Asianet Suvarna News Asianet Suvarna News

ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ ಪಕ್ಷದ ನಾಯಕರಲ್ಲ: ಅರುಣ್‌ ಸಿಂಗ್‌

ಶಾಸಕರಾದ ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ ಯತ್ನಾಳ್‌ ಪಕ್ಷದ ನಾಯಕರೂ ಅಲ್ಲ, ಬಿಜೆಪಿ ಕೋರ್‌ ಕಮೀಟಿ ಸದಸ್ಯರೂ ಅಲ್ಲ. ಶಾಸಕರ ಹೇಳಿಕೆ ಪಕ್ಷದ ಹೇಳಿಕೆಯಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

basanagowda patil yatnal and aravind bellad are not our party leaders says arun singh gvd
Author
First Published Oct 17, 2022, 2:45 AM IST

ಹುಬ್ಬಳ್ಳಿ (ಅ.17): ಶಾಸಕರಾದ ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ ಯತ್ನಾಳ್‌ ಪಕ್ಷದ ನಾಯಕರೂ ಅಲ್ಲ, ಬಿಜೆಪಿ ಕೋರ್‌ ಕಮೀಟಿ ಸದಸ್ಯರೂ ಅಲ್ಲ. ಶಾಸಕರ ಹೇಳಿಕೆ ಪಕ್ಷದ ಹೇಳಿಕೆಯಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ತೆಗೆಯಬೇಕೆಂಬ ಬೆಲ್ಲದ ಹಾಗೂ ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಂಗ್‌, ಶಾಸಕರ ಹೇಳಿಕೆ ಪಕ್ಷದ ಹೇಳಿಕೆಯಾಗುವುದಿಲ್ಲ. 

ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಅವರ ಸ್ವಭಾವವೇ ಹಾಗಿದೆ. ಏನೂ ಮಾಡಲು ಆಗೋದಿಲ್ಲ. ಈ ಕುರಿತು ಪಕ್ಷದ ಶಿಸ್ತು ಸಮಿತಿಯಿಂದ ನೋಟಿಸ್‌ ನೀಡಲಾಗಿದೆ. ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಇಂತಹ ಮಹತ್ವದ ವಿಷಯಗಳ ಕುರಿತು ಪಕ್ಷದ ವೇದಿಕೆಯಲ್ಲಿ ಸಾಮೂಹಿಕ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು. ಇನ್ನು, ಜಗದೀಶ ಶೆಟ್ಟರ್‌ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಕೋರ್‌ ಕಮಿಟಿಯ ಸದಸ್ಯರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರಿಗೂ ಟಿಕೆಟ್‌ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಹುಬ್ಬಳ್ಳಿ, ಧಾರವಾಡಗಳಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ: ಅರುಣ್‌ ಸಿಂಗ್‌

ಸಿದ್ದು, ಡಿಕೆಶಿ ಮುಖ ಕೊಟ್ಟು ಮಾತನಾಡಲಿ: ನಂತರ, ಧಾರವಾಡ ಗ್ರಾಮೀಣ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಬ್ಬರೂ ಬರೀ ಹತ್ತು ನಿಮಿಷಗಳ ಕಾಲ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡುವುದು ಅಸಾಧ್ಯ. ಹೀಗಾಗಿ, ರಾಹುಲ್‌ ಗಾಂಧಿಯವರು ಮೊದಲು ಅವರಿಬ್ಬರನ್ನು ಒಂದು ಮಾಡಿ, ನಂತರ ಭಾರತದ ಬಗ್ಗೆ ಮಾತನಾಡಲಿ. ರಾಹುಲ್‌ರನ್ನು ನಾಯಕರೆಂದು ಯಾರೂ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ, ಕರ್ನಾಟಕದಲ್ಲಿ 2013ರ ಚುನಾವಣೆ ಫಲಿತಾಂಶ ಮರುಕಳಿಸುತ್ತದೆ ಎನ್ನುವುದು ಆಧಾರರಹಿತ ಮಾತಾಗಿದೆ. ರಾಹುಲ್‌ ಯಾತ್ರೆ ಈಗಾಗಲೇ ಪ್ಲಾಫ್‌ ಆಗಿದೆ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ, ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಿ ಪುನ: ಅಧಿಕಾರ ಹಿಡಿಯಲಿದೆ ಎಂದರು.

ಕಾಂಗ್ರೆಸ್‌ ಕಾರ್ಯಕರ್ತರ ಕುಟುಂಬಕ್ಕೂ ಬೇಕು ಮೋದಿ ಸರ್ಕಾರ: ಕಾಂಗ್ರೆಸ್‌ ಕಾರ್ಯಕರ್ತರ ಮನೆ-ಮನೆಗೆ ಹೋಗಿ ಯಾರು ಒಳ್ಳೆಯ ಆಡಳಿತ ನೀಡುತ್ತಾರೆಂದು ಅವರ ಕುಟುಂಬದವರಿಗೆ ಕೇಳಿದರೆ ಅವರೂ ಮೋದಿ ಹೆಸರು ಹೇಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಎಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಬೇರೂರಿವೆ ಎಂಬುದು ತಿಳಿಯುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದರು. ಇಲ್ಲಿಯ ಬಮ್ಮಾಪುರ ಓಣಿಯ ಗುರುಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದರು.

ರಾಹುಲ್‌ರನ್ನು ನಾಯಕ ಎಂದು ಯಾರೂ ಒಪ್ಪಿಕೊಂಡಿಲ್ಲ: ಅರುಣ್‌ ಸಿಂಗ್‌

ದೇಶದಲ್ಲಿ ಒಮ್ಮೆ ಕಾಂಗ್ರೆಸ್‌, ಒಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಟ್ರೆಂಡ್‌ ಈಗಿಲ್ಲ. ಗೋವಾದ ಸತತ ಮೂರು ಬಾರಿ ಬಿಜೆಪಿ ಆಡಳಿತ ಮಾಡುತ್ತಿದೆ. ಉತ್ತರ ಪ್ರದೇಶದಲ್ಲೂ ಎರಡು ಬಾರಿ, ಮಣಿಪುರ, ಉತ್ತರಾಖಂಡ ಹೀಗೆ ಹಲವು ರಾಜ್ಯಗಳಲ್ಲಿ ಬಿಜೆಪಿ ಮರು ಅಧಿಕಾರ ಸ್ಥಾಪಿಸುತ್ತಿದೆ. ದೇಶದ ಎಲ್ಲೆಡೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನೆಲಕಚ್ಚುತ್ತಿದೆ ಎಂದ ಅವರು, ದೇಶದ ಕಟ್ಟಕಡೆಯ ವ್ಯಕ್ತಿಗೂ ನೇರವಾಗಿ ಕೇಂದ್ರ ಸರ್ಕಾರ ಎಲ್ಲ ಸೌಲಭ್ಯ ನೀಡುತ್ತಿದೆ. ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸೀಟು ಪಡೆಯುವುದು ಖಚಿತ. 150ರಲ್ಲಿ ಕಾಂಗ್ರೆಸ್‌ ವಶದಲ್ಲಿರುವ ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರವನ್ನು ಸೇರಿಸುವ ನಿಟ್ಟಿನಲ್ಲಿ ಇಂದಿನಿಂದ ಕಾರ್ಯಕರ್ತರು ಹಗಲು, ರಾತ್ರಿ ಕೆಲಸ ಮಾಡುವಂತೆ, ವಂದೇ ಮಾತರಂ ಸಂಕಲ್ಪದಿಂದ ಪಕ್ಷದ ಕಾರ್ಯಗಳಲ್ಲಿ ತೊಡಗುವಂತೆ ಕರೆ ನೀಡಿದರು.

Follow Us:
Download App:
  • android
  • ios