Asianet Suvarna News Asianet Suvarna News

ಗುಜರಾತಲ್ಲಿ ಮತ್ತೆ ಬಿಜೆಪಿಗೇ ಭರ್ಜರಿ ಗೆಲುವು: ಸಮೀಕ್ಷೆ

ಕಳೆದ ಬಾರಿಗಿಂತ 40+ ಸೀಟು ಅಧಿಕ ಗಳಿಕೆ ಸಾಧ್ಯತೆ, ಹಿಮಾಚಲದಲ್ಲೂ ಪುನರಾಯ್ಕೆ ಸಂಭವ

BJP Again Get Power in Gujarat Says Survey grg
Author
First Published Oct 3, 2022, 12:30 AM IST

ನವದೆಹಲಿ(ಅ.03):  ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಎಬಿಪಿ ನ್ಯೂಸ್‌-ಸಿ ವೋಟರ್‌ ಸಮೀಕ್ಷೆ ಭವಿಷ್ಯ ನುಡಿದಿದೆ. ಗುಜರಾತ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌ರ ಆಪ್‌ ಈ ಸಲ ಕಣ ಪ್ರವೇಶಿಸಿರುವ ಕಾರಣ ತ್ರಿಕೋನ ಸಮರ ಏರ್ಪಟ್ಟಿದೆ. ‘ಗುಪ್ತಚರ ವರದಿ ಪ್ರಕಾರ ಗುಜರಾತಲ್ಲಿ ಗೆಲುವು ನಮ್ಮದೇ’ ಎಂದು ಕೇಜ್ರಿವಾಲ್‌ ಕೂಡ ಹೇಳಿಕೊಂಡಿದ್ದಾರೆ. ಇಂಥದ್ದರ ನಡುವೆಯೇ ಈ ಸಮೀಕ್ಷೆ ಬಂದಿರುವುದು ಗಮನಾರ್ಹವಾಗಿದೆ.

ಗುಜರಾತಲ್ಲಿ ಸತತ 7ನೇ ಸಲ ಕಮಲ:

ಗುಜರಾತ್‌ನಲ್ಲಿ ಕಳೆದ ಸಲ 99 ಸ್ಥಾನ ಗೆದ್ದಿದ್ದ ಬಿಜೆಪಿ ಈ ಸಲ ಭಾರಿ ಬಹುಮತ ಗಳಿಸಲಿದ್ದು 135ರಿಂದ 143 ಸ್ಥಾನ ಸಂಪಾದಿಸಲಿದೆ. ಕಾಂಗ್ರೆಸ್‌ 36ರಿಂದ 44, ಆಪ್‌ ಕೇವಲ 0-2 ಹಾಗೂ ಇತರರು 0-3 ಸ್ಥಾನ ಗಳಿಸಲಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ. ಗುಜರಾತ್‌ನಲ್ಲಿ 182 ವಿಧಾನಸಭೆ ಕ್ಷೇತ್ರಗಳಿವೆ. ಬಹುಮತಕ್ಕೆ 92 ಸ್ಥಾನಗಳು ಬೇಕು. ರಾಜ್ಯದಲ್ಲಿ 1998ರಿಂದ ಬಿಜೆಪಿ ಅಧಿಕಾರದಲ್ಲಿದೆ. ಈಗ ಗೆದ್ದರೆ ಸತತ 7ನೇ ಸಲ ಗೆದ್ದಂತಾಗುತ್ತದೆ.

Gujarat Elections: ಎಎಪಿ ಸರ್ಕಾರ ರಚನೆ ಎಂದು ಐಬಿ ವರದಿ; ವರದಿಯಿಂದ ಬಿಜೆಪಿಗೆ ನಡುಕ ಎಂದ ಕೇಜ್ರಿವಾಲ್‌

ಹಿಮಾಚಲದಲ್ಲೂ ಬಿಜೆಪಿ:

ಇನ್ನು ಹಿಮಾಚಲ ಪ್ರದೇಶದಲ್ಲಿ ಕೂಡ ಬಿಜೆಪಿ ಪುನಃ ಅಧಿಕಾರಕ್ಕೆ ಬರಲಿದೆ. ಅಲ್ಲಿ ಈಗ 47 ಸ್ಥಾನ ಹೊಂದಿರುವ ಬಿಜೆಪಿ 37ರಿಂದ 45, ಕಾಂಗ್ರೆಸ್‌ 21ರಿಂದ 29, ಆಪ್‌ 0-1 ಹಾಗೂ ಇತರರು 0-3 ಸ್ಥಾನ ಗಳಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಹಿಮಾಚಲದಲ್ಲಿ 68 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 35 ಸ್ಥಾನದ ಅವಶ್ಯಕತೆ ಇದೆ. ರಾಜ್ಯದಲ್ಲಿ 2017ರಲ್ಲಿ ಕಾಂಗ್ರೆಸ್ಸನ್ನು ಪದಚ್ಯುತಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.

ವರ್ಷಾಂತ್ಯಕ್ಕೆ ಚುನಾವಣೆ:

ಹಿಮಾಚಲ ಹಾಗೂ ಗುಜರಾತ್‌ ವಿಧಾನಸಭೆಯ ಅವಧಿ 2023ರ ಜ.8ರಂದು ಮುಗಿಯಲಿವೆ. ಹೀಗಾಗಿ 3 ತಿಂಗಳು ಮಾತ್ರ ಬಾಕಿ ಇದ್ದು, ಇನ್ನೇನು ಕೆಲವು ದಿನಗಳಲ್ಲಿ ಚುನಾವಣೆ ಘೋಷಣೆ ಆಗುವ ಹಾಗೂ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ.

ಆಪ್‌ ಗೆಲ್ಲಲಿದೆ ಅಂತ ಗುಪ್ತದಳ ಹೇಳಿದೆ: ಕೇಜ್ರಿ

ಅಹಮದಾಬಾದ್‌: ಗುಜರಾತ್‌ನಲ್ಲಿ ಈಗ ವಿಧಾನಸಭೆ ಚುನಾವಣೆ ನಡೆದರೆ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ. ಆದರೆ ಗೆಲುವಿನ ಅಂತರ ಕಡಿಮೆ ಇರುತ್ತದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

ಗುಜರಾತ್‌
ಒಟ್ಟು ಸ್ಥಾನ 182
ಬಹುಮತಕ್ಕೆ 92
ಬಿಜೆಪಿ 135-143
ಕಾಂಗ್ರೆಸ್‌ 36-44
ಆಪ್‌ 0-2
ಇತರರು 0-3
ಹಿಮಾಚಲ ಪ್ರದೇಶ
ಒಟ್ಟು ಸ್ಥಾನ 68
ಬಹುಮತಕ್ಕೆ 35
ಬಿಜೆಪಿ 37-45
ಕಾಂಗ್ರೆಸ್‌ 21-29
ಆಪ್‌ 0-1
ಇತರರು 0-3
 

Follow Us:
Download App:
  • android
  • ios