ಸಚಿವ ಬಿ.ಸಿ ಪಾಟೀಲ್ ವಿರುದ್ದ ತೊಡೆ ತಟ್ಟಿದ ಯು.ಬಿ.ಬಣಕಾರ್: ಶುರುವಾಯ್ತು ಜಂಗಿ ಕುಸ್ತಿ
ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ. ಶತ್ರುಗಳೂ ಅಲ್ಲ ಅನ್ನೋ ಮಾತು ನೀವೆಲ್ಲಾ ಕೇಳೇ ಇರ್ತೀರಿ ಅಲ್ವಾ? ಕುಚುಕು ಕುಚುಕು ಅಂತ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡೋ ರಾಜಕಾರಣಿಗಳು ಬೆಳಗಾಗೋವಷ್ಟರಲ್ಲಿ ಶತ್ರುಗಳಾಗಿ ಬಿಡ್ತಾರೆ.
ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ
ಹಾವೇರಿ (ಆ.27): ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ. ಶತ್ರುಗಳೂ ಅಲ್ಲ ಅನ್ನೋ ಮಾತು ನೀವೆಲ್ಲಾ ಕೇಳೇ ಇರ್ತೀರಿ ಅಲ್ವಾ? ಕುಚುಕು ಕುಚುಕು ಅಂತ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡೋ ರಾಜಕಾರಣಿಗಳು ಬೆಳಗಾಗೋವಷ್ಟರಲ್ಲಿ ಶತ್ರುಗಳಾಗಿ ಬಿಡ್ತಾರೆ. ಈಗ ಹಾವೇರಿ ಜಿಲ್ಲೆ ಹಿರೇಕೇರೂರಿನಲ್ಲಿ ಆಗ್ತಿರೋದೂ ಇದೇ. 2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ರಾಜಕಾರಣ ದಿನೇ ದಿನೇ ಬದಲಾಗುತ್ತಿದೆ. RRR ಸಿನಿಮಾ ನೆನಪಿಸೋ ತರ ಭಾರಿ ದೋಸ್ತಿ ದೋಸ್ತಿ ಅಂತ ಓಡಾಡಿದ್ದ ಜೋಡಿ ಈಗ ಜಿದ್ದಿಗೆ ಬಿದ್ದಿದೆ.
ಕೃಷಿ ಸಚಿವ ಬಿ.ಸಿ ಪಾಟೀಲ್ ಹಾಗೂ ಮಾಜಿ ಶಾಸಕ ಯು.ಬಿ ಬಣಕಾರ್ 2023 ರ ಚುನಾವಣೆ ಅಖಾಡಕ್ಕಿಳಿದು ಈಗಾಗಲೇ ತೊಡೆ ತಟ್ಟುತ್ತಿದ್ದಾರೆ. ಹಿರೇಕೇರೂರು ಕ್ಷೇತ್ರದಲ್ಲಿ ಒಂದು ಗುದ್ದಲಿ ಪೂಜೆ ನಡೆಯಲಿ, ಒಂದು ಕಾಮಗಾರಿಗೆ ಚಾಲನೆ ನೀಡೋದಿರಲಿ ಒಟ್ಟೊಟ್ಟಿಗೆ ಓಡಾಡ್ತಿದ್ದ ಈ ಜೋಡೆತ್ತುಗಳು ಈಗ ಗುದ್ದಾಟಕ್ಕೆ ನಿಂತ ಗೂಳಿಗಳಂತಾಗಿವೆ. ಹಿರೇಕೇರೂರು ವಿಧಾನಸಭೆ ವ್ಯಾಪ್ತಿಗೆ ಬರುವ ರಟ್ಟಿಹಳ್ಳಿ ತಾಲೂಕು ಐತಿಹಾಸಿಕ ಮದಗ ಮಾಸೂರು ಕೆರೆಗೆ ಬಾಗೀನ ಅರ್ಪಿಸೋ ವಿಚಾರದಲ್ಲಿ ಇಬ್ಬರಿಗೂ ಭಿನ್ನಾಭಿಪ್ರಾಯ ಶುರುವಾಗಿದೆ. ಹಿರೇಕೇರೂರು ಕ್ಷೇತ್ರದಲ್ಲಿ ಕೌರವ ವರ್ಸಸ್ ಬಣಕಾರ್ ಜಿದ್ದಾ ಜಿದ್ದಿ ಶುರುವಾಗಿದೆ.
ಯಾರಾದರೂ ಹೊಗಳಿದರೆ ಹೆದರುತ್ತೇನೆ: ಸಿಎಂ ಬೊಮ್ಮಾಯಿ
ಸಚಿವ ಬಿ.ಸಿ ಪಾಟೀಲ್‌ಗೆ ರಣವೀಳ್ಯ ಕೊಟ್ಟ ಮಾಜಿ ಶಾಸಕ ಯು.ಬಿ ಬಣಕಾರ್: ಕಳೆದ ಅಗಸ್ಟ್ 16 ರಂದು ಸಚಿವ ಬಿ.ಸಿ ಪಾಟೀಲ್ ತಮ್ಮ ಫ್ಯಾಮಿಲಿ ಜೊತೆ ತೆರಳಿ ಮದಗ ಮಾಸೂರು ಕೆರೆಗೆ ಬಾಗೀನ ಅರ್ಪಣೆ ಮಾಡಿದರು. ಕಳೆದ ವರ್ಷ ಯು.ಬಿ ಬಣಕಾರ್ ಜೊತೆ ತೆರಳಿ ಬಾಗೀನ ಅರ್ಪಿಸಿದ್ದ ಬಿ.ಸಿ ಪಾಟೀಲ್ ಈ ಬಾರಿ ಪ್ರತ್ಯೇಕವಾಗಿ ಬಾಗೀನ ಅರ್ಪಿಸಿ ಬಂದಿದ್ದಾರೆ. ಇದಕ್ಕೆ ಟಕ್ಕರ್ ಕೊಟ್ಟ ಮಾಜಿ ಶಾಸಕ ಬಣಕಾರ್ ಸಾವಿರಾರು ಬೆಂಬಲಿಗರ ಜೊತೆ ತೆರಳಿ ಮದಗ ಮಾಸೂರು ಕೆರೆಗೆ ಬಾಗೀನ ಕೊಟ್ಟು ಬಂದಿದ್ದಾರೆ.
2023ರ ಚುನಾವಣೆಗೆ ಬಿ.ಸಿ ಪಾಟೀಲ್‌ಗೆ ತೊಡೆ ತಟ್ಟಿದ ಯು.ಬಿ ಬಣಕಾರ್: ಮದಗ ಮಾಸೂರು ಕೆರೆಗೆ ಬಾಗೀನ ಕೊಡೋ ಮೂಲಕ ಬಣಕಾರ್ ತೊಡೆ ತಟ್ಟಿದ್ದಾರೆ.ಈ ಬಾರಿ ನನಗೆ ಟಿಕೇಟ್ ಸಿಗೋದು ಪಕ್ಕಾ. ಬಿಎಸ್‌ವೈ ಸಿಎಂ ಆಗೋಕೆ ಕ್ಷೇತ್ರ ಬಿಟ್ಟು ಕೊಟ್ಟಿದ್ದೆ. ಹಾಗಂತ ಪ್ರತಿಯೊಂದು ಚುನಾವಣೆನೂ ಬಿಟ್ಟು ಕೊಡ್ತೀನಿ ಅಂತ ಅಲ್ಲ ಎನ್ನುವ ಮೂಲಕ ಪಾಟೀಲ್‌ಗೆ ರಣ ವೀಳ್ಯ ನೀಡಿದ್ದಾರೆ. ಈ ಮೂಲಕ ಹಿರೇಕೇರೂರು ಕ್ಷೇತ್ರದಲ್ಲಿ ರಾಜಕೀಯ ಗುದ್ದಾಟ ಆರಂಭವಾದಂತಾಗಿದೆ. ಹಿಂದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಡೆಸಿದ ಆಪರೇಶನ್ ಕಮಲದ ಮೂಲಕ ಕೇಸರಿ ಶಾಲು ಹಾಕಿಕೊಂಡು ಬಂದ ಬಿ.ಸಿ.ಪಾಟೀಲ್ ಮುಂದೆ ಹಸಿರು ಟವಲ್ ಹಾಕಿಕೊಂಡು ಕೃಷಿ ಮಂತ್ರಿ ಕೂಡಾ ಆಗಿ ನಾನು ರೈತನ ಮಗ ಅಂತ ಓಡಾಡ್ತಿದ್ದಾರೆ.
ರಾಣೆಬೆನ್ನೂರು ಕ್ಷೇತ್ರದ ಜೊತೆಗಿನ ಆತ್ಮೀಯತೆ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ
ಅಧಿಕಾರ ಉಳಿಸಿಕೊಳ್ಳಲು ಅಂದು ಬಿಎಸ್‌ವೈ ಕೌರವನಿಟ್ಟ ಎಲ್ಲಾ ಬೇಡಿಕೆಗಳಿಗೆ ಹೌದು ಅಂದಿದ್ದರು. 2018 ರಲ್ಲಿ ಬಿ.ಸಿ ಪಾಟೀಲ್ ವಿರುದ್ದ ಕೇವಲ 555 ಮತಗಳ ಅಂತರದ ಸೋಲುಂಡಿದ್ದ ಬಣಕಾರ್, 2019 ರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಿದ್ದ ಬಣಕಾರ್ ಬಿಎಸ್‌ವೈ ಮಾತಿಗೆ ಕಟ್ಟು ಬಿದ್ದಿದ್ದರು. ಉಪಚುನಾವಣೆಯಲ್ಲಿ ಬಿ.ಸಿ.ಪಾಟೀಲ್ ಸ್ಪರ್ಧಿಸಿ ಗೆಲ್ಲಲಿ. ಅವರಿಗೆ ಮಂತ್ರಿ ಮಾಡ್ತೀನಿ ಅಂತ ಭರವಸೆ ನೀಡಿದ್ದೇನೆ. ನೀನು ಬೈ ಎಲೆಕ್ಷನ್ ಸ್ಪರ್ಧೆ ಮಾಡೋದು ಬೇಡ ಅಂದಿದ್ರು ಬಿಎಸ್‌ವೈ. ಯಡಿಯೂರಪ್ಪನವರ ಮಾತಿಗೆ ಬೆಲೆ ಕೊಟ್ಟಿದ್ದ ಬಣಕಾರ್‌ಗೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಕೂಡಾ ನೀಡಲಾಗಿತ್ತು. ಬಳಿಕ ಜೋಡಿಯಾಗೇ ಓಡಾಡಿದ್ದ ಬಣಕಾರ್- ಪಾಟೀಲ್ ಈಗ ಕಾಳಗಕ್ಕೆ ರೆಡಿಯಾಗಿದ್ದಾರೆ.