ಸನಾತನ ಧರ್ಮದ ಬಗ್ಗೆ ಗೌರವವಿದೆ ಆದರೆ... ಉದಯನಿಧಿ ವಿವಾದಕ್ಕೆ ಮಮತಾ ರಿಯಾಕ್ಷನ್
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಬಗೆಗಿನ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಚೆನ್ನೈ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಬಗೆಗಿನ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕಾಗಿದೆ ಎಂದು ದೀದಿ ಹೇಳಿದ್ದು, ಉದಯನಿಧಿ ಅವರು ಯಾಕೆ ಮತ್ತು ಯಾವ ಆಧಾರದ ಮೇಲೆ ಈ ರೀತಿ ಕಾಮೆಂಟ್ ಮಾಡಿದ್ದಾರೆ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಉದಯನಿಧಿ ಮಾರನ್ (Udhayanidhi Stalin) ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. . ಸನಾತನ ಧರ್ಮ ಕೊರೋನಾ, ಮಲೇರಿಯಾ, ಡೆಂಗ್ಯೂ ಇದ್ದಂತೆ. ಅದನ್ನು ವಿರೋಧ ಮಾಡಬಾರದು, ಸಂಪೂರ್ಣವಾಗಿ ನಾಶಪಡಿಸಬೇಕು ಎಂದು ಉದಯನಿಧಿ ಮಾರನ್ ಹೇಳಿದ್ದು, ಇದು ವಿವಾದದ ಕಿಡಿ ಹಚ್ಚಿದೆ. ಉದಯನಿಧಿ ಸ್ಟಾಲಿನ್ ಈ ಹೇಳಿಕೆಗೆ ಕಾಂಗ್ರೆಸ್ ಕೂಡ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಬಿಜೆಪಿ ಕೂಡ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ನಿರ್ಮೂಲನೆ ಮಾಡಿ: ಸ್ಟಾಲಿನ್ ಪುತ್ರ
ಇದೇ ವಿಚಾರವಾಗಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ(Mamata Banerjee), ಒಂದು ವರ್ಗದ ಜನರನ್ನು ನೋಯಿಸುವ ಯಾವುದೇ ವಿಚಾರದಲ್ಲಿ ನಾವು ಭಾಗಿಯಾಗಬಾರದು ಎಂದು ಹೇಳಿದ್ದಾರೆ. ಉದಯನಿಧಿ ಇನ್ನು ಎಳಸು, ಅವರು ಯಾವ ಆಧಾರದ ಮೇಲೆ ಈ ರೀತಿ ಹೇಳಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ, ನಾನು ತಮಿಳುನಾಡು ಹಾಗೂ ದಕ್ಷಿಣ ಭಾರತದ ಜನರನ್ನು ಗೌರವಿಸುವೆ. ಪ್ರತಿಯೊಂದು ಧರ್ಮವೂ ಪ್ರತ್ಯೇಕ ಭಾವನೆ ನಂಬಿಕೆಗಳನ್ನು ಹೊಂದಿರುವುದರಿಂದ ಎಲ್ಲಾ ಧರ್ಮಗಳನ್ನುಗೌರವಿಸಬೇಕು ಎಂದು ನಾನು ದಕ್ಷಿಣ ಭಾರತದ ಜನರಲ್ಲಿ ಮನವಿ ಮಾಡುವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭಾರತದ ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿಯನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ನಾನು ಸನಾತನ ಧರ್ಮವನ್ನು ಗೌರವಿಸುವೆ, ನಾವು ವೇದಗಳಿಂದ ಕಲಿಯುತ್ತೇವೆ, ಕಲಿತಿದ್ದೇವೆ, ನಾವು ಸಾಕಷ್ಟು ಪುರೋಹಿತರನ್ನು ಹೊಂದಿದ್ದೇವೆ. ನಮ್ಮ ರಾಜ್ಯ ಸರ್ಕಾರ ಅವರಿಗೆ ಪಿಂಚಣಿ ನೀಡುತ್ತದೆ. ನಮ್ಮ ದೇಶದೆಲ್ಲೆಡೆ ಸಾವಿರಾರು ದೇಗುಲಗಳಿವೆ. ನಾವು ದೇಗುಲ ಮಸೀದಿ ಚರ್ಚ್‌ಗಳಿಗೆ ಭೇಟಿ ನೀಡುತ್ತೇವೆ. ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಡಿಎಂಕೆಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೂ ಧರ್ಮವೇ ಬೇಕಾ?
ಇತ್ತ ಉದಯನಿಧಿ ಸ್ಟಾಲಿನ್ ಹಿಂದೂ ವಿರೋಧಿ ಹೇಳಿಕಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿಯೂ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಈ ಹೇಳಿಕೆ ಮೂಲಕ ಉದಯನಿಧಿ ಸ್ಟಾಲಿನ್ ಹಿಂದೂಗಳ ಹತ್ಯಾಕಾಂಡಕ್ಕೆ ಕರೆ ನೀಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಅಲ್ಲದೇ ಈ ಹೇಳಿಕೆಯನ್ನು ಖಂಡಿಸದೇ ಮೌನಕ್ಕೆ ಶರಣಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು (Rahul Gandhi) ಹಿಂದೂ ವಿರೋಧಿ ಎಂದು ಜರೆದಿದೆ.
ಪ್ರತಿಯೊಬ್ಬರೂ ಎಲ್ಲಾ ಧರ್ಮಗಳನ್ನು ಗೌರವಿಸಬೇಕು, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಜನರಿಗೆ ಇದೆ ಎಂದು ಕಾಂಗ್ರೆಸ್ ಹೇಳಿದ್ದು, ಕಾಂಗ್ರೆಸ್‌ನ ಯುವ ನಾಯಕರಾದ ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ಕಾರ್ತಿ ಚಿದಂಬರಂ (Karti Chidambaram) ಅವರು ಸ್ಟಾಲಿನ್ ಜೂನಿಯರ್ ಉದಯನಿಧಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಸಿಪಿಎಂನ ಡಿ ರಾಜಾ (D Raja) ಕೂಡ ಉದಯನಿಧಿ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.