ಪ್ರಧಾನಿ ನರೇಂದ್ರ ಮೋದಿ ತನ್ನ ತವರು ಕ್ಷೇತ್ರದಲ್ಲಿ ತಿರುಗಾಡ್ತಾ ಇರ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮಾಷೆಯ ಆರೋಪದ ನಡುವೆಯೇ, ತವರು ಕ್ಷೇತ್ರದಲ್ಲಿ ಖರ್ಗೆಯನ್ನು ಮಣಿಸಲು ಮೋದಿ ರಣರಂತ್ರ ಹೂಡಿದ್ದಾರೆ. ಚಿತ್ತಾಪುರದಲ್ಲಿ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆಯನ್ನು ಮಣಿಸಲು ಮಣಿಕಂಠನನ್ನೇ ಕಣಕ್ಕಿಳಿಸಿದೆ. 

ಬೆಂಗಳೂರು (ಏ.11): ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಕೈ ಪಡೆಯನ್ನು ಕಟ್ಟಿಹಾಕಲು ಕಮಲ ಪಡೆ ನವೀನ ರಣತಂತ್ರ ರೂಪಿಸಿದೆ. ಪ್ರಧಾನಿ ನರೇಂದ್ರ ಮೋದಿ ತನ್ನ ತವರಲ್ಲೇ ತಿರುಗಾಡ್ತಾ ಇರ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರ ತಮಾಷೆಯ ಟೀಕೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಖರ್ಗೆ ತವರಿನಲ್ಲಿ ಬಿಜೆಪಿಯನ್ನು ಅರಳಿಸಲು ಸಖತ್‌ ರಣತಂತ್ರ ರೂಪಿಸಿದ್ದಾರೆ. ಮೊದಲ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ 9 ಕ್ಷೇತ್ರಗಳ ಪೈಕಿ 8 ರಲ್ಲಿ ಕದನ ಕಲಿಗಳ ಘೋಷಣೆ ಮಾಡಲಾಗಿದೆ. ಐವರಲ್ಲಿ 4 ಹಾಲಿ ಶಾಸಕರು, 2 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಚಿತ್ತಾಪುರ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಪುತ್ರ ಪ್ರಿಯಾಂಕ್ ಮಣಿಸಲು ಬಿಗ್ ಪ್ಲಾನ್ ರೂಪಿಸಲಾಗಿದ್ದು, ನಿರೀಕ್ಷೆಯಂತೆ ಮಣಿಕಂಠ ರಾಠೋಡಗೆ ಟಿಕೆಟ್ ನೀಡಲಾಗಿದೆ. ಟಿಕೆಟ್‍ಗಾಗಿ ನಡೆದಿದ್ದ ಅಫಜಲ್ಪುರ ಫೈಟ್‌ನಲ್ಲಿ, ಗುತ್ತೇದಾರ್ ಸಹೋದರರ ಕದನದಲ್ಲಿ ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್‌ಗೆ ಟಿಕೆಟ್‌ ಭಾಗ್ಯ ಒಲಿದು ಬಂದಿದೆ. ಕುಟುಂಬ ರಾಜಕಾರಣದ ಚರ್ಚೆ ಬದಿಗೆ ಸರಿಸಲು ಯಶಸ್ವಿಯಾಗಿರುವ ಕಲಬುರಗಿ ಉತ್ತರದಲ್ಲಿ ಚಂದ್ರಕಾಂತ ಪಾಟೀಲ್‍ಗೆ ಟಿಕೆಟ್‌ ದೊರೆತಿದೆ. ಜೇವರ್ಗಿಯಿಂದ ಈ ಬಾರಿ ಹೊಸಮುಖವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್‌ಗೆ ಹೈಕಮಾಂಡ್‌ ಅವಕಾಶ ನೀಡಿದೆ.

ಈಗಿರುವ ಎಲ್ಲಾ 5 ಹಾಲಿ ಶಾಸಕರ ಪೈಕಿ ನಾಲ್ವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ. ಹಾಲಿ ಬಿಜೆಪಿ ಶಾಸಕರೇ ಇರುವ ಸೇಡಂ ಟಿಕೆಟ್ ಮೊದಲ ಪಟ್ಟಿಯಲ್ಲಿ ಘೋಷಣೆಯಾಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ನಿರೀಕ್ಷೆಯಂತೆಯೇ ತೀವ್ರ ಕುತೂಹಲ ಕೆರಳಿಸಿದ್ದ ಚಿತ್ತಾಪುರ ಮೀಸಲು ಕ್ಷೇತ್ರದಿಂದ ಬಿಜೆಪಿ ಈ ಬಾರಿ ಹೊಸ ಮುಖವಾಗಿ ಮಣಿಕಂಠ ರಾಠೋಡ್‍ಗೆ ಟಿಕೆಟ್ ನೀಡಿ ಕಾಂಗ್ರೆಸ್‍ನ ಸೋಸಿಯಲ್ ಮೀಡಿಯಾ ಮುಖ್ಯಸ್ಥ, ಮಾಜಿ ಮಂತ್ರಿ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ರಣಕಹಳೆ ಘೋಷಿಸಿದೆ.

ಇದಲ್ಲದೆ ಕುಟುಂಬ ರಾಜಕೀಯದ ಹಿನ್ನೆಲೆಯಲ್ಲಿ ಟಿಕೆಟ್ ಕೈ ತಪ್ಪಲಿದೆ ಎಂದು ಹೇಳಲಾಗುತ್ತಿದ್ದ ಕಲಬುರಗಿ ಉತ್ತರದಲ್ಲಿ ಎಂದಿನಂತೆ ಎಂಎಲ್‍ಸಿ ಬಿಜಿ ಪಾಟೀಲ್ ಪುತ್ರ ಚಂದ್ರಕಾಂತ ಪಾಟೀಲರಿಗೇ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ತೀವ್ರ ಜಿದ್ದಾಜಿದ್ದಿ ಇದ್ದ ಅಫಜಲ್ಪುರ ಕ್ಷೇತ್ರದ ಟಿಕೆಟ್ ಸೇರಿದಂತೆ ಉಳಿದೆಲ್ಲಾ ಕ್ಷೇತ್ರಗಳಿಗೂ ನಿರೀಕ್ಷೆಯಂತೆಯೇ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದ್ದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಕೈ ಕಟ್ಟಿಹಾಕುವ ಮೂಲಕ ಎಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಕಮಲ ಅರಳಿಸಲು ಪ್ಲ್ಯಾನ್‌ ರೂಪಿಸಿದೆ.

BJP Candidates List: ಕಾಂಗ್ರೆಸ್‌ ಕಲಿಗಳ ವಿರುದ್ಧ ಹೋರಾಡೋಕೆ ಸಜ್ಜಾದ ಸೋಮಣ್ಣ, ಆರ್‌.ಅಶೋಕ್‌!

ಪ್ರಿಯಾಂಕ್ ಮಣಿಸಲು ಬಿಜೆಪಿ ಮಣಿಕಂಠಾಸ್ತ್ರ: ಈ ಬಾರಿ ಚಿತ್ತಾಪುರದಲ್ಲಿ ಪ್ರಿಯಾಂಕ್‍ಗೆ ಸೋಲಿನ ರುಚಿ ಉಣ್ಣಿಸುವ ಪ್ರಯತ್ನದಲ್ಲಿರುವ ಬಿಜೆಪಿ ತನ್ನ ಯೋಜನೆಯ ಒಂದು ಭಾಗವಾಗಿ ಮಣಿಕಂಠ ರಾಠೋಢ್‌ರನ್ನು ಕಣಕ್ಕಿಳಿಸಿದೆ. ಇತ್ತೀಚೆಗಷ್ಟೇ ಖರ್ಗೆ ಕುಟುಂಬದ ಬಗ್ಗೆ ಹೇಳಿಕೆ ನೀಡುತ್ತಾ ಗಮನ ಸೆಳೆದಿರುವ ಮಣಿಕಂಠ ಚಿತ್ತಾಪುರದಲ್ಲಿ ಪ್ರಿಯಾಂಕ್ ವಿರುದ್ಧ ತೊಡೆ ತಟ್ಟಿರೋದು ಜಿಲ್ಲೆಯ ರಾಜಕೀಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಇಲ್ಲಿಂದ 9 ಮಂದಿ ಆಕಾಂಕ್ಷಿಗಳಿದ್ದರೂ ಸಹ ಹೈಕಮಾಂಡ್ ಮಣಿಕಂಠಗೆ ಟಿಕೆಟ್ ನೀಡಿರೋದು ಬಿಜೆಪಿಯಲ್ಲೇ ಅಚ್ಚರಿಗೆ ಕಾರಣವಾಗಿದೆ. ಮಣಿಕಂಠ ರಾಠೋಡ ವಿರುದ್ಧ ಅಕ್ಕಿ ಅಕ್ರಮ ಸಾಗಾಣಿಕೆಯ ಆರೋಪಗಳಿದ್ದು ಜಿಲ್ಲಾ ಪೊಲೀಸ್‌ ಈತನನ್ನು ಗಡಿಪಾರು ಮಾಡಿ ಆದೇಶ ಕೂಡಾ ಹೊರಡಿಸಿತ್ತು. ಆದರೆ ಹೈಕೋರ್ಟ್‍ನಲ್ಲಿ ಮಣಿಕಂಠ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ಪಡೆದಿದ್ದಾರೆ. ಇದೀಗ ಚುನಾವಣೆಯಲ್ಲಿ ಮಣಿಕಂಠ ಹಾಗೂ ಪ್ರಿಯಾಂಕ್ ಖರ್ಗೆ ವಾಕ್ಸಮರ ತಾರಕ್ಕೇರಲಿದೆ. ಬಂಜಾರಾ ಸಮುದಾಯದ ಮಣಿಕಂಠ ರಾಠೋಡ್‍ಗೆ ಚಿತ್ತಾಪುರದಲ್ಲಿನ ಬಂಜಾರಾ ಸಮಾಜದ ಬೆಂಬಲ ಸಹಜವಾಗಿಯೇ ದೊರಕಲಿದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇವರನ್ನು ಇಲ್ಲಿ ಕಣಕ್ಕಿಳಿಸಿದೆ ಎನ್ನಲಾಗುತ್ತಿದೆ.

BJP Candidates List: ಕರಾವಳಿಗೆ ಬಿಜೆಪಿ ಟಿಕೆಟ್‌ ಸರ್ಜರಿ, ಐದು ಹೊಸ ಹೆಸರು ಘೋಷಣೆ!

ಜೇವರ್ಗಿಯಲ್ಲಿ ಆಕ್ರೋಶ: ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೆ ಜೇವರ್ಗಿ ಕ್ಷೇತ್ರದಲ್ಲಿ ಆಕ್ರೋಶ ಭುಗಿಲೆದ್ದಿದೆ. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಗೆ ಟಿಕೆಟ್ ತಪ್ಪಿರುವ ಹಿನ್ನಲೆಯಲ್ಲಿ ಜೇವರ್ಗಿ ಪಟ್ಟಣದಲ್ಲಿ ದೊಡ್ಡಪ್ಪಗೌಡ ಪಾಟೀಲ್ ಬೆಂಬಲಿಗರ ಪ್ರತಿಭಟನೆ ನಡೆದಿದೆ. ವಿಜಯಪುರ ಕ್ರಾಸ್ ಬಳಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ಬಿಜೆಪಿ ನಾಯಕರ ವಿರುದ್ಧ ದೊಡ್ಡಪ್ಪಗೌಡ ಪಾಟೀಲ್ ಬೆಂಬಲಿಗರ ಆಕ್ರೋಶ. ಜೇವರ್ಗಿ ಕ್ಷೇತ್ರದ ಟಿಕೆಟ್ ಶಿವರಾಜ್ ಪಾಟೀಲ್ ರದ್ದೇವಾಡಗಿ ಗೆ ಹೈಕಮಾಂಡ್‌ ನೀಡಿದೆ. ಶಿವರಾಜ್ ಪಾಟೀಲ್ ರದ್ದೇವಾಡಗಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದು, ಮಾಜಿ ಶಾಸಕ ದೊಡ್ಡಪ್ಪಗೌಡ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.