ಮದುವೆ ಮನೆಯ ಊಟದ ವೇಳೆ ಜೆಡಿಎಸ್ ಟಿಕೆಟ್ ಕಸರತ್ತು: ಯಾರಿಗೆ ಸಿಗಲಿದೆ ದೊಡ್ಡ ಗೌಡರ ಆಶೀರ್ವಾದ?
ಮಾಜಿ ಪ್ರಧಾನಿ ಬಳಿ ಟಿಕೆಟ್ ನೀಡುವಂತೆ ಜೆಡಿಎಸ್ ಮುಖಂಡರು ಮನವಿ, ದೇವೇಗೌಡರ ಹಿಂದೆ- ಮುಂದೆ ಸುತ್ತಾಟ ಮಾಡಿ ಟಿಕೆಟ್ ಕೇಳಿದ ಆಕಾಂಕ್ಷಿಗಳು, ಯಾವ ಆಕಾಂಕ್ಷಿಗೆ ಸಿಗುತ್ತೋ ದೇವೇಗೌಡರ ಆಶೀರ್ವಾದ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು
ರಾಯಚೂರು(ಡಿ.29): ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ 101 ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಸಾಮೂಹಿಕ ವಿವಾಹದಲ್ಲಿಯೇ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ. ಸಹೋದರ ರಾಮಚಂದ್ರ ನಾಯಕ ಅವರ ಆರತಕ್ಷತೆ ಸಮಾರಂಭವೂ ಜರುಗಿತ್ತು. ಈ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಗಮಿಸಿ ನವ ದಂಪತಿಗಳಿಗೆ ಶುಭ ಕೋರಿದ್ರು. ನವ ದಂಪತಿಗಳ ಜೀವನ ನೆಮ್ಮದಿಯಿಂದ ಸಾಗಲಿ ಎಂದು ಆರ್ಶಿವಾದ ನುಡಿ ಹೇಳಿದರು.
ಆ ಬಳಿಕ ಸಾಮೂಹಿಕ ವಿವಾಹಕ್ಕೆ ಬಂದ ಅತಿಥಿಗಳಿಗಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ದೇವೇಗೌಡರು ಊಟ ಮಾಡುವಾಗ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತು ದೇವೇಗೌಡರಿಗೆ ರಾಯಚೂರಿನ ಕೆಲ ಸ್ಥಳೀಯ ಮುಖಂಡರು ಹಾಗೂ ಮಸ್ಕಿ ಮತ್ತು ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ನನಗೆ ಟಿಕೆಟ್ ಕೊಡಿ ಅಂತ ದೇವೇಗೌಡರ ಬಳಿ ಮನವಿ ಮಾಡಿದರು.
ಕೋವಿಡ್ ಬಂದ್ರೆ ದುಡ್ಡು ಮಾಡಬಹುದು ಅಂತ ಸುಧಾಕರ್ ಮುಖದ ಮೇಲೆ ನಗು ಬರುತ್ತೆ: ಸಿಎಂ ಇಬ್ರಾಹಿಂ
ಎಲ್ಲಾ ಆಕಾಂಕ್ಷಿಗಳ ಮಾತುಗಳನ್ನು ಆಲಿಸಿದ ದೊಡ್ಡಗೌಡರು.ಕುಮಾರಸ್ವಾಮಿ ಗಮನಕ್ಕೆ ತರುವುದಾಗಿ ಹೇಳಿ ಆಕಾಂಕ್ಷಿಗಳಿಗೆ ಸಮಾಧಾನ ಮಾಡಿದ್ರು. ಇತ್ತ ಟಿಕೆಟ್ ಆಕಾಂಕ್ಷಿಗಳು ಮಾಜಿ ಪ್ರಧಾನಿ ದೇವೇಗೌಡ ಸುತ್ತಮುತ್ತ ಓಡಾಟ ಮಾಡುತ್ತಾ ಅವರೊಂದಿಗೆ ಕೆಲ ಫೋಟೋಗಳು ತೆಗೆದುಕೊಂಡು ಈಗ ಕ್ಷೇತ್ರದಲ್ಲಿ ಫೋಟೋ ವೈರಲ್ ಮಾಡಲು ಶುರು ಮಾಡಿದ್ದಾರೆ.
ಜೆಡಿಎಸ್ ಟಿಕೆಟ್ ನೀಡುವ ಬಗ್ಗೆ ಸಿಎಂ ಇಬ್ರಾಹಿಂ ಹೇಳಿದ್ದೇನು?
2023ರ ಚುನಾವಣೆ ಗೆಲುವಿಗಾಗಿ ರಾಜ್ಯದ ಬಹುತೇಕ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಓಡಾಟ ಶುರು ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೋಲಾರದಿಂದ ಪಂಚರತ್ನ ಯಾತ್ರೆ ಶುರು ಮಾಡಿದ್ದು, ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ನೀಡಿ ಅಂತ ಹೇಳುತ್ತಾ ಜನರ ಮನಸೆಳೆಯಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಒಂದು ಹೆಜ್ಜೆ ಮುಂದೆ ಇಟ್ಟ ಜೆಡಿಎಸ್ ಈಗ ಮೊದಲ ಹಂತದ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡಿದೆ. ಆ ಅಭ್ಯರ್ಥಿಗಳ ಗ್ರಾಮ ವಾಸ್ತವ್ಯ ಹೆಸರಿನಲ್ಲಿ ಮತದಾರ ಬಳಿಗೆ ತೆರಳಿ ಮತಬೇಟೆ ಶುರು ಮಾಡಿದ್ದಾರೆ. ಇತ್ತ ರಾಯಚೂರು ಜಿಲ್ಲೆಯ ವಿಚಾರಕ್ಕೆ ಬರುವುದಾದರೇ ರಾಯಚೂರು ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳು ಇವೆ. ಈ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ 5 ವಿಧಾನಸಭಾ ಕ್ಷೇತ್ರಗಳಾದ ಸಿಂಧನೂರಿಗೆ ವೆಂಕಟರಾವ್ ನಾಡಗೌಡ, ಮಾನ್ವಿಗೆ ರಾಜಾ ವೆಂಕಟಪ್ಪ ನಾಯಕ, ದೇವದುರ್ಗಕ್ಕೆ ಕರೆಮ್ಮ, ಲಿಂಗಸೂಗೂರು ವಿಧಾನಸಭಾ ಕ್ಷೇತ್ರಕ್ಕೆ ಸಿದ್ದು ಬಂಡಿ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಸಣ್ಣ ನರಸಿಂಹ ನಾಯಕ್ ಗೆ ಟಿಕೆಟ್ ಫೈನಲ್ ಆಗಿದೆ. ಆದ್ರೆ ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಮತ್ತು ಮಸ್ಕಿ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡಿಲ್ಲ. ಈ ಎರಡು ಟಿಕೆಟ್ ಗಾಗಿ ಜೆಡಿಎಸ್ ಮುಖಂಡರು ಭಾರೀ ಕಸರತ್ತು ಶುರು ಮಾಡಿದ್ದಾರೆ.
ರಾಯಚೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ. ಮೊದಲ ಹಂತದ ಟಿಕೆಟ್ ನಾವು ಈಗ ಘೋಷಣೆ ಮಾಡಿದ್ದೇವೆ. ನಮ್ಮ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ್ದಾರೆ. ಮುಂದಿನ ಮಾರ್ಚ್ ಅಥವಾ ಎಪ್ರಿಲ್ ಮೊದಲ ವಾರದಲ್ಲಿ ಎರಡನೇ ಹಂತದ ಟಿಕೆಟ್ ಘೋಷಣೆ ಮಾಡುತ್ತೇವೆ. ರಾಯಚೂರು ನಗರದ ಮತ್ತು ಮಸ್ಕಿ ಕ್ಷೇತ್ರದ ಟಿಕೆಟ್ ಗಾಗಿ ಹಲವು ನಾಯಕರು ನಮ್ಮನ್ನ ಭೇಟಿ ಮಾಡಲು ಶುರು ಮಾಡಿದ್ದಾರೆ. ಆದ್ರೆ ಪಕ್ಷದ ಸ್ಥಳೀಯರ ಮುಖಂಡರು ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕಾ ಅಥವಾ ಬೇಡ ಎಂಬ ಬಗ್ಗೆ ನಮ್ಮದೇ ಮಾದರಿಯಲ್ಲಿ ಸರ್ವೇ ಮಾಡಿ ಟಿಕೆಟ್ ಘೋಷಣೆ ಮಾಡುತ್ತೇವೆ. ಜೆಡಿಎಸ್ ಪಕ್ಷಕ್ಕಾಗಿ ದುಡಿದವರ ಜೊತೆಗೆ ಸದಾಕಾಲ ನಾವು ಇರುತ್ತೇವೆ. ಗೆಲುವು ಉತ್ತಮ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತವೆ ಎಂದು ಜೆಡಿಎಸ್ ರಾಜಾಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದರು.
ರಾಯಚೂರು ನಗರದ ಜೆಡಿಎಸ್ ಟಿಕೆಟ್ ಗಾಗಿ ಭಾರೀ ಕಸರತ್ತು:
ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 5 ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಆಗಿದೆ. ಜಿಲ್ಲೆಯಲ್ಲಿ 2 ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗಳು ಬಾಕಿ ಇದ್ದು, ಆ ಎರಡು ಕ್ಷೇತ್ರದ ಟಿಕೆಟ್ ಗಾಗಿ ಆಕಾಂಕ್ಷಿಗಳು ಭಾರೀ ಕಸರತ್ತು ನಡೆಸಿದ್ದಾರೆ. ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ಟಿಕೆಟ್ ಇಷ್ಟು ದಿನಗಳ ಕಾಲ ಕೇವಲ ರಾಮನಗೌಡ ಎಗನೂರು ಅಂತ ಹೇಳಲಾಗುತ್ತಿತ್ತು. ಆದ್ರೆ ಇತ್ತೀಚೆಗೆ ರಾಯಚೂರು ನಗರದ ಜೆಡಿಎಸ್ ಟಿಕೆಟ್ ಗಾಗಿ ಇ.ವಿಜಯ್ ಕುಮಾರ್ ನಾನಾ ಕಸರತ್ತು ಶುರು ಮಾಡಿದ್ದಾರೆ.
ಯಾರು ಇ. ವಿನಯ್ ಕುಮಾರ್: 36 ವರ್ಷದ ಯುವ ಮುಖಂಡ
ಎಲ್ ಎಲ್ ಬಿ ಪದವೀಧರ ಇ.ವಿನಯ್ ಕುಮಾರ್. ರಾಯಚೂರು ನಗರದ ನಿವಾಸಿ. ರಾಯಚೂರು ನಗರಸಭೆಯ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ ಗೆದ್ದು ರಾಯಚೂರು ನಗರಸಭೆ ಅಧ್ಯಕ್ಷರಾಗಿ ಅಧಿಕಾರ ಮಾಡಿ ರಾಜೀನಾಮೆ ನೀಡಿದ್ದವರು. ಹಣಕ್ಕೆ ಏನು ಕೊರತೆ ಇಲ್ಲ..ಹೀಗಾಗಿ ಈಗ ರಾಯಚೂರು ನಗರದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಅದರ ಭಾಗವಾಗಿ ಜೆಡಿಎಸ್ ಮುಖಂಡರೊಂದಿಗೆ ತೆರಳಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಜೆಡಿಎಸ್ ಟಿಕೆಟ್ ನೀಡುವಂತೆ ಮಾನವಿ ಮಾಡಿ ಬಂದಿದ್ದಾರೆ. ಈಗ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ್ದಾರೆ. ಸ್ಥಳೀಯ ಜೆಡಿಎಸ್ ನ ಕೆಲ ಮುಖಂಡರು ಇ.ವಿನಯ್ ಕುಮಾರ್ ಗೆ ಟಿಕೆಟ್ ಕೊಡಿಸಲು ತಲೆಮರೆಯಲ್ಲಿ ಕಸರತ್ತು ಶುರು ಮಾಡಿದ್ದಾರೆ.
ಬಳ್ಳಾರಿ ರೆಡ್ಡಿ-ಮಸ್ಕಿ ಗೌಡರ ಭೇಟಿ ಪುಕಾರು; ಚರ್ಚೆ ಜೋರು
ಇತ್ತ ನಾನೇ ರಾಯಚೂರು ನಗರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದು ಓಡಾಟ ಮಾಡುತ್ತಿದ್ದ ರಾಮನಗೌಡ ಎಗನೂರುಗೆ ಈಗ ಮತ್ತೊಮ್ಮೆ ಎದುರಾಳಿ ಬಂದಿದ್ದರಿಂದ ಟಿಕೆಟ್ ನಾನೇ ಪಡೆಯಬೇಕು ಅಂತ ರಾಮನಗೌಡ ಎಗನೂರು ಸಹ ಜೆಡಿಎಸ್ ಮುಖಂಡರನ್ನ ಭೇಟಿಗೆ ಮುಂದಾಗಿದ್ದಾರೆ. ಮಾನ್ವಿಗೆ ಬಂದ ಮಾಜಿ ಪ್ರಧಾನಿ ದೇವೇಗೌಡರ ಬೆನ್ನು ಬಿದ್ದ ರಾಮನಗೌಡ ಎಗನೂರು ದೇವೇಗೌಡರು ಊಟಕ್ಕೆ ಕುಳಿತುಕೊಂಡ ವೇಳೆಯೂ ಸಹ ಅವರ ಬಳಿ ಕುಳಿತು ರಾಯಚೂರು ನಗರದ ಟಿಕೆಟ್ ಗಾಗಿ ಮನವಿ ಮಾಡಿದ್ರು.
ಒಟ್ಟಿನಲ್ಲಿ ರಾಯಚೂರು ನಗರದ ಜೆಡಿಎಸ್ ಟಿಕೆಟ್ ಗಾಗಿ ಈಗ ರಾಮನಗೌಡ ಎಗನೂರು ಮತ್ತು ಇ. ವಿನಯ್ ಕುಮಾರ್ ನಡುವೆ ಭಾರೀ ಕಸರತ್ತು ಶುರುವಾಗಿದೆ. ಜೆಡಿಎಸ್ ಹೈಕಮಾಂಡ್ ಯಾರಿಗೆ ತೆನೆಹೊತ್ತ ಮಹಿಳೆ ಸಿಗುತ್ತಾಳೋ ಕಾದು ನೋಡಬೇಕಾಗಿದೆ.