ಬೆಂಗಳೂರು ಮೆಟ್ರೋ ಫೇಸ್ 2 ಉದ್ಘಾಟನಾ ಕಾರ್ಯಕ್ರಮಕ್ಕೆ ಆರ್. ಅಶೋಕ್‌ಗೆ ಆಹ್ವಾನ ನೀಡದೆ ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಬಿಜೆಪಿ ಹಿರಿಯ ನಾಯಕರಾದರೂ, ಅವರನ್ನು ಕಡೆಗಣಿಸಿರುವುದು ಅವರ ಸ್ಥಾನಕ್ಕೆ ಧಕ್ಕೆ ತಂದಿದೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು (ಆ.10): ನಗರದ ಜನರಿಗೆ ಬಹು ನಿರೀಕ್ಷೆಯಲ್ಲಿದ್ದ ಮೆಟ್ರೋ ಫೇಸ್–2 ಹಳದಿ ಮಾರ್ಗದ ಉದ್ಘಾಟನೆ ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದ ಹಿರಿಯ ನಾಯಕ ಎನಿಸಿಕೊಂಡಿದ್ದರೂ, ಹಲವು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರೂ ನಿಮ್ಮನ್ನು ಕಡೆಗಣಿಸಲಾಗಿದೆ. ಅಂದರೆ ನಿಮ್ಮ ಕುರ್ಚಿ ಕಿತ್ತುಕೊಳ್ಳುವ ಸಂದೇಶ ಬಂದಿದೆ ಎಂದು ಭಾವಿಸೋಣವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರಿನ ಹಳದಿ ಮೆಟ್ರೋ ಮಾರ್ಗ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಆದರೆ, ಮೋದಿ ಅವರು ಭಾಗವಹಿಸುವ ಕಾರ್ಯಕ್ರಮಕ್ಕೆ ಆರ್. ಅಶೋಕ್ ಅವರಿಗೆ ಆಹ್ವಾನ ಇಲ್ಲದಿರುವುದರ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಟೀಕೆ ಮಾಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸ್ವಪಕ್ಷದವರು ವಿರೋಧಿಸುವ ನಾಯಕನಾಗಿದ್ದಾರೆಯೇ? ಬೆಂಗಳೂರು ಮೆಟ್ರೋ ಫೇಸ್ 2 ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಕೇಂದ್ರ ಸರ್ಕಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೇ ವೇದಿಕೆಯಲ್ಲಿ ಜಾಗ ನೀಡಲು ನಿರಾಕರಿಸಿದೆ. ಕೇಂದ್ರ ಸರ್ಕಾರ ಪ್ರೊಟೋಕಾಲ್ ಮರೆತಿದೆಯೇ? ಅಥವಾ ಉದ್ದೇಶಪೂರ್ವಕ ಕಡೆಗಣನೆಯೇ? ಎಂದು ಕಾಲೆಳೆದಿದ್ದಾರೆ.
ಮೊದಲ ಬಾರಿ ಶಾಸಕರಾಗಿರುವ ಹಾಗೂ ಬೆಂಗಳೂರಿನ ಶಾಸಕರಲ್ಲದಿರುವ ವಿಜಯೇಂದ್ರ ಅವರಿಗೆ ಸಿಕ್ಕ ಅವಕಾಶ ಅಶೋಕ್ ಅವರಿಗಿಲ್ಲ. ಮಾನ್ಯ ಅಶೋಕ್ ಅವರೇ, ತಾವು ಬೆಂಗಳೂರು ಶಾಸಕರಾಗಿದ್ದರೂ, ವಿರೋಧ ಪಕ್ಷದ ನಾಯಕನಾಗಿದ್ದರೂ ಬಿಜೆಪಿ ಪಕ್ಷದ ಹಿರಿಯ ನಾಯಕ ಎನಿಸಿಕೊಂಡಿದ್ದರೂ, ಹಲವು ಬಾರಿ ಆಯ್ಕೆ ಆಗಿದ್ದರೂ ನಿಮ್ಮನ್ನು ಕಡೆಗಣಿಸಲಾಗಿದೆ. ಅಂದರೆ ನಿಮ್ಮ ಕುರ್ಚಿ ಕಿತ್ತುಕೊಳ್ಳುವ ಸಂದೇಶ ಬಂದಿದೆ ಎಂದು ಭಾವಿಸೋಣವೇ? ಎಂದು ಕುಟುಕಿದ್ದಾರೆ.
ಯಾರು ಯಾರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಲ್ಲ ಎಂದು ತಲೆಕೆಡಿಸಿಕೊಂಡು ಕುಳಿತಿದ್ದ ತಮಗೆ ಈಗ “ನನಗೇಕೆ ಆಹ್ವಾನವಿಲ್ಲ” ಎಂದು ತಲೆಕೆಡಿಸಿಕೊಂಡು ಕೂರುವ ಸಮಯ ಬಂದಿದೆ. ಇನ್ನಾದರೂ ಇತರರ ಮನೆ ಇಣುಕುವ ಬದಲು ನಿಮ್ಮ ಬುಡ ಅಲ್ಲಾಡುತ್ತಿರುವುದನ್ನು ಗಮನಿಸಿದರೆ ಒಳ್ಳೆಯದು! ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಮಾಡಿದ್ದಾರೆ.
