Asianet Suvarna News Asianet Suvarna News

ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು: ಪಟ್ಟು ಬಿಡದ ಸಂಗಣ್ಣ ಕರಡಿ, ಸಿವಿ ಚಂದ್ರಶೇಖರ!

ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಮತ್ತಷ್ಟುಕಗ್ಗಂಟಾಗುತ್ತಿದ್ದು, ಆಕಾಂಕ್ಷಿಗಳಿಬ್ಬರನ್ನು ಮನವೊಲಿಸುವ ಕಸರತ್ತು ಪಕ್ಷ ನಡೆಸಿದೆ ಎನ್ನಲಾಗಿದೆ.

BJP candidate selection for Koppal Assembly Constituency is difficult rav
Author
First Published Apr 14, 2023, 1:17 PM IST

ಸೋಮರಡ್ಡಿ ಅಳವಂಡಿ

ಕೊಪ್ಪಳ (ಏ.14) : ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಮತ್ತಷ್ಟುಕಗ್ಗಂಟಾಗುತ್ತಿದ್ದು, ಆಕಾಂಕ್ಷಿಗಳಿಬ್ಬರನ್ನು ಮನವೊಲಿಸುವ ಕಸರತ್ತು ಪಕ್ಷ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಅಭ್ಯರ್ಥಿ ಯಾರಾಗಬೇಕು ಎಂದು ಪಕ್ಷದ ಆಂತರಿಕ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಬಂಡಾಯ ಏಳದಂತೆ ಎಚ್ಚರ ವಹಿಸುವುದಕ್ಕಾಗಿಯೇ ಅಳೆದು-ತೂಗಿ ಲೆಕ್ಕಾಚಾರ ಹಾಕಲಾಗುತ್ತಿದೆ. ಸಾಲು ಸಾಲು ಸಭೆ ನಡೆಸಲಾಗುತ್ತಿದೆ.

ಈಗ ಸಿ.ವಿ.ಚಂದ್ರಶೇಖರ(CV Chandrashekhar) ಹಾಗೂ ಸಂಸದ ಸಂಗಣ್ಣ(Sanganna karadi) ಕರಡಿ ಮಧ್ಯೆಯೇ ಫೈಟ್‌ ಜೋರಾಗಿ ನಡೆಯುತ್ತಿದ್ದು, ಇಬ್ಬರಲ್ಲಿ ಯಾರನ್ನು ಹಿಂದಕ್ಕೆ ಸರಿಸುವುದು ಎನ್ನುವುದೇ ಪಕ್ಷಕ್ಕೆ ದೊಡ್ಡ ತಲೆನೋವಾಗಿದೆ. ಇವರಿಬ್ಬರಲ್ಲಿ ಯಾರು ಅಭ್ಯರ್ಥಿಯಾದರೂ ಇನ್ನೊಬ್ಬರು ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುತ್ತಾರೆ ಎಂಬ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸಲು ಪಕ್ಷದ ವರಿಷ್ಠರು ಅಳೆದು ತೂಗಿ, ಸಮಾಧಾನಪಡಿಸುವ ಕಸರತ್ತು ನಡೆಸಿದ್ದಾರೆ.

Ticket fight: ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್‌ ಟೆನ್ಶನ್‌: ಬೆಂಗಳೂರಲ್ಲಿ ಬೀಡುಬಿಟ್ಟಆಕಾಂಕ್ಷಿಗಳು

ಸಂಸದರಿಗೆ ಟಿಕೆಟ್‌ ಕೊಡುವ ಕುರಿತು ತೀರ್ಮಾನ ಇದುವರೆಗೂ ಆಗುತ್ತಿಲ್ಲ. ಈಗಾಗಲೇ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಯಾರೊಬ್ಬರು ಸಂಸದರು ಇಲ್ಲದಿರುವುದರಿಂದ ಅದನ್ನು ಪಕ್ಷದ ಹೈಕಮಾಂಡ್‌ ಕೊಪ್ಪಳಕ್ಕೆ ಮಾತ್ರ ವಿನಾಯತಿ ನೀಡಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದೆ. ಆದರೆ, ಸಂಸದ ಸಂಗಣ್ಣ ಕರಡಿ ಅವರು ತಮಗೆ ಟಿಕೆಟ್‌ ಬೇಕು ಎನ್ನುವ ಬಿಗಿಪಟ್ಟು ಇಕ್ಕಟ್ಟನ್ನು ಸೃಷ್ಟಿಮಾಡಿದೆ. ಸಂಸದ ಸಂಗಣ್ಣ ಕರಡಿ ಅವರ ಪುತ್ರರು ಸೇರಿದಂತೆ ಪಂಚಮಸಾಲಿ ಸಮುದಾಯದ ಯಾರನ್ನೇ ಅಖಾಡಕ್ಕೆ ಇಳಿಸಿದರೂ ಗೆಲವು ಸುಲಭವಾಗುವುದಿಲ್ಲ. ಹೀಗಾಗಿ, ತಮಗೆ ಟಿಕೆಟ್‌ ನೀಡಿದರೆ ಉತ್ತಮ ಎನ್ನುವ ಅಭಿಪ್ರಾಯ ನೀಡುತ್ತಿದ್ದಾರೆ ಎನ್ನುವುದೇ ದೊಡ್ಡ ಸವಾಲು ಆಗಿದೆ.

ಸಭೆಯಲ್ಲಿ ಚರ್ಚೆಗೆ ಬಂದಿದ್ದು:

ರಾಘವೇಂದ್ರ ಹಿಟ್ನಾಳ ವಿರುದ್ಧ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 2013 ಮತ್ತು 2018 ರಲ್ಲಿ ಸತತವಾಗಿ ಪಕ್ಷ ಸೋಲು ಅನುಭವಿಸಿರುವುದರಿಂದ ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಅಳೆದು-ತೂಗಿ ನಿರ್ಣಯ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ಇಬ್ಬರ ಹೆಸರು ಚರ್ಚೆ:

ಪಂಚಮಸಾಲಿ ಸಮುದಾಯದ ಯಾರಿಗಾದರೂ ಟಿಕೆಟ್‌ ಕೊಡಬೇಕೆ ಎನ್ನುವ ಕುರಿತು ಚರ್ಚೆಯಾಗಿದೆ. ಇದಕ್ಕಾಗಿ ಡಾ.ಕೆ.ಬಸವರಾಜ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಹೆಸರು ಕೇಳಿ ಬಂದಿವೆ. ಇವರಿಬ್ಬರೂ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಇವರನ್ನು ಅಖಾಡಕ್ಕೆ ಇಳಿಸಬೇಕು ಎನ್ನುವ ವದಂತಿಯೂ ಜೋರಾಗಿ ನಡೆಯಿತು. ಆದರೆ, ಇದ್ಯಾವುದು ಅಧಿಕೃತ ಮಾಹಿತಿಯಿಂದ ಹೊರಬಿದ್ದಿಲ್ಲ. ಆದರೆ, ಪಕ್ಷ ಆಂತರಿಕವಾಗಿ ಪರಾಮರ್ಶೆ ಮಾಡುವ ವೇಳೆಯಲ್ಲಿ ಈ ಹೆಸರು ಮುನ್ನೆಲೆಗೆ ಬಂದಿವೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆ: ಕೊಪ್ಪಳ ಬಿಜೆಪಿ ಟಿಕೆಟ್‌ಗೆ ಸಿವಿಸಿ- ಕರಡಿ ಮೆಗಾ ಫೈಟ್‌!

ಬಂಡಾಯದ ಭೀತಿ

ಇದೆಲ್ಲದರ ನಡುವೆಯೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಈಗ ಬಂಡಾಯದ ಭೀತಿ ಎದುರಾಗಿದೆ. ಯಾರಿಗೆ ಟಿಕೆಟ್‌ ಕೊಟ್ಟರೂ ಬಂಡಾಯ ಏಳುವುದು ಪಕ್ಕಾ ಎನ್ನಲಾಗುತ್ತಿದೆ.

ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್‌ ನೀಡಿದರೆ ಸಿ.ವಿ.ಚಂದ್ರಶೇಖರ ಅಖಾಡಕ್ಕೆ ಇಳಿಯುವ ಸಾಧ್ಯತೆ ಪಕ್ಷ ಲೆಕ್ಕಾಚಾರ ಮಾಡುತ್ತಿದೆ. ಹಾಗೆಯೇ ಸಿ.ವಿ.ಚಂದ್ರಶೇಖರ ಅವರಿಗೆ ಟಿಕೆಟ್‌ ನೀಡಿದರೇ ಸಂಸದ ಸಂಗಣ್ಣ ಕರಡಿ ಅಥವಾ ಅವರ ಪುತ್ರರು ಅಖಾಡಕ್ಕೆ ಇಳಿಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಹೀಗಾಗಿ ಇಲ್ಲಿ ಏನೇ ಮಾಡಿದರೂ ಬಂಡಾಯ ಭೀತಿ ಪಕ್ಷದ ಹೈಕಮಾಂಡ್‌ಗೆ ದೊಡ್ಡ ಚಿಂತೆಯಾಗಿದೆ. ಇದಕ್ಕಿಂತ ಮಿಗಿಲಾಗಿ ಪಂಚಮಸಾಲಿ ಸಮುದಾಯದಿಂದ ಬೇರೆ ಯಾರಾದರೂ ಸಂಸದ ಸಂಗಣ್ಣ ಕರಡಿ, ಸಿ.ವಿ.ಚಂದ್ರಶೇಖರ ಅಖಾಡದಲ್ಲಿರುತ್ತಾರೆ ಎನ್ನುವ ಲೆಕ್ಕಚಾರವೂ ತಲೆ ಕೆಳಗಾಗುವಂತೆ ಮಾಡಿದೆ.

Follow Us:
Download App:
  • android
  • ios