ಬೆಳಗಾವಿ, (ಏ.14): ಯಾವುದೇ ಕಚೇರಿಗಳನ್ನು ನೋಡದ ಸಚಿವ ಜಗದೀಶ ಶೆಟ್ಟರ್‌ಗೆ ಮಾತನಾಡುವದು ಬಿಟ್ಟರೆ ಬೇರೆ ಏನೂ ಸಾಧನೆ ಗೊತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.

ವಿಧಾನಸಭೆ ಸಭೆಯಲ್ಲಿ ಸತೀಶ್ ಜಾರಕಿಹೊಳಿ‌ ಒಮ್ಮೆಯೂ ಮಾತನಾಡಿಲ್ಲ ಎಂಬ ಸಚಿವ ಜಗದೀಶ್ ಶೆಟ್ಟರ್ ಆರೋಪಕ್ಕೆ ಬೆಳಗಾವಿಯಲ್ಲಿ ಇಂದು (ಬುಧವಾರ) ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಶೆಟ್ಟರ ಅವರಿಗೆ ಜನಸಾಮಾನ್ಯರ ಕಷ್ಟದ ಬಗ್ಗೆ ಗೊತ್ತಿಲ್ಲ. ಕೇವಲ ಭಾಷಣ ಮಾಡೋದನ್ನೇ ಸಾಧನೆ ಅಂದುಕೊಂಡಿದ್ದಾರೆ ಎಂದು ಟೀಕಿಸಿದರು.

ಬೆಳಗಾವಿ ಉಪಕದನ: ನಮ್ಮ ಕುಟುಂಬ ನೋಡಿ ಜನ ಮತ ಹಾಕ್ತಾರೆ, ಜಾರಕಿಹೊಳಿ

ಇದರಲ್ಲಿ ಸತ್ಯಾಂಶವಿದೆ. ಆದರೆ ಬರೀ ಮಾತನಾಡುವುದೇ ಸಾಧನೆ ಆಗಬಾರದು. ಶೆಟ್ಟರ್ ಮೂರು ಗಂಟೆ ವಿಧಾನಸಭೆಯಲ್ಲಿ ಮಾತನಾಡಿದರೆ, ಮೂರು ಗ್ಲಾಸ್ ನೀರು ಕುಡಿಯುತ್ತಾರೆ. ಯಾವುದೇ ಕಚೇರಿಯನ್ನು ಶೆಟ್ಟರ್ ನೋಡಿಲ್ಲ. ಭಾಷಣ ಮಾಡುವುದರಲ್ಲಿ ಪ್ರವೀಣರು. ಭಾಷಣಕ್ಕೂ ಕೆಲಸಕ್ಕೂ ತುಂಬಾ ವ್ಯತ್ಯಾಸ ಇದೆ ಎಂದು ಟಾಂಗ್ ನೀಡಿದರು.

ಕ್ಷೇತ್ರದಲ್ಲಿ ನಮ್ಮ ಪರವಾಗಿ ಉತ್ತಮ ವಾತಾವರಣವಿದ್ದು, ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತಮ್ಮ ಅಭ್ಯರ್ಥಿಯ ಸೋಲಿನ ಭೀತಿಯಿಂದ ಸಿಎಂ ಯಡಿಯೂರಪ್ಪ ಮರಳಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದರು.