ಬೆಂಗಳೂರು(ಡಿ.11): ಬಿಬಿಎಂಪಿ ವ್ಯಾಪ್ತಿ 1 ಕಿ.ಮೀ. ವಿಸ್ತರಣೆ, ವಾರ್ಡುಗಳ ಸಂಖ್ಯೆ 243ಕ್ಕೆ ಹೆಚ್ಚಳ, ಮೇಯರ್‌ ಅವಧಿ ಎರಡೂವರೆ ವರ್ಷಕ್ಕೆ ಏರಿಕೆ ಸೇರಿದಂತೆ ಬಿಬಿಎಂಪಿ ಆಡಳಿತ ಸುಧಾರಣೆಗೆ ಹಲವು ಅಂಶಗಳೊಂದಿಗೆ ರೂಪಿಸಲಾಗಿರುವ ಮಹತ್ವದ ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ 2020’ ಅನ್ನು ಗುರುವಾರ ವಿಧಾನಸಭೆ ಪ್ರತಿಪಕ್ಷ ಸದಸ್ಯರ ಅನುಪಸ್ಥಿತಿಯಲ್ಲಿ ಅಂಗೀಕರಿಸಲಾಯಿತು. ಇನ್ನು ವಿಧಾನಪರಿಷತ್‌ನಲ್ಲೂ ವಿಧೇಯಕವನ್ನು ಮಂಡನೆ ಮಾಡಿ ಅನುಮೋದನೆ ಪಡೆಯಲಾಯಿತು.

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಏರಿಕೆ ಮಾಡುವ ನಿಟ್ಟಿನಲ್ಲಿ ಜಂಟಿ ಪರಿಶೀಲನಾ ಸಮಿತಿ ಶಿಫಾರಸು ಮಾಡಿ ವರದಿ ಮಂಡನೆ ಮಾಡಿತ್ತು. ಆ ವರದಿಯನ್ನೇ ಆಧರಿಸಿ ಸಿದ್ಧಪಡಿಸಿದ 2020ರ ಸಾಲಿನ ಬಿಬಿಎಂಪಿ ವಿಧೇಯಕವನ್ನು ಬುಧವಾರ ಸದನಲ್ಲಿ ಮಂಡಿಸಲಾಗಿತ್ತು. 

ಬೆಂಗಳೂರು ನಗರದಲ್ಲಿ ಉತ್ತಮ ಆಡಳಿತಕ್ಕಾಗಿ ಜಾರಿಗೆ ತಂದಿರುವ ಈ ಮಸೂದೆಗೆ ಅನುಮೋದನೆ ನೀಡುವಂತೆ ಸರ್ಕಾರದ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸದನದಲ್ಲಿ ಕೋರಿದರು. ಕೆಲ ಬಿಜೆಪಿ ಸದಸ್ಯರ ಸಲಹೆ, ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಈ ವಿಧೇಯಕವನ್ನು ಪರ್ಯಾಲೋಚಿಸಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಬಿಬಿಎಂಪಿ ಚುನಾವಣೆ ಭವಿಷ್ಯ: ಮಹತ್ವದ ತೀರ್ಪು ನೀಡಿದ ಹೈಕೋರ್ಟ್..!

ವಿಧೇಯಕ ಪರ್ಯಾಲೋಚನೆ ಸೂಚಿಸಿದ ಸಚಿವ ಮಾಧುಸ್ವಾಮಿ ಅವರು, ವಿಧೇಯಕದಲ್ಲಿ ಬಿಬಿಎಂಪಿಯ ವ್ಯಾಪ್ತಿಯನ್ನು 1 ಕಿ.ಮೀ ವಿಸ್ತರಿಸಲು ಅವಕಾಶ ನೀಡಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳು 1 ಕಿ.ಮೀ. ಮೀರಿ ಇನ್ನೂ ನೂರಿನ್ನೂರು ಮೀಟರ್‌ ಆಚೆಗೆ ಇದ್ದರೂ ಅದನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಪ್ರಸ್ತುತ 12 ತಿಂಗಳು ಅಥವಾ 1 ವರ್ಷ ಇರುವ ಬಿಬಿಎಂಪಿ ಮೇಯರ್‌ ಅವಧಿಯನ್ನು 30 ತಿಂಗಳು ಅಥವಾ ಎರಡೂವರೆ ವರ್ಷಕ್ಕೆ ಏರಿಕೆ ಮಾಡಲಾಗಿದೆ. ಹಾಲಿ ಇರುವ 198 ವಾರ್ಡುಗಳನ್ನು 243ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಮುಖ್ಯ ಆಯುಕ್ತರಾಗಿ ನೇಮಕ ಮಾಡಬೇಕು, ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆಯನ್ನು 12ರಿಂದ 15ಕ್ಕೆ ಏರಿಕೆ ಮಾಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಇದುವರೆಗೆ ಬಿಬಿಎಂಪಿ ಸದಸ್ಯರಾಗಿದ್ದವರು ಶಾಸಕರಾಗಿ, ಸಂಸದರಾಗಿ ಅಥವಾ ಇನ್ಯಾವುದೇ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿ ಚುನಾಯಿತರಾದರೆ ಎರಡೂ ಕಡೆ ತಮ್ಮ ಸದಸ್ಯತ್ವ ಮುಂದುವರೆಸಲು ಅವಕಾಶ ಇತ್ತು. ಈಗಿನ ಮಸೂದೆಯಲ್ಲಿ ಆ ಅಂಶವನ್ನು ತೆಗೆದುಹಾಕಲಾಗಿದ್ದು, ಬಿಬಿಎಂಪಿ ಸದಸ್ಯರು ಶಾಸಕ, ಸಂಸದ ಸೇರಿದಂತೆ ಮತ್ತೊಂದು ಸಂಸ್ಥೆಯ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾದರೆ ಮುಂದಿನ ಆರು ತಿಂಗಳಲ್ಲಿ ಯಾವುದಾದರೂ ಒಂದು ಸದಸ್ಯ ಸ್ಥಾನವನ್ನು ಮಾತ್ರ ಉಳಿಸಿಕೊಳ್ಳಬೇಕೆಂದು ನಿಯಮ ತರಲಾಗಿದೆ ಎಂದು ಸಚಿವರು ತಿಳಿಸಿದರು.

ಈಗಿರುವ 8 ವಲಯಗಳನ್ನು 15ಕ್ಕೆ ಹೆಚ್ಚಿಸುವುದು, ಬಿಬಿಎಂಪಿ ವ್ಯಾಪ್ತಿಯ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸುವುದು, ಘನತ್ಯಾಜ್ಯ ನಿರ್ವಹಣಾ ಸೆಸ್‌, ಕ್ರಿಕೆಟ್‌ ವೀಕ್ಷಣೆ ಸೇರಿದಂತೆ ಮನೋರಂಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಕರ, ನಗರ ಸಾರಿಗೆ ಕರ ಸಂಗ್ರಹಕ್ಕೆ ಪಾಲಿಕೆಗೆ ಅಧಿಕಾರ, ಜಲ ಸಂರಕ್ಷಣೆ ದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಯ 40/60 ಅಳತೆಯ ಮನೆಗಳಿಗೆ ಮಳೆ ನೀರು ಕೊಯ್ಲು ಕಡ್ಡಾಯ, ಅಪಾಯಕಾರಿ ಕ್ವಾರಿಗಳನ್ನು ತಡೆಯುವ ಅಧಿಕಾರವನ್ನು ಪಾಲಿಕೆಗೆ ನೀಡಲಾಗಿದೆ. ಒಟ್ಟಾರೆ ಜನಸಂಖ್ಯೆಗೆ ಅನುಗುಣವಾಗಿ ವಾರ್ಡುಗಳ ಸಂಖ್ಯೆ ಹೆಚ್ಚಿಸಿ ಪುನರ್‌ ವಿಂಗಡಣೆ ಮಾಡಿ ಬೆಂಗಳೂರು ನಗರಕ್ಕೆ ಒಳ್ಳೆಯ ಆಡಳಿತ ನಡೆಸುವ ದೃಷ್ಟಿಯಿಂದ ತಂದಿರುವ ಈ ಮಸೂದೆ ಒಪ್ಪಿಗೆ ಕೊಡಲು ಮನವಿ ಮಾಡಿದರು. ನಂತರ ವಿಧೇಯಕವನ್ನು ಸ್ಪೀಕರ್‌ ಧ್ವನಿ ಮತಕ್ಕೆ ಹಾಕಿದಾಗ ಸದನ ಅನುಮೋದನೆ ನೀಡಿತು.

ಲಿಂಬಾವಳಿ, ಮುನಿರತ್ನ ಸಲಹೆ

ಬಿಬಿಎಂಪಿಯ ಹೊರವಲಯದ ಕ್ಷೇತ್ರಗಲ್ಲಿನ ಜನಸಂಖ್ಯೆಯು ಈಗ ಕೋರ್‌ ಎರಿಯಾಗಳ ಜನಸಂಖ್ಯೆಯಷ್ಟೇ ಬೆಳೆದಿರುವ ಸಾಧ್ಯತೆಗಳಿವೆ. ಹಾಗಾಗಿ 2011ರ ಜನಗಣತಿ ಪ್ರಕಾರದಲ್ಲಿ ವಾರ್ಡ್‌ ಪುನರ್‌ ವಿಂಗಡಣೆ ಸರಿಯಲ್ಲ. ಮೇಯರ್‌ ಚುನಾವಣೆಯಲ್ಲಿ ಬೆಂಗಳೂರಿನಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಮಾತ್ರ ಮತದಾನ ಪಟ್ಟಿಯಲ್ಲಿ ಅವಕಾಶ ನೀಡಬೇಕು. ಬೆಂಗಳೂರಿನ ಹೊರಗಿನ ಕ್ಷೇತ್ರ, ಸ್ಥಳೀಯ ಸಂಸ್ಥೆಗಳು, ಶಿಕ್ಷಕರ ಕ್ಷೇತ್ರಗಳಿಂದ ಆಯ್ಕೆಯಾದವರಿಗೆ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು, ರಾಜ್ಯ ಸಭಾ ಸದಸ್ಯರಿಗೆ ಅವಕಾಶ ನೀಡಬಾರದು. ಈಗ ತ್ಯಾಜ್ಯವನ್ನು ಹಣಕ್ಕೆ ಮಾರಾಟ ಮಾಡಬಹುದು. ಪಾಲಿಕೆ ಆರ್ಥಿಕ ಸಂಪನ್ಮೂಲ ಹೆಚ್ಚಳಕ್ಕೆ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಈ ಅಂಶಗಳನ್ನು ಮಸೂದೆಯಲ್ಲಿ ಸೇರಿಸಬೇಕೆಂದು ಶಾಸಕ ಅರವಿಂದ ಲಿಂಬಾವಳಿ ಮನವಿ ಮಾಡಿದರು.

ಶಾಸಕ ಮುನಿರತ್ನ ಮಸೂದೆಯನ್ನು ಸ್ವಾಗತಿಸಿ, ನಗರದ ಬಹಳಷ್ಟುಕ್ಷೇತ್ರಗಳಲ್ಲಿ ಅನೇಕ ರಸ್ತೆಗಳು ಕಿರಿದಾಗಿದ್ದು, ಸಂಚಾರ ಸಮಸ್ಯೆಯಾಗುತ್ತಿದೆ. ಅವುಗಳ ಅಗಲೀಕರಣಕ್ಕೆ ಒತ್ತು ನೀಡಬೇಕು. ಮಸೂದೆಯನ್ನು ಎಲ್ಲರೂ ಒಪ್ಪುವಂತಹದ್ದು ಎಂದರು.

ವಿಧೇಯಕಕ್ಕೆ ಕಾಂಗ್ರೆಸ್‌ ಆಕ್ಷೇಪ

ಬಿಬಿಎಂಪಿ ವಿಧೇಯಕದ ವಿಚಾರವಾಗಿ ಕಾಂಗ್ರೆಸ್‌ ಆಪ್ಷೇಪ ವ್ಯಕ್ತಪಡಿಸಿದೆ. ಸದನ ಸಮಿತಿಯಲ್ಲಿದ್ದ ಕಾಂಗ್ರೆಸ್‌ ಸದಸ್ಯರು ಜಂಟಿ ಸದನ ಸಮಿತಿ ಅಧ್ಯಕ್ಷ ಸಿ.ರಘು ಅವರಿಗೆ ಆಕ್ಷೇಪಣಾ ಪತ್ರ ಬರೆದಿದ್ದಾರೆ. ಆಕ್ಷೇಪಣಾ ಪತ್ರದಲ್ಲಿ ವಿಧೇಯಕವನ್ನು ಪರಾಮರ್ಶೆಗೆ ಒಳಪಡಿಸಬೇಕು ಹಾಗೂ ತಜ್ಞರ ಅಭಿಪ್ರಾಯವನ್ನು ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ವಿಕೇಂದ್ರೀಕರಣಕ್ಕೆ ಪೂರಕವಾದ ವಿಧೇಯಕ ಸಿದ್ಧಪಡಿಸಿ ಎಂದು ಆಗ್ರಹಿಸಿರುವ ಕಾಂಗ್ರೆಸ್‌ ಸದಸ್ಯರು, ತರಾತುರಿಯಲ್ಲಿ ವಿಧೇಯಕವನ್ನು ತರಬೇಡಿ ಎಂದು ಪತ್ರದ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಂಟಿ ಪರಿಶೀಲನಾ ಸಮಿತಿ ಸದಸ್ಯರಾದ ಕೃಷ್ಣ ಬೈರೇಗೌಡ ಹಾಗೂ ದಿನೇಶ್‌ ಗುಂಡೂರಾವ್‌ ಅವರು ವಿಧೇಯಕ ವಿರೋಧಿಸಿ ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ. ವಿಧೇಯಕವನ್ನು ಪರಾಮರ್ಶೆಗೆ ಒಳಪಡಿಸಬೇಕು ಹಾಗೂ ತಜ್ಞರ ಅಭಿಪ್ರಾಯ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಕಾಂಗ್ರೆಸ್‌ ವಿರೋಧ ಹಾಗೂ ಅನುಪಸ್ಥಿತಿಯಲ್ಲಿ ಬಿಬಿಎಂಪಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.