ದೇಶ-ವಿದೇಶಗಳ ಜನರ ಕನಸು, ಆಕಾಂಕ್ಷೆಗಳನ್ನು ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರ ಮತ್ತು ಮೈಲುಗಲ್ಲುಗಳ ಮೂಲಕ ಬೆಂಗಳೂರು ನಗರ ಈಡೇರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ನಗರವನ್ನು ಕೊಂಡಾಡಿದ್ದಾರೆ. 

ಬೆಂಗಳೂರು (ಜ.19): ದೇಶ-ವಿದೇಶಗಳ ಜನರ ಕನಸು, ಆಕಾಂಕ್ಷೆಗಳನ್ನು ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರ ಮತ್ತು ಮೈಲುಗಲ್ಲುಗಳ ಮೂಲಕ ಬೆಂಗಳೂರು ನಗರ ಈಡೇರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ನಗರವನ್ನು ಕೊಂಡಾಡಿದ್ದಾರೆ. ನಗರದಲ್ಲಿ ಶುಕ್ರವಾರ ಬೋಯಿಂಗ್ ಜಾಗತಿಕ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ನಗರದಲ್ಲಿನ ಈ ಅತ್ಯಾಧುನಿಕ ಕ್ಯಾಂಪಸ್, ಬೆಂಗಳೂರಿನ ಟೆಕ್ನಾಲಜಿ ಗುರುತನ್ನು ಮತ್ತಷ್ಟು ಬಲಪಡಿಸುತ್ತಿದೆ. ವೈಮಾನಿಕ ಕ್ಷೇತ್ರದ ಜಾಗತಿಕ ಬೇಡಿಕೆಗಳನ್ನು ಪೂರೈಸಲು ತಂತ್ರಜ್ಞಾನ ನಗರ ಸಮರ್ಥವಾಗಿದೆ. 

ವೈಮಾನಿಕ ಕ್ಷೇತ್ರದಲ್ಲಿ ಸಂಶೋಧನೆಗಳ ಮೂಲಕ ಭವಿಷ್ಯದಲ್ಲಿ ಜಗತ್ತಿನ ಗಮನ ಸೆಳೆಯುವ ವಿಶ್ವಾಸವಿದೆ ಎಂದರು. ವೈಮಾನಿಕ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಮತ್ತು ಖಾಸಗಿ ವಲಯಗಳನ್ನು ಒಂದೆಡೆ ಸೇರಿಸುವುದು, ಸ್ಟಾರ್ಟಪ್‌ಗಳ ಪಾಲುದಾರಿಕೆಯ ಸುಸ್ಥಿರ, ಸಮಗ್ರ ವ್ಯವಸ್ಥೆಯನ್ನು ನೂತನ ಬೋಯಿಂಗ್ ಕ್ಯಾಂಪಸ್ ಮೂಲಕ ಸೃಷ್ಟಿಸಲಾಗುತ್ತದೆ. ರಕ್ಷಣಾ ವಲಯ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರದ ಮುಂದಿನ ತಲೆಮಾರಿನ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಪಾಲುದಾರಿಕೆ ಸಂಶೋಧನೆಗಳನ್ನು ನಡೆಸಲಾಗುತ್ತದೆ. ಇದು ಬೆಂಗಳೂರು ನಗರದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮೋದಿ ಹೇಳಿದರು.

6ನೇ ಯೂತ್‌ ಗೇಮ್ಸ್‌ಗೆ ಪ್ರಧಾನಿ ಮೋದಿ ಚಾಲನೆ: 6ನೇ ಆವೃತ್ತಿ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಚಾಲನೆ ನೀಡಿದರು. ಚೆನ್ನೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದೀಪ ಬೆಳಗುವ ಮೂಲಕ ಕೂಟವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘2024ನ್ನು ಯುವ ಅಥ್ಲೀಟ್‌ಗಳ ಕ್ರೀಡಾಕೂಟದೊಂದಿಗೆ ಆರಂಭಿಸುತ್ತಿರುವುದು ಖುಷಿಯ ಸಂಗತಿ. ಇದು ಯುವ ಜನತೆಗೆ ಕೌಶಲ್ಯ, ಸಾಮರ್ಥ್ಯ ಸಾಬೀತುಪಡಿಸಲು ವೇದಿಕೆ ಒದಗಿಸಲಿದೆ. ಮುಂಬರುವ ದಿನಗಳಲ್ಲಿ ಕ್ರೀಡಾ ಕ್ಷೇತ್ರವು ₹1 ಲಕ್ಷ ಕೋಟಿಯಷ್ಟು ಬೃಹತ್ತಾಗಿ ಬೆಳಯಲಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ದೈವಾಂಶ ಸಂಭೂತ, ಸಂಸ್ಕಾರವಂತ ಮನುಷ್ಯ: ಎಚ್‌.ಡಿ.ದೇವೇಗೌಡ

ಕ್ರೀಡಾಕೂಟದಲ್ಲಿ ದೇಶದೆಲ್ಲೆಡೆಯ 5500+ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಜ.31ರ ವರೆಗೆ ಕೂಟ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.