ಕರ್ನಾಟಕದಲ್ಲಿ 25-30 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರಿದ್ದು, ಕಾಂಗ್ರೆಸ್ ಅವರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸುತ್ತಿರುವ ಕಾಂಗ್ರೆಸ್, ನಕಲಿ ದಾಖಲೆಗಳ ಮೂಲಕ ಅಕ್ರಮ ವಲಸಿಗರಿಗೆ ಬೆಂಬಲ?
ಬೆಂಗಳೂರು (ಅ.15): ಕರ್ನಾಟಕದಲ್ಲಿ 25-30 ಲಕ್ಷ ಮಂದಿ ಅಕ್ರಮ ಬಾಂಗ್ಲಾ ವಲಸಿಗರು(Illegal Bangladeshi Migrants) ಇದ್ದಾರೆ. ಈ ಕಾಂಗ್ರೆಸ್ ವೋಟ್ ಬ್ಯಾಂಕ್(Vote bank) ಕಾರಣಕ್ಕೆ ಈ ಅಕ್ರಮ ಬಾಂಗ್ಲಾ ವಲಸಿಗರ ಪರ ನಿಂತು ಎಸ್ಐಆರ್(SIR) ವಿರೋಧಿಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿ ಒಕ್ಕೂಟದ ಆರೋಪಗಳು ಸತ್ಯಕ್ಕೆ ದೂರವಾಗಿವೆ
ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಂಡಿ ಕೂಟದ ಜತೆ ರಾತ್ರೋರಾತ್ರಿ ಹುಟ್ಟಿಕೊಂಡಿರುವ ಸಂಘಟನೆಗಳು ದೇಶದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಇಲ್ಲಸಲ್ಲದ ಆರೋಪ, ತಪ್ಪು ಮಾಹಿತಿ ಕೊಡುವ ಕೆಲಸ ಮಾಡುತ್ತಿವೆ. ಈ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದರು.
ಒಬ್ಬ ವ್ಯಕ್ತಿಗೆ ಒಂದೇ ಮತ: ಎಸ್ಐಆರ್ ಪಾರದರ್ಶಕ
ದೇಶದಲ್ಲಿ 21 ವರ್ಷಗಳ ಬಳಿಕ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿದೆ. ಒಬ್ಬ ವ್ಯಕ್ತಿಗೆ ಒಂದೇ ಮತ ಇರಬೇಕು ಎನ್ನುವ ನಿಟ್ಟಿನಲ್ಲಿ ಪಾರದರ್ಶಕವಾಗಿ ಈ ಎಸ್ಐಆರ್ ನಡೆಸಲಾಗುತ್ತಿದೆ. ಇದರ ಬಗ್ಗೆ ಜ್ಞಾನ ಇಲ್ಲದ, ತಿಳಿವಳಿಕೆ ಇಲ್ಲದೆ ಮನಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ನೂರು ಬಾರಿ ಸುಳ್ಳು ಹೇಳಿ, ಒಂದು ಬಾರಿ ಸತ್ಯ ಮಾಡಬೇಕು ಎಂಬುವುದು ಇವರ ಉದ್ದೇಶವಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಟಂ ಬಾಂಬ್, ಹೈಡ್ರೋಜನ್ ಬಾಂಬ್ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಮುಖಾಂತರ ಸರಿ ಮಾಡುತ್ತಿದ್ದರೆ, ಇವರು ಮತ ತೆಗೆದು ಹಾಕಿದರು, ಡಿಲೀಟ್ ಮಾಡುತ್ತಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಕ್ರಮ ವಲಸಿಗರಿಗೆ ಪಿಆರ್ಸಿ ಪ್ರಮಾಣಪತ್ರ!
ರಾಜ್ಯದಲ್ಲಿ ನಿಯಮಾನುಸಾರ ಫಾರ್ಮ್ 7 ಸಲ್ಲಿಸಿದ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಗೃಹ ಇಲಾಖೆ ದುರ್ಬಳಕೆ ಆಗುತ್ತಿದೆ. ಸಹಿ ಫೋರ್ಜರಿ ಆಗಿದೆ ಎಂದು ಯಾರು ದಾಖಲೆ ನೀಡಿದರು? ಸುಖಾಸುಮ್ಮನೆ ಫೋರ್ಜರಿ ಆಗಿದೆ ಎಂದು ಕೇಸ್ ಹಾಕುತ್ತಿದ್ದಾರೆ. ಈ ಕಾಂಗ್ರೆಸ್ ಬಾಂಗ್ಲಾ, ರೋಹಿಂಗ್ಯ ಪರವಿದೆ. ರಾಜ್ಯದಲ್ಲಿ 25-30 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ. ಇವರಿಗೆ ಕಾಯಂ ನಿವಾಸ ಪ್ರಮಾಣ ಪತ್ರ(ಪಿಆರ್ಸಿ) ನೀಡಿ ಮತದಾರರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ನಕಲಿ ಜನ್ಮದಾಖಲೆ, ನಕಲಿ ವಾಸ ದೃಢೀಕರಣ ಪತ್ರ ಸೃಷ್ಟಿಸಲಾಗುತ್ತಿದೆ. ಮತ ಬ್ಯಾಂಕ್ಗಾಗಿ ಕಾಂಗ್ರೆಸ್ ಸುಳ್ಳು ಆಪಾದನೆ ಮಾಡುತ್ತಿದೆ. ಎಸ್ಐಆರ್ ಜತೆಗೆ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಫಾರ್ಮ್-6 ವಿಶೇಷ ಅಭಿಯಾನ ನಡೆಯುತ್ತಿದೆ. ಮತಗಳವು ಬಗ್ಗೆ ರಾಹುಲ್ ಗಾಂಧಿಗೆ ಚಾಟಿ ಬೀಸಿದ ಕೆ.ಎನ್.ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡರು. ಈ ಕಾಂಗ್ರೆಸ್ಗೆ ಸಂವಿಧಾನ ಮತ್ತು ಸತ್ಯ ಇಷ್ಟ ಆಗಲ್ಲ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಹರಿಹಾಯ್ದರು.
ನವರಾತ್ರಿ ವೇಳೆ ರಾಹುಲ್ ಗಾಂಧಿ ರಾಕ್ಷಸ ಗುಣ ಪ್ರದರ್ಶನ
ರಾಹುಲ್ ಗಾಂಧಿ ದೆಹಲಿಯಲ್ಲಿ ನಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜುಬ್ಬಾ ಹಿಡಿದು ಎಳೆದು ಬಾಕ್ಸರ್ ರೀತಿ ಹೊಡೆದಿದ್ದಾರೆ. ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಮನುಷ್ಯತ್ವ ಇಲ್ಲದ ಮನುಷ್ಯ ರಾಹುಲ್ ನವರಾತ್ರಿ ವೇಳೆ ರಾಕ್ಷಸ ಗುಣ ಪ್ರದರ್ಶಿಸಿದ್ದಾರೆ.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಡಿಸಿಎಂ


