ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳಿಗಾಗಿ ಬೈರಮಂಗಲದಲ್ಲಿ ಕಾಯುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ರೈತರ ಹಿತಾಸಕ್ತಿ ಕಾಪಾಡುವುದು ತಮ್ಮ ಉದ್ದೇಶವಾಗಿದ್ದು, ಬಲವಂತವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು (ಜೂ.27): ಬಿಡದಿ ಟೌನ್‌ಶಿಪ್ ಯೋಜನೆ(Bidadi Township project)ಯ ಭಾದಿತ ರೈತರ ಹಿತಾಸಕ್ತಿ ಬಗ್ಗೆ ಚರ್ಚಿಸಲು ನಾನು ಬೈರಮಂಗಲದಲ್ಲಿ ಶನಿವಾರ ಮಧ್ಯಾಹ್ನದ ವರೆಗೂ ಮುಖ್ಯಮಂತ್ರಿ(Chief minister)ಗಳಾಗಿ ಕಾಯುತ್ತೇನೆ. ಅವರು ಸ್ಥಳಕ್ಕೆ ಬಂದರೆ ಸಮಸ್ಯೆ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(Union minister HD kumaraswamy) ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವೇನು ಗಲಾಟೆ ಮಾಡಿಸಲು ಹೋಗುತ್ತಿಲ್ಲ. ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಕೊಡುತ್ತಿದ್ದೇವೆ ಅಷ್ಟೆ. ಮುಖ್ಯಮಂತ್ರಿ ಜತೆ ಪತ್ರ ಸಮರ ಅಂತೇನಿಲ್ಲ. ವಿಧಾನಸೌಧಕ್ಕೆ ಬರುವಂತೆ ಅವರು ಪತ್ರ ಬರೆದಿದ್ದರು. ವಿಧಾನಸೌಧ ಬೇಡ, ಬೈರಮಂಗಲದಲ್ಲಿ ನೊಂದ ರೈತರ ಸಮ್ಮುಖದಲ್ಲೇ ಚರ್ಚೆ ನಡೆಯುವುದು ಸೂಕ್ತ ಎಂದು ನಾನು ಪತ್ರದಲ್ಲಿ ತಿಳಿಸಿದ್ದೆ. ಜೂ.27ರಂದು ಬೈರಮಂಗಲದಲ್ಲಿ ಬಹಿರಂಗ ಚರ್ಚೆಗೆ ಬರುತ್ತೇನೆ ಅಂದಿದ್ದೆ. ಅದರಂತೆ ನಾನು ಹೋಗುತ್ತೇನೆ. ಅವರು ಬಂದರೆ ಚರ್ಚಿಸುತ್ತೇನೆ. ನನ್ನ ಪತ್ರಕ್ಕೆ ಅವರು ಇನ್ನೂ ಉತ್ತರ ಕೊಟ್ಟಿಲ್ಲ ಎಂದರು.
ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ:
ನಾನು ಕೊಟ್ಟ ಸಮಯಕ್ಕೆ ಹೋಗುತ್ತಿದ್ದೇನೆ. ಅವರು ಬಂದರೆ ಒಳ್ಳೆಯದು. ನಿನ್ನೆಯಿಂದ 15-20 ಜನ ಭೂಮಿ ಕೊಡಲು ಸಿದ್ಧ ಅಂತ ಕೂತಿದ್ದಾರೆ. ಇದರ ಹಿಂದಿನ ವಿಚಾರಗಳನ್ನು ನಾನೂ ಅರ್ಥ ಮಾಡಿಕೊಂಡಿದ್ದೇನೆ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನಿಲ್ಲ. ರೈತರು ಭೂಮಿ ಕೊಡಲು ಒಪ್ಪಿದರೆ ನನ್ನದೇನೂ ತಕರಾರು ಇಲ್ಲ. ಬಲವಂತವಾಗಿ ರೈತರನ್ನು ಬೆದರಿಸಿದರೆ ಸರಿ ಇರೋದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ನಾಯಕರಿಗೆ ಯೋಜನೆ ಬೇಕು:
ನಾನೂ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಅನೇಕ ಸಂದರ್ಭಗಳಲ್ಲಿ ರೈತರ ಬಳಿಯೇ ಹೋಗಿದ್ದೇನೆ. ಇದೇ ಬಿಡದಿ ಯೋಜನೆ ಪ್ರಶ್ನೆ ಬಂದಾಗ ರೈತರನ್ನು ಕೃಷ್ಣಾ ಕಚೇರಿಗೆ ಕರೆಸಿಕೊಂಡು ಅವರ ಸಮ್ಮುಖದಲ್ಲೇ ಸಭೆ ಮಾಡಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೇ ಬಿಡದಿ ಉಪನಗರ ಯೋಜನೆಗೆ ವಿರೋಧ ಮಾಡಿದ್ದರು. ರೈತರು ಬೇಡ ಎಂದರೂ ಕಾಂಗ್ರೆಸ್ ನಾಯಕರಿಗೆ ಯೋಜನೆ ಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೆಲ ರೈತರು ಭೂಮಿ ಕೊಡಲು ಒಪ್ಪಿರಬಹುದು. ಬಹು ಪ್ರಮಾಣದ ರೈತರು ಭೂಮಿ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರಲ್ಲಿ ಎಲ್ಲಾ ಮಾಹಿತಿಯೂ ಇದೆ. ಆದರೆ ಸರ್ಕಾರದವರು ಎಲ್ಲರ ಮೇಲೂ ಗದಾ ಪ್ರಹಾರ ನಡೆಸಲು ಹೋಗುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ ಎಂದು ಹೇಳಿದರು.


