ಯಶವಂತಪುರ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ವಿರುದ್ಧ ಬಿಜೆಪಿ ದೂರು
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಪ್ರಮಾಣದಲ್ಲಿ ಕೆಲವು ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ನಾಮಪತ್ರಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಬೆಂಗಳೂರು (ಏ.22): ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಪ್ರಮಾಣದಲ್ಲಿ ಕೆಲವು ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ನಾಮಪತ್ರಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರ ಚುನಾವಣಾ ಏಜೆಂಟ್ ಎಂ.ಕೃಷ್ಣದಾಸ್ ಎಂಬುವವರು ಯಶವಂತಪುರ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ನಾಮಪತ್ರದ ಜತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಕೆಲವು ಅಂಶಗಳನ್ನು ಕೈ ಬಿಟ್ಟಿದ್ದಾರೆ. ಜವರಾಯಿಗೌಡ ಅವರು ಎರಡು ಕ್ರಿಮಿನಲ್ ಪ್ರಕರಣಗಳನ್ನು ಆಸ್ತಿ ವಿವರ ಪ್ರಮಾಣ ಪತ್ರದಲ್ಲಿ ಮಾಹಿತಿ ನೀಡಿಲ್ಲ.
ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿಲ್ಲ. ಜವರಾಯಿಗೌಡ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದ ಕುರಿತು ಮಾತ್ರ ನಮೂದಿಸಿದ್ದಾರೆ. ಉಳಿದ ಎರಡು ಪ್ರಕರಣಗಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಉದ್ದೇಶಪೂರ್ವಕವಾಗಿಯೇ ಮರೆಮಾಚಲಾಗಿದೆ ಎಂದು ಆಕ್ಷೇಪಣೆಯಲ್ಲಿ ಆರೋಪಿಸಲಾಗಿದೆ. ಇನ್ನು, ಸ್ಥಿರಾಸ್ತಿ ವಿಚಾರದಲ್ಲಿಯೂ ಕೆಲವು ಅಂಶಗಳ ಕುರಿತು ಮಾಹಿತಿ ಒದಗಿಸಿಲ್ಲ. ಸಜ್ಜೆಪಾಳ್ಯದ ಬಳಿ 17.20 ಎಕರೆ ಜಮೀನಿನ ಬಗ್ಗೆ ಉಲ್ಲೇಖ ಮಾಡಿಲ್ಲ. ಇದರ ಮೌಲ್ಯವು ಪ್ರಸ್ತುತ .65.62 ಕೋಟಿ ಇದೆ. ಚುನಾವಣಾ ಆಯೋಗಕ್ಕೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದಾರೆ.
500ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತ: ನಾಡಿದ್ದು ಅಂತಿಮ ಕಣ ರೆಡಿ
ಹೀಗಾಗಿ ಚುನಾವಣಾ ಆಯೋಗವು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆಕ್ಷೇಪಣೆಗೆ ದಾಖಲಾತಿ ಮತ್ತು ಲಿಖಿತ ಸಮಜಾಯಿಷಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಜೆಡಿಎಸ್ ಅಭ್ಯರ್ಥಿ ಕೆಲವೊಂದು ಕ್ರಿಮಿನಲ್ ಪ್ರಕರಣಗಳನ್ನು ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ನಮ್ಮ ಚುನಾವಣಾ ಏಜೆಂಟ್ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಎರಡು ಕ್ರಿಮಿನಲ್ ಪ್ರಕರಣವನ್ನು ಮುಚ್ಚಿಟ್ಟು ನಾಮಪತ್ರ ಸಲ್ಲಿಸಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಹೀಗಾಗಿ ಆಕ್ಷೇಪಣೆಗೆ ದಾಖಲೆ ಸಲ್ಲಿಸುವಂತೆ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದಾರೆ.
-ಎಸ್.ಟಿ.ಸೋಮಶೇಖರ್, ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
ಬ್ರಾಹ್ಮಣರೇಕೆ ರಾಜಕಾರಣದಲ್ಲಿ ಮೇಲೆ ಬರುತ್ತಿಲ್ಲ?: ಅಶೋಕ ಹಾರನಹಳ್ಳಿ
ಬಿಜೆಪಿ ನನ್ನ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ದೂರು ನೀಡಿದೆ. ಚುನಾವಣಾಧಿಕಾರಿಗಳನ್ನು ಭೇಟಿಯಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇನೆ. ನಾಮಪತ್ರದಲ್ಲಿ ಯಾವುದೇ ಲೋಪ ಇಲ್ಲವೆಂದು ನಾಮಪತ್ರ ಅಂಗೀಕರಿಸಲಾಗಿದೆ. ಬಿಜೆಪಿ ಶಾಸಕರು ಸೋಲಿನ ಹತಾಶೆಯಿಂದ ಈ ರೀತಿಯಾದ ಷಡ್ಯಂತ್ರ ಮಾಡುತ್ತಿದ್ದಾರೆ. ನಾನು ಮೂರು ಬಾರಿ ಸೋಲನುಭವಿಸಿದ್ದು, ಜನರ ಅನುಕಂಪ ನನ್ನ ಮೇಲೆ ಇದೆ. ನಾನು ಗೆಲ್ಲುತ್ತೇನೆ ಎಂದು ಈ ರೀತಿಯಾಗಿ ಷಡ್ಯಂತ್ರ ಮಾಡಿದ್ದಾರೆ. ಎಲ್ಲದ್ದಕ್ಕೂ ಮತದಾರರು 20 ದಿನದಲ್ಲಿ ಉತ್ತರ ನೀಡಲಿದ್ದಾರೆ. ನನ್ನ ಬಳಿಯೂ ಶಾಸಕರ ಅಕ್ರಮದ ದಾಖಲೆಗಳಿವೆ. ಅವುಗಳನ್ನು ಬಿಡುಗಡೆ ಮಾಡುತ್ತೇನೆ.
-ಜವರಾಯಿಗೌಡ, ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ