ಸೇರಬೇಕೋ? ಬೇಡವೋ? ಜೆಡಿಎಸ್‌ಗೆ ಜಿಜ್ಞಾಸೆ, ಸಿದ್ದು ನೇತೃತ್ವದ ಕಾಂಗ್ರೆಸ್ ಬಗ್ಗೆ ಜೆಡಿಎಸ್ ನಾಯಕರಿಗೆ ವಿರೋಧಿ ನಿಲುವು, ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಜತೆ ಕೈಜೋಡಿಸುವ ಮನಸ್ಸಿಲ್ಲ, ಈ ವಿಷಯ ಅರಿತ ಬಿಜೆಪಿ ನಾಯಕರಿಂದ ಜೆಡಿಎಸ್ ಸೆಳೆಯಲು ಪ್ರಯತ್ನ, ಲೋಕಸಭೆ ಚುನಾವಣೆಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ, ಎನ್‌ಡಿಎ ವಿರುದ್ಧ ಪಟನಾದಲ್ಲಿ ನಡೆದ ಸಭೆಗೆ ಗೈರಾಗಿದ್ದ ಜೆಡಿಎಸ್
ಬೆಂಗಳೂರು(ಜು.10): ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಜೆಡಿಎಸ್ ಪಕ್ಷವನ್ನು ಎನ್‌ಡಿಎ ಒಕ್ಕೂಟದೊಂದಿಗೆ ಕರೆದೊಯ್ಯುವ ಪ್ರಯತ್ನ ಬಿಜೆಪಿ ಪಾಳೆಯದಿಂದ ಆರಂಭವಾಗಿದೆ. ಇತ್ತೀಚೆಗೆ ಎನ್‌ಡಿಎಗೆ ವಿರುದ್ಧವಾಗಿ ಬಿಹಾರದ ಪಟನಾದಲ್ಲಿ ನಡೆದ ವಿಪಕ್ಷಗಳ ಒಕ್ಕೂಟದ ಸಭೆಯಲ್ಲಿ ಜೆಡಿಎಸ್ ಪಾಲ್ಗೊಂಡಿರಲಿಲ್ಲ. ಜೆಡಿಎಸ್ ಪಕ್ಷದ ನಾಯಕರಿಗೂ ಈ ಬಗ್ಗೆ ಗೊಂದಲ ಶುರುವಾಗಿದೆ. ಯಾರೊಂದಿಗಾದರೂ ಕೈಜೋಡಿಸಬೇಕೆ ಅಥವಾ ವೈಯಕ್ತಿಕವಾಗಿ ಹೆಜ್ಜೆ ಹಾಕಬೇಕೆ ಎಂಬುದರ ಬಗ್ಗೆ ಇನ್ನೂ ಜಿಜ್ಞಾಸೆ ನಡೆಯುತ್ತಿದೆ ಎನ್ನಲಾಗಿದೆ.
ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಬಗ್ಗೆ ವಿರೋಧದ ನಿಲುವನ್ನು ಹೊಂದಿರುವ ಜೆಡಿಎಸ್ ನಾಯಕರಿಗೆ ಕೇಂದ್ರದಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಜತೆ ಕೈಜೋಡಿಸುವ ಮನಸ್ಸಿಲ್ಲ. ಹೀಗಾಗಿಯೇ ತಟಸ್ಥ ನೀತಿ ಅನುಸರಿಸುವ ಬಗ್ಗೆ ಪಕ್ಷದ ಹಲವು ನಾಯಕರು ಅಭಿಪ್ರಾಯ ಹೊಂದಿದ್ದಾರೆ. ಇದನ್ನು ಅರಿತ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರದೊಂದಿಗೆ ಜೆಡಿಎಸ್ ಪಕ್ಷವನ್ನು ಎನ್‌ಡಿಎ ಒಕ್ಕೂಟದತ್ತ ಸೆಳೆಯುವ ಲೆಕ್ಕಾಚಾರ ಆರಂಭವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಷರತ್ತುಗಳ ಹೆಸರಲ್ಲಿ ಒಂದು ವರ್ಗಕ್ಕೆ ಕೊಟ್ಟು ಇನ್ನೊಂದು ವರ್ಗಕ್ಕೆ ಟೋಪಿ ಹಾಕಿದ ಸರ್ಕಾರವಿದು: ಎಚ್‌ಡಿಕೆ ಕಿಡಿ
ಒಂದು ವೇಳೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಬದಲು ಬೇರೊಬ್ಬರು ಮುಖ್ಯಮಂತ್ರಿಯಾಗಿದ್ದರೆ ಆಗ ಜೆಡಿಎಸ್ ಲೆಕ್ಕಾಚಾರ ಬೇರೆ ಆಗಿರುವ ಸಾಧ್ಯತೆಯಿತ್ತು. ಇದೀಗ ತಮ್ಮ ಬದ್ಧ ರಾಜಕೀಯ ವೈರಿ ಸಿದ್ದರಾಮಯ್ಯ ಅವರ ಕಾರಣಕ್ಕಾಗಿಯೇ ಕಾಂಗ್ರೆಸ್ ಜತೆ ಪರೋಕ್ಷವಾಗಿಯಾದರೂ ಕೈಜೋಡಿಸಲು ಹಿಂದೇಟು ಹಾಕುತ್ತಿದೆ. ಇದನ್ನೇ ಬಳಸಿಕೊಂಡು ಜೆಡಿಎಸ್ ಸೆಳೆಯಲು ಪ್ರಯತ್ನ ನಡೆದಿದೆ. ಇದು ಯಶಸ್ವಿಯಾಗುವುದೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕು.
ತೆಲುಗುದೇಶಂ, ಅಕಾಲಿ, ಎಲ್‌ಜೆಪಿ ಘರ್ ವಾಪಸಿ?
ನವದೆಹಲಿ: ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಇರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಜು.18ರಂದು ತನ್ನ ಪಾಲುದಾರರ ಸಭೆ ಕರೆದಿದೆ. ಈ ಹಿಂದೆ ಮುನಿಸಿಕೊಂಡು ಎನ್‌ಡಿಎ ಬಿಟ್ಟು ಹೋಗಿದ್ದ ಶಿರೋಮಣಿ ಅಕಾಲಿದಳ (ಎಸ್‌ಎಡಿ) ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ…, ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
