ಕರ್ನಾಟಕದ ಸಿಎಂ ಆಯ್ಕೆಯಾಗಿದ್ದು, ಕಡೆಗೂ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗ ಅಧಿಕಾರ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ. ಶಾಸಕರ ಬೆಂಬಲದ ಜೊತೆಗೆ, ಹೈ ಕಮಾಂಡ್ ಒಲವು ಇದ್ದ ಸಿದ್ದರಾಮಯ್ಯ ಕರುನಾಡ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.
ಬೆಂಗಳೂರು (ಮೇ 18): ಐದು ದಿನಗಳ ಅಧಿಕಾರದ ಹಗ್ಗ ಜಗ್ಗಾಟದಲ್ಲಿ ಕಡೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಣ್ಣಗಾಗಿದ್ದು, ಉಪಮುಖ್ಯಮಂತ್ರಿಯಾಗಿ ಮೇ 20ರಂದು ಪ್ರಮಾಣ ವಚನ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ. ಸೋನಿಯಾ ಗಾಂಧಿ ಮಧ್ಯಸ್ಥಿಕೆಯಿಂದ ತಾರಕಕ್ಕೇರಿದ್ದ ಪಟ್ಟನ್ನು ಡಿಕೆಶಿ ತಣ್ಣಗಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಗ್ರಾಮೀಣ ಶಾಸಕ ಹಾಗೂ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಈ ತೀರ್ಮಾನ ಸಂಪೂರ್ಣ ಖುಷಿ ಕೊಟ್ಟಿಲ್ಲ ಎಂಬ ಅಸಮಾಧಾನವನ್ನು ಹೊರ ಹಾಕಿದ್ದಾರೆ.
'ಡಿ.ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗುವುದು ನನಗೆ ಸಂಪೂರ್ಣ ಖುಷಿ ತಂದಿಲ್ಲ. ಆದರೆ, ಕರ್ನಾಟಕದ ಜನರ ಹಿತದೃಷ್ಟಿಯಿಂದ ನಾವು ನಮ್ಮ ವಾಗ್ದಾನಗಳನ್ನು ಈಡೇರಿಸಬೇಕಾಗಿದೆ. ಆದ್ದರಿಂದಲೇ ಶಿವಕುಮಾರ್ ಉಪ ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿಯಾಗಲೆಂದು ನಾನು ಬಯಸಿದ್ದೆ. ಅದು ಆಗಿಲ್ಲ. ಇನ್ನೂ ಬಹಳಷ್ಟು ಸಮಯವಿದೆ. ನಾವು ಕಾದು ನೊಡುತ್ತೇವೆ' ಎಂದು ಮಾಧ್ಯಮಗಳಿಗೆ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಕಾಂಗ್ರೆಸ್ ಸಂಧಾನ ಸೂತ್ರ ಸಫಲ, ಸೋನಿಯಾ ಹೇಳಿದ್ದಕ್ಕೆ ಡಿಕೆಶಿ ಕಾಂಪ್ರೋಮೈಸ್ ಆದ್ರಾ?
ಈ ಮಧ್ಯೆ ದೆಹಲಿಯ್ಲಿ ಡಿಕೆ ಶಿವಕುಮಾರ್ ಹಾಗೂ ನಿಯೋಜಿತ ಮುಖ್ಯಮಂತ್ರಿ ಐದು ದಿನಗಳ ನಂತರ ಒಟ್ಟಾಗಿ ಕಾಣಿಸಿಕೊಂಡಿದ್ದು, ಒಂದೇ ಕಾರಿನಲ್ಲಿ ಇಬ್ಬರೂ ರಾಹುಲ್ ಗಾಂಧಿ ಭೇಟಿಯಾಗಲು ಪ್ರಯಾಣ ಬೆಳೆಸಿದ್ದಾರೆ. ಎಲ್ಲವೂ ಶಾಂತವಾದಂತೆ ಕಾಣಿಸುತ್ತಿದ್ದ, ಕಾಂಗ್ರೆಸ್ ಕರುನಾಡ ಜನತೆಗೆ ನೀಡಿರುವ ಭರವಸೆಗಳನ್ನು ಹೇಗೆ ಈಡೇರಿಸುತ್ತಾರೆ ಎಂಬವುದೊಂದೇ ಕುತೂಹಲವಿದೆ ಈಗ.
ಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕು, ಇಲ್ಲವೆಂದರೆ ಶಾಸಕನಾಗಿಯೇ ಮುಂದುವರಿಯುತ್ತೇನೆ ಹೊರತು ಬೇರೆ ಯಾವ ಸ್ಥಾನವೂ ಬೇಡವೆಂದು ಪಟ್ಟು ಹಿಡಿದಿದ್ದು ಡಿ.ಕೆ. ಶಿವಕುಮಾರ್ ಅವರ ಪಟ್ಟನ್ನು ಸಮಾಧಾನ ಮಾಡಲು ಕಾಂಗ್ರೆಸ್ ಹೈ ಕಮಾಂಡ್ ಶತಾಯಗತಾಯ ಯತ್ನಿಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ರಣ್‌ದೀಪ್ ಸುರ್ಜೇವಾಲಾ ಮಾತ್ರವಲ್ಲದೇ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೂ ಡಿಕೆಶಿ ಸೊಪ್ಪು ಹಾಕಿರಲಿಲ್ಲ. ಸೋನಿಯಾ ಗಾಂಧಿ ಹತ್ತಿರವೇ ಮಾತನಾಡಿ, ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಪಟ್ಟು ಹಿಡಿದಿದ್ದರು ಮುಖ್ಯಮಂತ್ರಿ (Karnataka New CM) ಮಾಡಿದರೆ, ಸಿದ್ದರಾಮಯ್ಯ ಅವರಿಗೆ ಯಾವ ಸ್ಥಾನ ನೀಡಬೇಕು ಎಂಬ ಪ್ರಶ್ನೆಗೆ ಹೈಕಮಾಂಡ್ ಬಳಿ ಯಾವುದೇ ಉತ್ತರವಿಲ್ಲದ ಕಾರಣ ಅಧಿಕಾರ ಹಂಚಿಕೆ ಫಾರ್ಮುಲಾವನ್ನು (Power Sharing Forumala) ಉಭಯ ನಾಯಕರಿಗೆ ನೀಡುವ ಮನಸ್ಥಿತಿಯಲ್ಲಿ ಹೈಕಮಾಂಡ್ ಇತ್ತು. ಮೊದಲ ಅವಧಿಗೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಡಿಸಿಎಂ ಹುದ್ದೆ ನೀಡುವ ಬಗ್ಗೆ ಹೈಕಮಾಂಡ್‌ನಲ್ಲಿ ಚರ್ಚೆ ನಡೆದಿದ್ದರೂ, ಶಿವಕುಮಾರ್ ಅಧಿಕಾರ ಹಂಚಿಕೆ ಮಾಡಿದರೆ, ತಮ್ಮನ್ನೇ ಮೊದಲು ಸಿಎಂ ಮಾಡಬೇಕೆಂದೇ ಹಠ ಮಾಡಿದ್ದರು.
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಡಿಸಿಎಂ ಆಗಲಿ
ಹೈಕಮಾಂಡ್‌ನ ಈ ಮನವೊಲಿಕೆ ಫಾರ್ಮುಲಾ ಒಪ್ಪಲು ಶಿವಕುಮಾರ್ ತಯಾರಿಲ್ಲವಾದರೂ, ಅನಿವಾರ್ಯವಾಗಿ ಮೊದಲ ಅವಧಿಯ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕಾಗಿ ಬಂದಲ್ಲಿ ಆ ಚರ್ಚೆ ಸೋನಿಯಾ ಗಾಂಧಿ ಅವರ ಮಧ್ಯಸ್ಥಿಕೆಯಲ್ಲಿ ನಡೆಯಲಿ ಎಂಬ ಇಂಗಿತ ಹೊಂದಿದ್ದ ಡಿಕೆಶಿ ಆಸೆ ಈಡೇರಿದೆ. ಕಡೆಗೂ ಸೋನಿಯಾ ಗಾಂಧಿ ಫೋನ್ ಮಾಡುವಲ್ಲಿ ಡಿಕೆಶಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಉಪ್ ಮುಖ್ಯಮಂತ್ರಿ ಜೊತೆ ಕೆಲವು ಪ್ರಭಾವಿ ಖಾತೆಗಳನ್ನು ಹೊಂದುವ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ.
ಮೇ 10ರಂದು ನಡೆದ ಏಕ ಹಂತದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19 ಹಾಗೂ ಇತರರು 19 ಸ್ಥಾನಗಳನ್ನು ಗೆದ್ದುಕೊಂಡಿದ್ದರು. ಕಾಂಗ್ರೆಸ್ ಶಾಸಕರ ಸಂಪೂರ್ಣ ಬೆಂಬಲವಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಸಿದ್ಧರಾಗಿದ್ದರೆ, ಡಿ.ಕೆ.ಶಿವಕುಮಾರ್ ತಮ್ಮಿದಲೇ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು, ಪಕ್ಷ ಸಂಘಟಿಸಲು ಶ್ರಮಿಸಿದ್ದೇನೆ. ತಮ್ಮನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಬಿಗಿಪಟ್ಟು ಹಿಡಿದಿದ್ದರಿಂದ, ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿತ್ತು.
