರ ಪ್ರಿಯಾಂಕ ಗಾಂಧಿ ಅವರ ರೋಡ್ ಶೋ ನಿಗದಿಯಾಗಿತ್ತು. ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ರೋಡ್ ಶೋ ರದ್ದಾಯಿತು. ಹೀಗಾಗಿ ಸೋಮವಾರ ವಿಜಯನಗರ ರೋಡ್ ಶೋಗೆ ಮಾತ್ರ ಪ್ರಿಯಾಂಕಾ ಗಾಂಧಿ ಅವರ ಪ್ರಚಾರ ಸೀಮಿತವಾಯಿತು.
