ಜಮೀರ್ ಡಿಸಿಎಂ ಆಗ್ತಾರೆ ಅಂತಾನೆ ಇಡೀ ಮುಸ್ಲಿಂ ಸಮುದಾಯ ಕಾಂಗ್ರೆಸ್ ಜೊತೆ ನಿಂತಿರೋದು, ಈಗ ಡಿಸಿಎಂ ಹುದ್ದೆ ಕೊಡದೇ ಇರೋದು ಸರಿಯಲ್ಲ ಅಂತ ಅಭಿಮಾನಿ ಆಸೀಫ್‌ ಅಲಿ ಆಗ್ರಹ 

ಬೆಂಗಳೂರು(ಮೇ.18):  ಕರ್ನಾಟಕದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದಾರೆ. ಹೈಕಮಾಂಡ್‌ ಇಂದು ಅಧಿಕೃತವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಅಂತ ಘೋಷಿಸಲಿದ್ದಾರೆ. ಏತನ್ಮಧ್ಯೆ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್‌ ಖಾನ್‌ ಅವರನ್ನ ಡಿಸಿಎಂ ಮಾಡುವಂತೆ ಜಮೀರ್ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಬೆಂಗಳೂರಿನ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಜಮೀರ್ ಅಭಿಮಾನಿಯೋರ್ವ ಮನವಿ ಮಾಡಿದ್ದಾರೆ. ಜಮೀರ್ ಡಿಸಿಎಂ ಆಗ್ತಾರೆ ಅಂತಾನೆ ಇಡೀ ಮುಸ್ಲಿಂ ಸಮುದಾಯ ಕಾಂಗ್ರೆಸ್ ಜೊತೆ ನಿಂತಿರೋದು, ಈಗ ಡಿಸಿಎಂ ಹುದ್ದೆ ಕೊಡದೇ ಇರೋದು ಸರಿಯಲ್ಲ ಅಂತ ಅಭಿಮಾನಿ ಆಸೀಫ್‌ ಅಲಿ ಆಗ್ರಹಿಸಿದ್ದಾರೆ. 

ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆ: ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ, ಯಾರಾಗ್ತಾರೆ ಮುಖ್ಯಮಂತ್ರಿ?

ಒಂದೊಮ್ಮೆ ಜಮೀರ್‌ಗೆ ಡಿಸಿಎಂ ಹುದ್ದೆ ಕೊಡದಿದ್ದರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತೇವೆ. ಸಿದ್ದರಾಮಯ್ಯ ಮನೆ ಮುಂದೆ ಹರಿಹರ ಮೂಲದ ಜಮೀರ್ ಅಹಮ್ಮದ್ ಅಭಿಮಾನಿ ಆಸೀಫ್‌ ಅಲಿ ಹೇಳಿದ್ದಾರೆ. 

ಮುಸ್ಲಿಮರಿಗೆ ಡಿಸಿಎಂ, ಗೃಹಮಂತ್ರಿ ನೀಡಲು ಒತ್ತಾಯ

ಹೊಸಪೇಟೆ: ಕಾಂಗ್ರೆಸ್‌ ನೂತನ ಸರ್ಕಾರದಲ್ಲಿ ಮುಸ್ಲಿಂ ಸಮಾಜದ 9 ಜನ ಶಾಸಕರಲ್ಲಿ ಜಮೀರ್‌ ಅಹ್ಮದ್‌ ಖಾನ್‌ ಇಲ್ಲವೇ ಯು.ಟಿ. ಖಾದರ್‌ ಅವರಲ್ಲಿ ಒಬ್ಬರಿಗೆ ಉಪಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಹುದ್ದೆ ನೀಡಬೇಕು ಎಂದು ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್‌.ಎಸ್‌. ಬಷೀರ್‌ ಅಹಮದ್‌ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ. 14ರಷ್ಟುಮುಸ್ಲಿಂ ಸಮಾಜದವರು ಇದ್ದಾರೆ. ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಶೇ. 88ರಷ್ಟುಮತ ಚಲಾಯಿಸಿದ್ದಾರೆ. 9 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಮಾಜದ ಸಂಘಟನೆಯಲ್ಲೂ ಗುರುತಿಸಿಕೊಂಡಿರುವ ಜಮೀರ್‌ ಅಹ್ಮದ್‌ ಖಾನ್‌ ಹಾಗೂ ಯು.ಟಿ. ಖಾದರ್‌ ಅವರಲ್ಲಿ ಒಬ್ಬರಿಗೆ ಉಪಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಸ್ಥಾನ ನೀಡಬೇಕು. ಮುಸ್ಲಿಂ ಸಮಾಜ ಕಾಂಗ್ರೆಸ್‌ ಪರವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಮರ ಶೇ. 4ರಷ್ಟುಮೀಸಲಾತಿ ರದ್ದುಪಡಿಸಿತ್ತು. ಕಾಂಗ್ರೆಸ್‌ ಸರ್ಕಾರ ಈ ಮೀಸಲಾತಿ ಮರುಸ್ಥಾಪಿಸುವ ವಿಶ್ವಾಸ ಇದೆ ಎಂದರು.

ಶಿವಾಜಿ ನಗರ ಶಾಸಕ ಅರ್ಷದ್‌ ಖಾನ್‌, ಶಾಸಕರಾದ ಎನ್‌.ಎ. ಹ್ಯಾರಿಸ್‌, ತನ್ವಿರ್‌ ಸೇಠ್‌ ಇವರಲ್ಲಿ ಯಾರಿಗಾದರೂ ಉಪಮುಖ್ಯಮಂತ್ರಿ, ಗೃಹಮಂತ್ರಿ ನೀಡಿದರೂ ನಮಗೆ ಸಂತೋಷ ಇದೆ. ಆದರೆ, ಸಮಾಜ ಸಂಘಟನೆ, ಪಕ್ಷ ಸಂಘಟನೆಯಲ್ಲಿ ತೊಡಗಿರುವ ಜಮೀರ್‌ ಅಹ್ಮದ್‌ ಖಾನ್‌ ಇಲ್ಲವೇ ಯು.ಟಿ. ಖಾದರ್‌ ಅವರಲ್ಲಿ ಒಬ್ಬರಿಗೆ ಉಪಮುಖ್ಯಮಂತ್ರಿ, ಗೃಹಮಂತ್ರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಬಂದದ ಕರೆಂಟು ಫ್ರೀ ಆದ ನಿಮಗ್ ಗೊತ್ತಿಲ್ಲೇನ್?: ಮೀಟರ್‌ ರೀಡರ್‌ಗೆ ಕಲಬುರಗಿ ಜನ ತರಾಟೆ!

ಈ ಹಿಂದಿನ ಸರ್ಕಾರ ಮುಸ್ಲಿಮರ ಶೇ. 4ರಷ್ಟುಮೀಸಲಾತಿಯನ್ನು ಕಿತ್ತುಕೊಂಡಿತು. ಕೊನೆಯ ಸಚಿವ ಸಂಪುಟದಲ್ಲಿ ಈ ಕಾರ್ಯ ಮಾಡಿರುವುದು ಸರಿಯಲ್ಲ. ಇದನ್ನು ಈಗಿನ ನೂತನ ಸರ್ಕಾರ ವಾಪಸ್‌ ನೀಡುವ ವಿಶ್ವಾಸ ಇದೆ. ಐಎಂಎ ಪ್ರಕರಣದಲ್ಲಿ ಕೂಡ್ಲಿಗಿ ಹಾಗೂ ಹೊಸಪೇಟೆಯ ಬಡ ಮುಸ್ಲಿಮರು .10ರಿಂದ .12 ಕೋಟಿ ಕಳೆದುಕೊಂಡಿದ್ದಾರೆ. ಈ ಬಡ ಮುಸ್ಲಿಮರಿಗೆ ನ್ಯಾಯ ದೊರಕಿಸಲು ಐಎಂಎ ಹಗರಣದ ತನಿಖೆ ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದರು.
ಸಮಾಜದಲ್ಲಿ ಸಾಮರಸ್ಯ ನೆಲೆಗೊಳ್ಳಬೇಕು. ಹಿಂದು- ಮುಸ್ಲಿಮರು ಸೌಹಾರ್ದತೆಯಿಂದ ಬಾಳಬೇಕು. ಸಾಮರಸ್ಯಕ್ಕಾಗಿ ಕರ್ನಾಟಕ ಮುಸ್ಲಿಂ ಸಂಘ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಕಲ್ಯಾಣ ಕರ್ನಾಟಕ ಭಾಗದ ಸೂಫಿ ಪರಂಪರೆಯನ್ನು ಪುನರುಜ್ಜೀವನ ಗೊಳಿಸಲಾಗುವುದು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಗೊಳ್ಳಬೇಕು ಎಂದರು.

ಮುಖಂಡರಾದ ಟಿ. ರಿಜ್ವಾನುಲ್ಲಾ, ಎನ್‌. ಅಬೂಬಕರ್‌, ಎಲ್‌.ಎಸ್‌. ಮಹಮ್ಮದ್‌ ರಫಿ, ಫಿರೋಜ್‌ ಆಲಂ ಮೌಲಾನಾ ಮರಬ, ಹೊನ್ನೂರ್‌ ವಲಿ, ಇಸ್ಮಾಯಿಲ್‌, ಡಾ. ಷರೀಫ್‌, ಘನಿಸಾಬ್‌, ರಹಿಮಾನ್‌, ಸುಬಾನ್‌ ಸಾಬ್‌, ವಲಿಬಾಷಾ, ಮೀನು ಅಲ್ಲಾಭಕ್ಷಿ ಮತ್ತಿತರರಿದ್ದರು.