2023ರ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌ಗೆ ಮೊದಲ ಹೊಡೆತ, ಪ್ರಮುಖ ನಾಯಕಿ ರಾಜೀನಾಮೆ!
ಹಿಮಾಚಲ ಪ್ರದೇಶ ಚುನಾವಣೆ ಗೆದ್ದು ಹೊಸ ಉತ್ಸಾಹದಲ್ಲಿರುವ ಕಾಂಗ್ರೆಸ್ ಇದೀಗ 2023ರ ವಿಧಾನಸಭಾ ಚುನಾವಣೆಗಳಿಗೆ ಸಜ್ಜಾಗುತ್ತಿದೆ. ಇದರ ನಡುವೆ ಕಾಂಗ್ರೆಸ್‌ಗೆ ತಲೆನೋವು ಎದುರಾಗಿದೆ. ಪ್ರಮುಖ ನಾಯಕಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ನವದೆಹಲಿ(ಡಿ.19): 2023ರಲ್ಲಿ ಕರ್ನಾಟಕ ಸೇರಿ ಸಾಲು ಸಾಲು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಹೊಸ ಹುರುಪಿನಲ್ಲಿದೆ. ಇದೀಗ ಪಕ್ಷ ಸಂಘಟನೆ, ಚುನಾವಣೆ ರಣತಂತ್ರದಲ್ಲಿ ಕಾಂಗ್ರೆಸ್ ತೊಡಗಿಸಿಕೊಂಡಿದೆ. ಇದರ ನಡುವೆ ಕಾಂಗ್ರೆಸ್‌ಗೆ ಶಾಕ್ ಎದುರಾಗಿದೆ. ಮೆಘಾಲಯದ ಮಾಜಿ ಸಚಿವೆ, ಕಾಂಗ್ರೆಸ್ ಪ್ರಮುಖ ನಾಯಕಿ ಅಂಪರಿನ್ ಲಿಂಗ್ಡೊ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ನಾಡಿಮಿಡಿತ ಅರಿಯಲು ವಿಫಲವಾಗುತ್ತಿದೆ. ಕಾಂಗ್ರೆಸ್ ಜನರಿಂದ ದೂರವಾಗುತ್ತಿದೆ ಎಂದು ಆರೋಪಿಸಿರುವ ಲಿಂಗ್ಡೋ ಕಾಂಗ್ರೆಸ್ ತೊರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಇತ್ತೀಚೆಗಿನ ಬೆಳವಣಿಗೆ ನೋಡಿದರೆ ಕಾಂಗ್ರೆಸ್ ದಿಕ್ಕು ತಪ್ಪಿದೆ ಎಂದೆನಿಸುತ್ತಿದೆ. ಪಕ್ಷ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಪಕ್ಷಕ್ಕೆ ಪ್ರಬಲ ನಾಯಕತ್ವದ ಅವಶ್ಯಕತೆ ಇದೆ. ಆದರೆ ಕಾಂಗ್ರೆಸ್ ದಿನದಿಂದ ದಿನಕ್ಕ ದುರ್ಬಲವಾಗುತ್ತಿದೆ. ಮೇಘಾಲಯ ಜನತೆಯಿಂದ ಕಾಂಗ್ರೆಸ್ ಬಹು ದೂರವಾಗಿದೆ. ಜನರ ಆಶೋತ್ತರಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಲಿಂಗ್ಡೋ ತಮ್ಮ ರಾಜೀನಾಮೆಯಲ್ಲಿ ಉಲ್ಲೇಖಿಸಿದ್ದಾರೆ.
Karnataka politics : ಬಿಜೆಪಿ, ಕಾಂಗ್ರೆಸ್ ತ್ಯಜಿಸಿ ಜೆಡಿಎಸ್‌ಗೆ ಸೇರ್ಪಡೆ
ಮೇಘಾಲಯದಲ್ಲಿ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಕಾಂಗ್ರೆಸ್ ಮೇಘಾಲಯ ಜನರ ಒಳಿತಿಗಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಸಾಗುತ್ತಿಲ್ಲ ಎಂದು ಲಿಂಗ್ಡೋ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೆ ಪತ್ರ ರವಾನಿಸಿರುವ ಲಿಂಗ್ಡೋ ಟ್ವಿಟರ್ ಮೂಲಕವೂ ಪೋಸ್ಟ್ ಮಾಡಿದ್ದಾರೆ. ಈ ವೇಳೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ ಟ್ಯಾಗ್ ಮಾಡಿದ್ದಾರೆ.
ಮೂಲಗಳ ಪ್ರಕಾರ ಲಿಂಗ್ಡೋ ನ್ಯಾಷನಲ್ ಪೀಪಲ್ ಪಾರ್ಟಿಗೆ ಸೇರಿಕೊಳ್ಳುತ್ತಿದ್ದಾರೆ. ಸದ್ಯ ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ ಪಾರ್ಟಿ ಆಡಳಿತ ನಡೆಸುತ್ತಿದೆ. 2023ರ ಫೆಭ್ರವರಿಯಲ್ಲಿ ಮೇಘಾಲಯ ವಿಧಾನಸಭಾ ಚುನಾವಣೆ ನಡೆಯಲಿದೆ. 60 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
KGF-2 ಹಾಡು ದುರ್ಬಳಕೆ ಆರೋಪ; ರಾಹುಲ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
2023ರಲ್ಲಿ ಚುನಾವಣೆಗಳ ಪರ್ವ
ಮುಂದಿನ ಮಾರ್ಚ್ ಒಳಗಾಗಿ ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್‌ನಂತಹ ಸಣ್ಣ ರಾಜ್ಯಗಳಿಗೆ ಚುನಾವಣೆ ನಡೆಯಬೇಕಾಗಿದೆ. ಅದಾದ ನಂತರ ಕರ್ನಾಟಕದ ಚುನಾವಣೆ ಏಪ್ರಿಲ್- ಮೇಗೆ ನಡೆಯಬೇಕಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಆಳ್ವಿಕೆ ನಡೆಸುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿರುವುದರಿಂದ ಅಧಿಕಾರ ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಹಾಗೆಯೇ ಬಿಜೆಪಿಗೆ ತೀವ್ರ ಪೈಪೋಟಿ ನೀಡಿ ಕರ್ನಾಟಕವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಕೂಡ ಪ್ರಯತ್ನ ನಡೆಸಲಿದೆ. ಕರ್ನಾಟಕದ ನಂತರ ನವೆಂಬರ್-ಡಿಸೆಂಬರ್‌ಗೆ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ, ಮಿಜೋರಂ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕಿದೆ.
ಕರ್ನಾಟಕದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆ ಪಕ್ಷವನ್ನು ಕೆಳಗಿಳಿಸಿ ಅಧಿಕಾರಕ್ಕೇರಲು ಕಾಂಗ್ರೆಸ್ ಭರ್ಜರಿ ಹೋರಾಟ ನಡೆಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ- ಅಮಿತ್ ಶಾ ಜೋಡಿ ಇನ್ನು ಕರ್ನಾಟಕದ ರಾಜಕೀಯ ಆಗುಹೋಗುಗಳ ಬಗ್ಗೆ ಹೆಚ್ಚು ಗಮನಹರಿಸುವುದು ಖಚಿತವಾಗಿದೆ. ಇಬ್ಬರೂ ನಾಯಕರು ಕರ್ನಾಟಕಕ್ಕೆ ಬಂದು ಹೋಗುವುದು ಇನ್ನು ಹೆಚ್ಚಾಗಲಿದೆ. ನಾಯಕರು ಹಾಗೂ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸುವ ನಿರೀಕ್ಷೆ ಇದೆ.