ರಾಣೆಬೆನ್ನೂರು ಕ್ಷೇತ್ರದ ಜೊತೆಗಿನ ಆತ್ಮೀಯತೆ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತವರು ಜಿಲ್ಲೆಯಲ್ಲಿ ಬರುವ ರಾಣೆಬೆನ್ನೂರು ಕ್ಷೇತ್ರದ ಜೊತೆ ಇರುವ ಆತ್ಮೀಯತೆ ಬಿಚ್ಚಿಟ್ಟಿದ್ದಾರೆ.
ವರದಿ- ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ
ಹಾವೇರಿ ( ಅಗಸ್ಟ್ 25): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು(ಗುರುವಾರ) ತವರು ಜಿಲ್ಲೆ ಹಾವೇರಿ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ವೇಳೆ ರಾಣೆಬೆನ್ನೂರು ಕ್ಷೇತ್ರದ ಜನತೆಯನ್ನು ಕೊಂಡಾಡಿದರು.
ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಬಿ.ಟಿ.ಪಾಟೀಲ ಮೈದಾನದಲ್ಲಿ ಶಾಸಕ ಅರುಣಕುಮಾರ ಪೂಜಾರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದರು. ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಸಿಎಂ, ನಾನು ಯಾರಾದರೂ ಹೊಗಳಿದರೆ ಹೆದರುತ್ತೇನೆ.ತೆಗಳಿದರೆ, ಟೀಕೆ ಮಾಡಿದರೆ ನನ್ನ ಕೆಲಸದ ಮೂಲಕ ಉತ್ತರ ಕೊಡುತ್ತೇನೆ ಎಂದರು.
ಸಿಎಂ ಬೊಮ್ಮಾಯಿಗೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಗಡುವು ನೆನಪಿಸಿದ ಕಾಶಪ್ಪನವರ
ರಾಣೆಬೆನ್ನೂರು ನನ್ನ ರಾಜಕೀಯ ಜೀವನದಲ್ಲಿ ಅತಿ ಹೆಚ್ಚು ಆತ್ಮೀಯತೆ ತುಂಬಿದ ಕ್ಷೇತ್ರ.ಶಿಗ್ಗಾಂವಿ-ಸವಣೂರು ಕ್ಷೇತ್ರದ ಜನ ನನ್ನ ತಂದೆ ತಾಯಿ ಇದ್ದಂತೆ.ಸಿಎಂ ಆದ್ಮೇಲೆ ನಾನು ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಿಲ್ಲ.ಆದರೂ ಹೋದಾಗಲೆಲ್ಲ ಪ್ರೀತಿ, ವಿಶ್ವಾಸ ಕೊಟ್ಟಿದ್ದಾರೆ.ಅದೆ ರೀತಿ ರಾಣೆಬೆನ್ನೂರು ಜನ ಸಹ ಪ್ರೀತಿ, ವಿಶ್ವಾಸದಿಂದ ಇದ್ದಾರೆ.ಬಹಳ ತುರುಸಿನ ರಾಜಕಾರಣ ರಾಣೆಬೆನ್ನೂರು ಕ್ಷೇತ್ರದಲ್ಲಿದೆ.ಯಾಕಂದರೆ ಇದು ಬಹಳ ದೊಡ್ಡವರ ಕ್ಷೇತ್ರ.ಆದರೆ ಈಗ ಕಾಲ ಬದಲಾಗಿದೆ. ಮೊದಲಿನಂತೆ ಇಲ್ಲ, ಯುವಕರು ಬದಲಾವಣೆ ನೋಡಿದ್ದಾರೆ. ಅರುಣಕುಮಾರ ಉಡದ ರೀತಿ ಗಟ್ಟಿಯಾಗಿ ಹಿಡಿದುಕೊಂಡು ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾನೆ.ಈತ ನಿಮ್ಮ ಕೈ ಬಿಡಲ್ಲ, ಇವನ ಮೇಲೆ ನಂಬಿಕೆ ಇದೆ. ನೀವು ಇವನನ್ನು ಕೈ ಬಿಡಬೇಡಿ ಎಂದು ಹೇಳಿದರು.
ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯ ಅಂದರು. ಆದರೆ ಯಾರಿಗೆ ಕೊಟ್ಟರು.ರೈತರಿಗೆ ಕೊಟ್ಟರಾ.? ಮಹಿಳೆಯರಿಗೆ ಕೆಲಸ ಕೊಟ್ಟರಾ? ಯುವಕರಿಗೆ ಕೊಟ್ಟರಾ?ನಿಜವಾಗಿ ಸಾಮಾಜಿಕ ನ್ಯಾಯ ಕೊಡುತ್ತಿರುವುದು ಮೋದಿಯವರ ಸರಕಾರ.ನಾವು ಮಾಡಿದ ಕಾರ್ಯಕ್ರಮ, ನೀವು ಮಾಡಿದ ಕಾರ್ಯಕ್ರಮ ಜನರ ಮುಂದಿಡೋಣ.ಜನರು ತೀರ್ಮಾನ ಮಾಡುತ್ತಾರೆ ಎಂದು ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.
ನಿಮ್ಮ ವಿಶ್ವಾಸಕ್ಕೆ ಯಾವ ಕಾರಣಕ್ಕೂ ಚ್ಯುತಿ ಬಾರದಂತೆ ನೋಡಿಕೊಳ್ಳುವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.