ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರ ಮ್ಯಾರಥಾನ್ ಮೀಟಿಂಗ್ ಅಂತ್ಯಗೊಂಡಿದೆ. ನಾಳೆ ಅಂತಿಮ ಸುತ್ತಿನ ಸಭೆ ಬಳಿಕ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. 175 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಸಾಧ್ಯತೆ ಇದೆ.

ನವದೆಹಲಿ(ಏ.09): ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ಸತತ ಸಭೆ ನಡೆಸುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಸೇರಿ ರಾಜ್ಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ನಾಳೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ 175 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ. ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಲಾಗಿದೆ. ನಾಳೆ ಅಥವಾ ನಾಡಿದ್ದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.

ಇಂದು ದೆಹಲಿಯಲ್ಲಿ ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ಕರ್ನಾಟಕ 224 ಕ್ಷೇತ್ರಗಳ ಚರ್ಚೆ ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ಸಂಸದೀಯ ಸಮಿತಿ ಸದಸ್ಯರಾದ ಬಿಎಸ್ ಯಡಿಯೂರಪ್ಪ, ರಾಜನಾಥ್ ಸಿಂಗ್, ಸರ್ಬಾನಂದ್ ಸೋನುವಾಲ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಕಾಂಗ್ರೆಸ್‌ಗೆ ಸೆಡ್ಡುಹೊಡೆದು ಬಿಜೆಪಿ ಸೇರಿದ ನಾಗರಾಜ್‌ ಛಬ್ಬಿ: ಸಂತೋಷ್‌ ಲಾಡ್‌ಗೆ ಪೈಪೋಟಿ

8-9 ಹಾಲಿ ಶಾಸಕರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆಯಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ನಾಳೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಇತ್ತ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಕ್ಷೇತ್ರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯಿಂದ ಸ್ಪರ್ಧಿಸುವುದಾಗಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ರಾಜ್ಯ ಕೋರ್‌ ಕಮಿಟಿ ಹಾಗೂ ಚುನಾವಣಾ ಸಮಿತಿಗಳ ಸಭೆ ಸುದೀರ್ಘ ಕಾಲ ನಡೆದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಮೂವರು ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಒಳಗೊಂಡ ಪಟ್ಟಿಸಿದ್ಧಪಡಿಸಿತ್ತು. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಅವರು ಈ ಪಟ್ಟಿಯನ್ನು ದೆಹಲಿಗೆ ಕೊಂಡೊಯ್ದಿದು ಬಿಜೆಪಿ ವರಿಷ್ಠರಿಗೆ ನೀಡಿದ್ದರು. ಇಂದಿನ ಸಂಸದೀಯ ಮಂಡಳಿ ಸಭೆಯಲ್ಲಿ ಈ ಪಟ್ಟಿಯ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಲಾಗಿದೆ. 

ಮೋದಿಯೇ ಆಹ್ವಾನ ನೀಡಿದರೂ ತಿರಸ್ಕರಿಸಿದ್ದೆ, ನನ್ನ ನಡೆಗೆ ಕ್ಷಮೆ ಇರಲಿ: ಮಾಜಿ ಕಾಂಗ್ರೆಸ್ ನಾಯಕ ಅಜಾದ್!

ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಸ್ಥಳೀಯ ಮುಖಂಡರ ಹಾಗೂ ಜಿಲ್ಲಾ ಕೋರ್‌ ಕಮಿಟಿಗಳ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ರಾಜ್ಯ ಮಟ್ಟದ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ಈ ಪಟ್ಟಿ ಜೊತೆಗೆ ಸಮೀಕ್ಷಾ ವರದಿ, ಜಿಲ್ಲಾ ವರದಿ ಸೇರಿದಂತೆ ಹಲವು ವರದಿಗಳನ್ನು ಬಿಜೆಪಿ ಹೈಕಮಮಾಂಡ್ ಮಂದಿಟ್ಟು ಅಭ್ಯರ್ಥಿಗಳ ಆಯ್ಕೆಗೆ ಚರ್ಚೆ ನಡೆಸಿದೆ.