ಡಿಎಂಕೆಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೂ ಧರ್ಮವೇ ಬೇಕಾ?
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಸದಾ ಹಿಂದೂ ಧರ್ಮ, ನಂಬಿಕೆಗಳನ್ನೇ ಏಕೆ ಟೇಕಿಸುತ್ತಾರೋ ಗೊತ್ತಿಲ್ಲ. ಇದೀಗ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸರದಿ.
ದ್ರಾವಿಡ ಮುನ್ನೇತ್ರ ಕಳಗಂ, ಅಂದ್ರೆ ಡಿಎಂಕೆ ಪಕ್ಷದ ಹಿರಿ ತಲೆ ಕರುಣಾನಿಧಿ ಮೊಮ್ಮಗ, ಹಾಲಿ ಸಿಎಂ ಸ್ಟಾಲಿನ್ ಪುತ್ರ, ಸಚಿವ, ನಟ ಉದಯನಿಧಿ ಸ್ಟಾಲಿನ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ಅಜ್ಜನಂತೆ ಹಿಂದೂ ವಿರೋಧಿ ಹಾದಿಯಲ್ಲೇ ಸಾಗುವ ಸೂಚನೆ ಕೊಟ್ಟಿದ್ದಾರೆ ಉದಯನಿಧಿ. ಸನಾತನ ಧರ್ಮ ಕೊರೋನಾ, ಮಲೇರಿಯಾ, ಡೇಂಗೆ ಇದ್ದಂತೆ. ಇಂಥದ್ದನ್ನು ವಿರೋಧ ಮಾಡಬಾರದು, ಸಂಪೂರ್ಣವಾಗಿ ನಾಶಪಡಿಸಬೇಕು,’ ಇದು ಉದಯನಿಧಿ ಮಾತು.
'ಸನಾತನ ಎಂದರೇನು? ಈ ಪದ ಸಂಸ್ಕೃತದ್ದು, ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು. ಮತ್ತೇನೂ ಇಲ್ಲ,' ಅಂತ ಉದಯನಿಧಿ ವ್ಯಾಖ್ಯಾನಿಸಿದ್ದಾರೆ. ಸನಾತನ ಧರ್ಮ ಜಾತಿ ಆಧಾರದಲ್ಲಿ ಜನರನ್ನು ವಿಂಗಡಿಸಲಿದೆ. ಕರುಣಾನಿಧಿ ಎಲ್ಲ ವರ್ಗದವರೂ ಒಂದೆಡೆ ವಾಸಿಸಲು ನಾಂದಿ ಹಾಡಿದ್ದರು. ಎಲ್ಲ ವರ್ಗದವರು ಅರ್ಚಕರಾಗುವಂತೆ ಕಾನೂನು ರೂಪಿಸಿದ್ದರು. ನಮ್ಮ ಸ್ಟಾಲಿನ್, ಅರ್ಚಕ ತರಬೇತಿ ಪಡೆದ ದಲಿತರನ್ನೂ ದೇಗುಲಗಳಿಗೆ ನೇಮಿಸಿದರು,’ಅಂತ ವಿವರಿಸಿದ್ದಾರೆ. ಉದಯನಿಧಿ ಅವರ ಈ ಮಾತುಗಳೇ ಈಗ ಬೆಂಕಿ ಹೊತ್ತಿಸಿದೆ.
ಡಿಎಂಕೆ ಪಕ್ಷವು ತಮಿಳುನಾಡಿನಲ್ಲಿ ಮೊದಲಿನಿಂದಲೂ ಹಿಂದುತ್ವ ವಿರೋಧಿ ನಿಲುವು ತಾಳುತ್ತಲೇ ಬಂದಿದೆ. ರಾಮಸೇತು ವಿವಾದದ ವೇಳೆ ಮಾತನಾಡಿದ್ದ ಕರುಣಾನಿಧಿ, 'ನಿಮ್ಮ ಶ್ರೀರಾಮ ಯಾವ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದ? ಸೇತುವೆ ಕಟ್ಟಲು ಅವನೇನು ಎಂಜಿನಿಯರಾ?' ಎಂದು ವ್ಯಂಗ್ಯವಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.
ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ನಿರ್ಮೂಲನೆ ಮಾಡಿ: ಸ್ಟಾಲಿನ್ ಪುತ್ರ
'ನೀವು ಹಿಂದೂ ಆಗಿರುವವರೆಗೂ ನೀವು ಅಸ್ಪೃಶ್ಯರು,’ ಎಂದು ಡಿಎಂಕೆ ಎ. ರಾಜಾ ಸಹ ಬೆಂಕಿಯುಗುಳಿದ್ದರು. ಅವರ ಈ ಮಾತುಗಳಿಗೆ ಚುನಾವಣೆಗಳಲ್ಲಿ ಡಿಎಂಕೆ ಭಾರೀ ಬೆಲೆ ತೆರಬೇಕಾಯಿತು. ಈಗ ಅಧಿಕಾರಕ್ಕೆ ಬಂದಿರುವ ಡಿಎಂಕೆಯ ಮೂರನೇ ಕುಡಿ ಉದಯನಿಧಿ, ಹಳೇ ಚಾಳಿ ಮುಂದುವರಿಸಿದ್ದಾರೆ.
ತಮಿಳರು ಮೂಲತಃ ಶೈವಭಕ್ತರು, ದೈವ ಭಕ್ತರು. ತಮಿಳುನಾಡಿನ ಯಾವುದೇ ಫೈವ್ ಸ್ಟಾರ್ ಹೋಟೆಲ್, ಲಾಡ್ಜ್, ಥಿಯೇಟರ್ ಎಲ್ಲೇ ಹೋಗಿ ನೋಡಿ. ಗಣೇಶ, ಮುರುಗನ್ ಫೋಟೊ, ದೊಡ್ಡ ಬಟ್ಟಲಿನಲ್ಲಿ ವಿಭೂತಿ. ರೂಮ್‌ನಿಂದ ಹೊರಬರುವವರು ಮೊದಲು ದೇವರಿಗೆ ನಮಸ್ಕಾರ ಹಾಕಿ, ಹಣೆಗೆ ವಿಭೂತಿ ಹಚ್ಚಿಕೊಂಡೆ ಹೊರಗೆ ಕಾಲಿಡೋದು.
ಹಣೆಗೆ ವಿಭೂತಿ ಹಚ್ಚಿದ ಗಂಡಸರು, ಕೆನ್ನೆ ತುಂಬಾ ಅರಿಶಿನ, ಹಣೆ ಮೇಲೆ ಕುಂಕುಮದಿಂದ ನಳನಳಿಸೋ ಹೆಂಗಸರು ತಮಿಳು ಸಂಸ್ಕೃತಿಯ ಕುಡಿಗಳು. ಇನ್ನು, ಚೆನ್ನೈ ಮಹಾನಗರದ ರಸ್ತೆ ಬದಿಗಳಲ್ಲಿ ಪುಟ್ಟ ಪುಟ್ಟ ಗಣೇಶನ ಗುಡಿಗಳು ಹೆಜ್ಜೆ ಹೆಜ್ಜೆ ಕಾಣುತ್ತವೆ. ತಮಿಳುನಾಡಿನಲ್ಲಿರುವಷ್ಟು ದೇವಾಲಯಗಳು ಕರ್ನಾಟಕದಲ್ಲೂ ಇಲ್ಲ ಬಿಡಿ. ಅವರ ಹಬ್ಬ, ಆಚರಣೆ, ಮೂಢನಂಬಿಕೆಗೆ ಸ್ವತಃ ಡಿಎಂಕೆ ಸರಕಾರವೂ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ದುರಂತ ಅಂದ್ರೆ, ಉದಯನಿಧಿ ತಾಯಿ, ಸಿಎಂ ಸ್ಟಾಲಿನ್ ಪತ್ನಿ ದುರ್ಗಾ ಮಹಾನ್ ದೈವಭಕ್ತೆ. ಆಕೆ ಸುತ್ತದ ದೇವಸ್ಥಾನವೇ ಇಲ್ಲ, ಮಾಡದ ಪೂಜೆಯೇ ಇಲ್ಲ ಅನ್ಸುತ್ತೆ. ಮೊನ್ನೆ ಮೊನ್ನೆಯಷ್ಟೇ ಗುರುವಾಯೂರು ಶ್ರೀಕೃಷ್ಣ ನಿಗೆ 14 ಲಕ್ಷ ಮೌಲ್ಯದ ಕಿರೀಟ ಕೊಟ್ಟು, ಹರಕೆ ತೀರಿಸಿದ್ರು ದುರ್ಗಾ. ಗಂಡ ಸ್ಟಾಲಿನ್ ಸಿಎಂ ಆಗಲಿ ಅಂತ ದುರ್ಗಾ ಹರಕೆ ಹೊತ್ತಿದ್ದರಂತೆ. ಅದಕ್ಕಾಗಿ, ತುಲಾಭಾರ, ಗೋಪೂಜೆ ಮಾಡಿಸಿದ್ದೇ ಮಾಡಿಸಿದ್ದು. ಆಕೆಯ ಮನೆಯಲ್ಲಿ ನಡೆಯದ ಹೋಮ- ಹವನಗಳಿಲ್ಲ. ಆದ್ರೆ ಇದಾವುದೂ ಹೊರ ಜಗತ್ತಿಗೆ ಕಾಣಿಸದು. ಅಷ್ಟು ಎಚ್ಚರಿಕೆ.
ಸನಾತನ ಧರ್ಮವನ್ನುಹೀಯಾಳಿಸೋದು ಪಾಲಿಟಿಕ್ಸ್:
ಇನ್ನು, ಈ ಉದಯನಿಧಿ ಸ್ಟಾಲಿನ್, ಆಗಾಗ ತಮಿಳು ಸಿನಿಮಾಗಳಲ್ಲೂ ನಟಿಸ್ತಾರೆ. ಚಿತ್ರದ ಮುಹೂರ್ತದ ವೇಳೆ ಪೂಜೆ ಮಾಡಿ, ಸಿನಿಮಾ ಗೆಲ್ಲಿಸಪ್ಪ ಅಂತ ಕೈಮುಗಿಯುತ್ತಾರೆ. ಇಂಥವರು, ಸನಾತನ ಧರ್ಮವನ್ನೇ ಹೀಯಾಳಿಸೋದು ಜೋಕ್ ಬಿಡಿ. ಸದಾ ದೇವಸ್ಥಾನಗಳಿಗೆ ಸುತ್ತೋ ಅಮ್ಮನಿಗೆ ಮಗನ ಮಾತು ಕೇಳಿ ಸಿಟ್ಟು ಬರದೇ ಇರುವುದು ಆಶ್ವರ್ಯ ಅಲ್ಲ ಬಿಡಿ. ಯಾಕಂದ್ರೆ ಇದು ಪಾಲಿಟಿಕ್ಸ್!
ಖುಷ್ಭೂ ಸುಂದರ್ ಹಳೇ ಪಾತ್ರೆ ಎಂದಿದ್ದ ಡಿಎಂಕೆ ವಕ್ತಾರ ಪಕ್ಷದಿಂದ ವಜಾ
ರಾಜಕೀಯ ಭಾಷಣ. ತನ್ನ ಮನೆಯಲ್ಲೇ ಸನಾತನ ಧರ್ಮದ ಆಚರಣೆ ವಿರೋಧಿಸದ ಉದಯನಿಧಿ, ಯಾವುದೇ ಧರ್ಮದ ವಿರುದ್ಧ ಸಾರ್ವಜನಿಕವಾಗಿ ಹಸಿಹಸಿಯಾಗಿ ನಿಂದಿಸುವುದು ಸರಿಯಲ್ಲ. ಎಲ್ಲ ಧರ್ಮಗಳಲ್ಲೂ ಒಂದಲ್ಲ ಒಂದು ಮೌಢ್ಯಗಳು, ಅನಿಷ್ಟಗಳು ಆಚರಣೆಯಲ್ಲಿವೆ. ಇದರ ನಡುವೆಯೇ ಆ ಧರ್ಮಗಳ ನಂಬಿಕೆ, ಆಚರಣೆಗಳನ್ನು ಅವಲಂಬಿಸಿ ಸಮುದಾಯಗಳು, ಬದುಕು ಕಟ್ಟಿಕೊಂಡಿರುತ್ತವೆ. ಎಲ್ಲಧರ್ಮಗಳಲ್ಲಿರುವ ಅನಿಷ್ಟಗಳು ನಿರ್ಮೂಲನೆಯಾಗಬೇಕು. ಯಾವುದೇ ಧರ್ಮಗಳಲ್ಲಿ ಏನೇ ಲೋಪಗಳಿದ್ದರೂ ಅದು ಆಯಾ ಕಾಲಘಟ್ಟದ ಅಳವಡಿಕೆಯಷ್ಟೇ. ಕ್ರಮೇಣ ಕಾಲವೇ ಆ ದೋಷಗಳನ್ನು ನಿವಾರಿಸಿಕೊಂಡು ಮುನ್ನಡೆಯುತ್ತದೆ ಹಾಗೂ ಮುನ್ನಡೆಯುತ್ತಲೂ ಇದೆ.
ಆದರೆ ಇಂಥಾ ಮಾತುಗಳನ್ನು ಆಡುವಾಗ, ರಾಜಕೀಯ ನಾಯಕರು, ಚಿತ್ರನಟರು ಎಚ್ಚರಿಕ ವಹಿಸಬೇಕು. ಜನರ ನಂಬಿಕೆಗೆ ಘಾಸಿ ಮಾಡುವುದು ಎಷ್ಟು ಸರಿ? ಸನಾತನ ಧರ್ಮದ ಅನುಯಾಯಿಗಳು ಸಹ ಡಿಎಂಕೆ ಪಕ್ಷದ ಬೆಂಬಲಿಗರೂ ಆಗಿರುತ್ತಾರೆ. ನಮಗೆ ಸನಾತನ ಧರ್ಮದ ಅನುಯಾಯಿಗಳ ವೋಟ್ ಬೇಡ ಎನ್ನುವ ಧೈರ್ಯ ಡಿಎಂಕೆ ಪಕ್ಷಕ್ಕೂ, ಉದಯನಿಧಿಗೂ ಇದೆಯೇ ? 'ಸೋಂಕು ಪೀಡಿತ' ಮಾತಿನಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧರ್ಮವನ್ನೇ ಬಳಸಿಕೊಳ್ಳಬೇಕಾ ?