ಪಕ್ಷವು ಈಗಾಗಲೇ ಅಭ್ಯರ್ಥಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿದೆ. ಮುಂದಿನ ಪ್ರಕ್ರಿಯೆಗಳು ನಡೆಯಬೇಕಿದೆ. ಏಪ್ರಿಲ್ 7 ಅಥವಾ 8ರೊಳಗೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬೆಂಗಳೂರು(ಮಾ.30): ರಾಜ್ಯ ವಿಧಾನಸಭೆಗೆ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಪ್ರಕಟಿಸಲು ಸಿದ್ಧತೆ ಆರಂಭಿಸಿದ್ದು, ಏಪ್ರಿಲ್ 7 ಅಥವಾ 8ರೊಳಗೆ ಪಟ್ಟಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಪಕ್ಷವು ಈಗಾಗಲೇ ಅಭ್ಯರ್ಥಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿದೆ. ಮುಂದಿನ ಪ್ರಕ್ರಿಯೆಗಳು ನಡೆಯಬೇಕಿದೆ. ಏಪ್ರಿಲ್ 7 ಅಥವಾ 8ರೊಳಗೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಈಗಾಗಲೇ ಸಮೀಕ್ಷೆಯ ವರದಿಗಳಿವೆ. ಅದರೊಂದಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಭಿಪ್ರಾಯಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಕ್ರೂಢೀಕರಿಸಿ ಪಟ್ಟಿಕೇಂದ್ರ ಸಂಸದೀಯ ಮಂಡಳಿಗೆ ಕಳುಹಿಸಲಾಗುವುದು. ಒಂದು ವಾರ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಚುನಾವಣೇಲಿ ‘ಖರ್ಗೆ ಫ್ಯಾಕ್ಟರ್’..!
ಸಾಮಾನ್ಯವಾಗಿ ಬಿಜೆಪಿ ಇತರ ರಾಜಕೀಯ ಪಕ್ಷಗಳಿಗಿಂತ ಮುಂಚಿತವಾಗಿಯೇ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಿತ್ತು. ಆದರೆ, ಈ ಬಾರಿ ಅದು ತಿರುಗು ಮುರುಗು ಆಗಿದೆ. ಕಾಂಗ್ರೆಸ್, ಜೆಡಿಎಸ್ ಜತೆಗೆ ಆಮ್ ಆದ್ಮಿ ಪಕ್ಷ ಕೂಡ ತಮ್ಮ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಹಲವು ದಿನಗಳ ಹಿಂದೆಯೇ ಪ್ರಕಟಿಸಿವೆ. ಅದರಲ್ಲೂ ಜೆಡಿಎಸ್ ಮೂರು ತಿಂಗಳ ಹಿಂದೆಯೇ ಪಟ್ಟಿಪ್ರಕಟಿಸಿತ್ತು. ಬಳಿಕ ಆಮ್ ಆದ್ಮಿ ಪಕ್ಷ. ನಂತರ ಕಾಂಗ್ರೆಸ್. ಆದರೆ, ಬಿಜೆಪಿಯಲ್ಲಿ ಮಾತ್ರ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಮಾತೇ ಹೊರಬಿದ್ದಿರಲಿಲ್ಲ. ಚುನಾವಣಾ ವೇಳಾಪಟ್ಟಿಘೋಷಣೆಯಾದ ಬಳಿಕವೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ಪಕ್ಷದ ನಾಯಕರು ಹೇಳುತ್ತಿದ್ದರು.
ಇದೀಗ ಬುಧವಾರ ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಬಳಿಕ ಬರುವ ಏಪ್ರಿಲ್ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ಸಾಧ್ಯತೆ ಕಂಡು ಬರುತ್ತಿದೆ.
ಈ ಬಾರಿ ಶತಾಯಗತಾಯ ತನ್ನ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ವರಿಷ್ಠರು ಅಭ್ಯರ್ಥಿಗಳ ಆಯ್ಕೆಗಿಂತ ಪಕ್ಷ ಸಂಘಟನೆ ಬಲಪಡಿಸಲು ಹಾಗೂ ಚುನಾವಣಾ ರಣತಂತ್ರ ರೂಪಿಸಲು ಹೆಚ್ಚು ಒತ್ತು ನೀಡಿದ್ದರು. ಅಭ್ಯರ್ಥಿಗಳ ಆಯ್ಕೆ ಕೊನೆಯ ಹಂತ. ಪ್ರಾರಂಭಿಕ ಕೆಲಸಗಳನ್ನು ಮುಗಿಸಿದ ಬಳಿಕವೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದು ಸೂಕ್ತ. ಇದರಿಂದ ಭಿನ್ನಾಭಿಪ್ರಾಯ, ಬಂಡಾಯಕ್ಕೆ ಹೆಚ್ಚು ಅವಕಾಶ ಸಿಗುವುದಿಲ್ಲ ಎಂಬ ಅಭಿಪ್ರಾಯವನ್ನು ಪಕ್ಷದ ನಾಯಕರು ಹೊಂದಿದ್ದರು. ಹೀಗಾಗಿ, ಇನ್ನೊಂದು ವಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿಜೆಪಿಯಲ್ಲಿ ಬಿರುಸಿನಿಂದ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
