Asianet Suvarna News Asianet Suvarna News

ಕಾಂಗ್ರೆಸ್ ಶಾಸಕ ದಿನೇಶ್‌ ಗುಂಡೂರಾವ್‌ಗೆ ಬಹಿರಂಗ ಎಚ್ಚರಿಕೆ

* ಶಾಸಕ ದಿನೇಶ್‌ ಗುಂಡೂರಾವ್‌ ವಿರುದ್ಧ ಎಎಪಿ ಆಕ್ರೋಶ
* ದಿನೇಶ್‌ ಗುಂಡೂರಾವ್‌ರವರನ್ನು ತರಾಟೆಗೆ ತೆಗೆದುಕೊಂಡ ಎಎಪಿ
* ದಿನೇಶ್‌ ಗುಂಡೂರಾವ್‌ ಹಠಾವೋʼ ಆಂದೋಲನ ಎಚ್ಚರಿಕೆ

Bengaluru AAP Hits out at Congress MLA Dinesh Gundu Rao rbj
Author
Bengaluru, First Published Oct 27, 2021, 10:24 PM IST
  • Facebook
  • Twitter
  • Whatsapp

ಬೆಂಗಳೂರು, (ಅ.27): ಗಾಂಧಿನಗರ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ವಿರುದ್ಧ ಬೆಂಗಳೂರು ನಗರ ಆಮ್‌ ಆದ್ಮಿ ಪಾರ್ಟಿಯ (Aam Aadmi Party) ಆಕ್ರೋಶ ವ್ಯಕ್ತಪಡಿಸಿದೆ.

ಇಂದು (ಅ.27) ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ (Bengaluru press Club) ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್‌ ದಾಸರಿ,ಗಾಂಧಿನಗರ ಕ್ಷೇತ್ರದ ರಸ್ತೆಗಳ ತುಂಬಾ ಗುಂಡಿಗಳು ಬಿದ್ದು ಜನರು ಪರದಾಡುತ್ತಿದ್ದರೆ, ಶಾಸಕ ದಿನೇಶ್‌ ಗುಂಡೂರಾವ್‌ರವರು ಸಮಸ್ಯೆ ಆಲಿಸಿ ಪರಿಹರಿಸುವ ಬದಲು ಕಾಣೆಯಾಗಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿಯ (Aam Aadmi Party) ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಶುರು: ದಿಲ್ಲಿಯಿಂದ ದಿನೇಶ್ ಗುಂಡೂರಾವ್ ಮಾಹಿತಿ

ಗಾಂಧಿನಗರ (Gandhinagar)ವಿಧಾನಸಭಾ ಕ್ಷೇತ್ರದ ಜನರು ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್‌ರವರನ್ನು ನೆನಪಿಸಿಕೊಂಡು ದಿನೇಶ್‌ ಗುಂಡೂರಾವ್‌ರವರನ್ನು ಶಾಸಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಆದರೆ ಕ್ಷೇತ್ರದ ಮೇಲೆ ಅವರಿಗಿರುವ ಅಸಡ್ಡೆಯಿಂದಾಗಿ ಅವರ ತಂದೆಯ ಹೆಸರಿಗೆ ಧಕ್ಕೆಯಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಸಂಪೂರ್ಣ ಕಡೆಗಣಿಸಿ ಹೊರರಾಜ್ಯಗಳಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ಗಾಂಧಿನಗರದ ಶಾಸಕ ಸ್ಥಾನಕ್ಕಿಂತ ಗೋವಾ ಮತ್ತು ತಮಿಳುನಾಡಿನ ಕಾಂಗ್ರೆಸ್‌ ಉಸ್ತುವಾರಿಯೇ ಅವರಿಗೆ ಮುಖ್ಯವಾಗಿದೆ. ಪರಿಣಾಮವಾಗಿ ಮತ ನೀಡಿದ ಜನರು ತೊಂದರೆ ಅನುಭವಿಸುತ್ತಿದ್ದಾರೆ' ಎಂದು ಹೇಳಿದರು.

ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುವ ದಿನೇಶ್‌ ಗುಂಡೂರಾವ್‌ರವರನ್ನು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸಿದರೆ, ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಚುನಾವಣೆ ವೇಳೆ ಆಶ್ವಾಸನೆಗಳನ್ನು ನೀಡಿ ಗೆದ್ದು, ಅಧಿಕಾರ ಸಿಕ್ಕ ನಂತರ ಅಸಹಾಯಕತೆ ವ್ಯಕ್ತಪಡಿಸುವ ಅವರಿಗೆ ನಾಚಿಕೆಯಾಗಬೇಕು. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವೇ ಹೊರತು ಬೇರೇನೂ ಅಲ್ಲ. ನೆರೆ ರಾಜ್ಯಗಳಿಗೆ ಪಲಾಯನ ಮಾಡಿರುವ ಅವರು ಇನ್ನಾದರೂ ವಾಪಸ್‌ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ. ಸಾಧ್ಯವಾಗದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಏನಾದರೂ ಮಾಡಿಕೊಳ್ಳಲಿ ಎಂದು ಮೋಹನ್‌ ದಾಸರಿಯವರು ದಿನೇಶ್‌ ಗುಂಡೂರಾವ್‌ರವರನ್ನು ತರಾಟೆಗೆ ತೆಗೆದುಕೊಂಡರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮಾತನಾಡಿ, 'ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಾರ್ಪೋರೇಟರ್‌ಗಳು ಹಾಗೂ ಕಾರ್ಯಕರ್ತರ ಆಟಾಟೋಪ ಮೀತಿಮೀರಿದ್ದು, ಕ್ಷೇತ್ರದ ಸಮಸ್ಯೆಗಳನ್ನು ಪ್ರಶ್ನಿಸುವ ಆಮ್‌ ಆದ್ಮಿ ಪಾರ್ಟಿ ಮುಖಂಡರಿಗೆ ಧಮಕಿ ಹಾಕುತ್ತಿದ್ದಾರೆ. ಅವರ ಗೂಂಡಾಗಿರಿ ಇದೇ ರೀತಿ ಮುಂದುವರಿದರೆ ʻದಿನೇಶ್‌ ಗುಂಡೂರಾವ್‌ ಹಠಾವೋʼ ಆಂದೋಲನದ ಮೂಲಕ ಜನರ ಬಳಿ ಹೋಗುತ್ತೇವೆ' ಎಂದು ಎಚ್ಚರಿಕೆ ನೀಡಿದರು.

ದಿನೇಶ್‌ ಗುಂಡೂರಾವ್‌ರವರು 1999ರಿಂದಲೂ ಕ್ಷೇತ್ರ ಶಾಸಕರಾಗಿದ್ದು, ರಾಜಕೀಯ ಹೊಂದಾಣಿಕೆಯಿಂದ ಕಳೆದ ಐದು ಚುನಾವಣೆ ಗೆದ್ದಿದ್ದಾರೆ. ಸ್ವಲ್ಪವಾದರೂ ಸುಸ್ಥಿತಿಯಲ್ಲಿದ್ದ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಿರುವುದೇ ಅವರ 22 ವರ್ಷಗಳ ಸಾಧನೆ. ಶಾಲೆ, ಆಸ್ಪತ್ರೆ ಮುಂತಾದ ಮೂಲಸೌಕರ್ಯಗಳು ಸೂಕ್ತ ರೀತಿಯಲ್ಲಿ ಇಲ್ಲದ ಗಾಂಧಿನಗರ ಕ್ಷೇತ್ರವು ದೇಶದಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿರಬಹುದು. ಕ್ಷೇತ್ರದ ಬಗ್ಗೆ ಹಾಗೂ ಮತದಾರರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ತೋರುವ ಶಾಸಕರು ಬಹುಶಃ ಮತ್ತೊಬ್ಬರು ಇರಲಿಕ್ಕಿಲ್ಲ. ಸಮಸ್ತ ಗಾಂಧಿನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಇಲ್ಲಿ ಆಮ್‌ ಆದ್ಮಿ ಪಾರ್ಟಿಯನ್ನು ಬಲಗೊಳಿಸಲಾಗುತ್ತಿದೆ  ಎಂದು ರಾಜಶೇಖರ್‌ ದೊಡ್ಡಣ್ಣ ಹೇಳಿದರು.

ಮಹಿಳಾ ಮುಖಂಡರಾದ ಉಷಾ ಮೋಹನ್‌ರವರು ಮಾತನಾಡಿ, ಶಾಸಕ ದಿನೇಶ್‌ ಗುಂಡೂರಾವ್‌ರವರ ಅಧಿಕಾರದಲ್ಲಿ ಅವರ ಪತ್ನಿ ಟಬು ರಾವ್‌ರವರ ಹಸ್ತಕ್ಷೇಪ ಅತಿಯಾಗಿದೆ. ಶಾಸಕರು ಕ್ಷೇತ್ರದಲ್ಲಿ ದೀರ್ಘಕಾಲ ಇಲ್ಲದಿರುವುದರ ಲಾಭವನ್ನು ಟಬು ರಾವ್ ಪಡೆಯುತ್ತಿದ್ದಾರೆ. ಜನಪ್ರತಿನಿಧಿಯಂತೆ ಅಧಿಕಾರದಿಂದ ಮೆರೆಯುತ್ತಿದ್ದಾರೆ. ಇದು ಅಸಂವಿಧಾನಿಕವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ದ್ರೋಹವಾಗಿದೆ ಎಂದು ಕಿಡಿಕಾರಿದರು. 

 

Follow Us:
Download App:
  • android
  • ios