Asianet Suvarna News Asianet Suvarna News

MLC Election: ಶಿಕ್ಷಕರಿಂದ ನಯಾಪೈಸೆ ಪಡೆಯದೇ ಸೇವೆ ಸಲ್ಲಿಸಿದ್ದೇನೆ: ಹೊರಟ್ಟಿ

*   ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಭರ್ಜರಿ ಪ್ರಚಾರ
*  ಈ ಕ್ಷೇತ್ರದಿಂದ ಏಳು ಬಾರಿ ಆಯ್ಕೆಯಾಗಿದ್ದೇನೆ
*  ಮೊಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿ ವಿರೋಧ ಪಕ್ಷದ್ದಾಗಿದೆ 

Basavaraj Horatti Held MLC Election Campaign in Gadag grg
Author
Bengaluru, First Published Jun 3, 2022, 6:56 AM IST

ಹುಬ್ಬಳ್ಳಿ(ಜೂ.03): ಶಿಕ್ಷಕರಿಂದ ನಯಾಪೈಸೆ ಪಡೆಯದೇ ಶಿಕ್ಷಕರ ಕೆಲಸ ಮಾಡಿಕೊಟ್ಟಿರುವ ನೆಮ್ಮದಿಗೆ ನನಗಿದೆ. ಈ ಸಲ ಮತ್ತೊಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಆಶೀರ್ವದಿಸಿ ಆರಿಸಿ ಕಳುಹಿಸಿ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮನವಿ ಮಾಡಿದರು.

ಗುರುವಾರ ಗದಗ ಜಿಲ್ಲೆಯ ರೋಣ, ನರಗುಂದ, ಗಜೇಂದ್ರಗಡ ಸೇರಿದಂತೆ ವಿವಿಧೆಡೆ ಮಿಂಚಿನ ಸಂಚಾರ ನಡೆಸಿ ಮತದಾರರೊಂದಿಗೆ ಮನದಾಳದ ಮಾತು ಕಾರ್ಯಕ್ರಮದ ಮೂಲಕ ಪ್ರಚಾರ ನಡೆಸಿ ಈ ರೀತಿಯಾಗಿ ಮತಯಾಚಿಸಿದರು.
ಈ ಕ್ಷೇತ್ರದಿಂದ ಏಳು ಬಾರಿ ಆಯ್ಕೆಯಾಗಿದ್ದೇನೆ. ನನ್ನ ಇಡೀ ಜೀವನದಲ್ಲಿ ಶಿಕ್ಷಕರಿಂದ ನಯಾಪೈಸೆ ಪಡೆಯದೇ ಅವರ ಸಮಸ್ಯೆಗಳಿಗೆ ಕಿವಿಯಾಗಿದ್ದೇನೆ. ಶಿಕ್ಷಕರ ಬೆಂಬಲವೇ ನನಗೆ ಶ್ರೀರಕ್ಷೆ. ಶಾಸಕ, ಸಚಿವ ಹಾಗೂ ಸಭಾಪತಿಯಾಗಿ ಶಿಕ್ಷಕರ ಹಾಗೂ ಸಾರ್ವಜನಿಕರ ಸೇವೆಯನ್ನು ಕಳೆದ 42 ವರ್ಷಗಳಿಂದ ಮಾಡಿದ ಸಂತೋಷ ನನಗೆ ಇದೆ ಎಂದರು.

Karnataka Politics: ದೇವೇಗೌಡ ಬಿಟ್ಟ ದಾಳದಿಂದ ಸಿದ್ದು, ಡಿಕೆಶಿ ದಿಢೀರ್‌ ಒಗ್ಗಟ್ಟು!

ಪ್ರತಿ ಚುನಾವಣೆಯಲ್ಲಿ ಶಿಕ್ಷಕರಿಗೆ ನಾನು ಮಾಡಿದ ಕೆಲಸಗಳ ರಿಪೋರ್ಟ್‌ ಕಾರ್ಡ್‌ನ್ನು ನೀಡಿದ್ದೇನೆ. ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆ, ದೈಹಿಕ ಶಿಕ್ಷಣ ವಿಷಯವನ್ನು ಪ್ರಾಥಮಿಕ ಹಂತದಿಂದ ಪದವಿಪೂರ್ವ ಶಿಕ್ಷಣವರಗೆ ಕಡ್ಡಾಯ ವಿಷಯವನ್ನಾಗಿ ಮಾಡಿದ್ದು ದೇಶದಲ್ಲಿ ಮೊದಲು. ಈ ರೀತಿ ಹತ್ತಾರು ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಅಧಿಕಾರ ಇಲ್ಲದಾಗ ಹೋರಾಟ ಮಾಡಬೇಕು. ಅಧಿಕಾರ ಸಿಕ್ಕಾಗ ಸೇವೆ ಮಾಡಬೇಕು. ಅಧಿಕಾರ ಇರಲಿ, ಬಿಡಲಿ ಹೊರಟ್ಟಿಸದಾ ಶಿಕ್ಷಕರ ಜೊತೆಗಿದ್ದವರು. ಹೊರಟ್ಟಿಶಿಕ್ಷಕರ ಆಸ್ತಿ. ಶಿಕ್ಷಕರು ಯಾವತ್ತೂ ಇವರನ್ನು ಕೈಬಿಡುವುದಿಲ್ಲ. ಈ ಚುನಾವಣೆಯಲ್ಲಿ ಹಿಂದಿಗಿಂತ ಅತ್ಯಾಧಿಕ ಮತಗಳಿಂದ ಆರಿಸಿ ಕಳುಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏಳು ಅವಧಿ ಕಾಂಗ್ರೆಸ್‌-ಬಿಜೆಪಿ ವಿರುದ್ಧ ಸೆಣಸಿ ಗೆಲುವು ಸಾಧಿಸಿದ ಹೊರಟ್ಟಿ ಅವರಿಂದು ಬಿಜೆಪಿ ಅಭ್ಯರ್ಥಿಯಾಗಿದ್ದರಿಂದ ಅವರ ಶಕ್ತಿ ದ್ವಿಗುಣವಾಗಿದೆ. ಮೊಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿ ವಿರೋಧ ಪಕ್ಷದ್ದಾಗಿದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಹೊರಟ್ಟಿ ಅವರ ಗೆಲುವಿಗೆ ಶಿಕ್ಷಕರು ಆಶೀರ್ವದಿಸಬೇಕು ಎಂದು ವಿನಂತಿಸಿದರು.

ಚುನಾವಣೆಗೆ ಕಾಂಗ್ರೆಸ್‌ ನವ ಸಂಕಲ್ಪ: 150 ಸೀಟು ಗೆಲ್ಲಲು ಪಣ

ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಹೊರಟ್ಟಿ ಅವರು ಕ್ಷೇತ್ರದಲ್ಲಷ್ಟೇ ಅಲ್ಲ ರಾಜ್ಯಾದ್ಯಂತ ಶಿಕ್ಷಕರಿಗೆ ಚಿರಪರಿಚಿತರು. ಈಗಲೂ ಗೆಲುವು ಸಾಧಿಸುವುದು ಶತಸಿದ್ಧ. ಈ ಗೆಲುವು ಇತಿಹಾಸ ನಿರ್ಮಾಣ ಮಾಡಲಿದೆ. ಶಿಕ್ಷಕರು ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ವಿಶ್ವದಾಖಲೆಗೆ ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿದರು.

ಶಿಕ್ಷಕ ಡಿ.ಎನ್‌. ಮರಡ್ಡಿ, ನಿವೃತ್ತ ಪ್ರಾಧ್ಯಾಪಕ ಅನಿಲ ವೈದ್ಯ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಯಣಗೌಡ್ರ, ರಾಜಣ್ಣ ಹೂಲಿ, ಎಂ.ಎಸ್‌. ಕರಿಗೌಡ್ರ, ಬಸವರಾಜ ಗುಳೇದ, ಬಸವರಾಜ ಧಾರವಾಡ, ರವಿ ದಂಡಿನ, ಶಶಿಧರ ದಿಂಡೂರ, ಶಿವಕುಮಾರ ಬೆಲ್ಲದ, ಅಶೋಕ ನವಲಗುಂದ, ಶಿವಾನಂದ ಮಠದ, ಅನಿಲ ವೈದ್ಯ, ಎಸ್‌.ಎನ್‌. ಅಗಡಿ, ಅನಿಲಕುಮಾರ ಪಲ್ಲೇದ, ಬಿ.ಎಂ. ಸಜ್ಜನ ಮುಂತಾದವರು ಉಪಸ್ಥಿತರಿದ್ದರು. ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ ಸ್ವಾಗತಿಸಿದರು. ಉಮೇಶ ಮಲ್ಲಾಪುರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
 

Follow Us:
Download App:
  • android
  • ios