ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗುವುದಿಲ್ಲ ಎಂದಿದ್ದಾರೆ. ಯತ್ನಾಳ್ ಕಾಂಗ್ರೆಸ್ಗೆ ಬರುವ ಸಾಧ್ಯತೆಯಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಲಿದ್ದು, ಹಲವು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಸಚಿವ ರಾಜೇಂದ್ರ ರಾಜಣ್ಣ ಕೊಲೆಗೆ ಸುಪಾರಿ ನೀಡಿದ ಪ್ರಕರಣದ ತನಿಖೆ ಆಗಬೇಕು. ರಂಜಾನ್ ಹಬ್ಬದ ಬಗ್ಗೆಯೂ ಸಚಿವರು ಮಾತನಾಡಿದ್ದಾರೆ.

ಬೆಂಗಳೂರು (ಮಾ.31): ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಆಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗುತ್ತದೆ ಎಂದು ನನಗಂತೂ ಅನಿಸುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರ ರಾಜಕೀಯದ ಬಗ್ಗೆ ನಾನು ಈಗ ವಿಶ್ಲೇಷಣೆ ಮಾಡುವುದಿಲ್ಲ. ನಮ್ಮ ರಾಜ್ಯದ ರಾಜಕಾರಣದಲ್ಲಿ ಅನೇಕ ಜನರು ಹೊದ ಪಾರ್ಟಿಯನ್ನು ಹುಟ್ಟು ಹಾಕುವ ಪ್ರಯತ್ನ ಮಾಡಿದರು. ದೊಡ್ಡ ದೊಡ್ಡವರೇ ಪಾರ್ಟಿ ಹುಟ್ಟು ಹಾಕಿದ್ದರು, ಆದರೆ ಅವರು ಯಾರೂ ಯಶಸ್ವಿ ಆಗಿಲ್ಲ. ಯತ್ನಾಳ್ ಅವರು ಕೂಡ ಪಕ್ಷಗಳ ಗೊಂದಲದಿಂದ ಹೊಸ ಪಾರ್ಟಿ ಹುಟ್ಟು ಹಾಕುತ್ತಿರಬಹುದು. ಆದರೆ, ಯತ್ನಾಳ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಡೆ ಬರಲು ಸಾಧ್ಯವಿಲ್ಲ. ಅವರ ಸಿದ್ದಾಂತವೇ ಬೇರೆ ನಮ್ಮ ಸಿದ್ದಾಂತವೇ ಬೇರೆ. ಜೆಡಿಎಸ್ ಕಡೆ ಬೇಕಿದ್ದರೆ ಹೋಗಲು ಚರ್ಚೆ ಮಾಡಬಹುದು. ಇಲ್ಲಿ ಮುಖ್ಯವಾಗಿ ಯತ್ನಾಳ್ ಅವರಿಗೆ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗುತ್ತದೆ ಎಂದು ನನಗಂತೂ ಅನಿಸುವುದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿ ಬಹಳ ದಿನಗಳಾಗಿತ್ತು. ಕೇಂದ್ರದಲ್ಲಿ ವರಿಷ್ಟರನ್ನು ಭೇಟಿ ಮಾಡ್ತಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಯವರನ್ನೂ ಕೂಡ ಸಿಎಂ ಭೇಟಿ ಮಾಡ್ತಾರೆ. ಮುಡಾ ಪ್ರಕರಣ ಆದಮೇಲೆ ಆರೋಗ್ಯ ಸ್ವಲ್ಪ ಏರು ಪೇರಾಗಿ ಬಜೆಟ್ ಕೂಡ ಇದ್ದ ಕಾರಣದಿಂದ ದೆಹಲಿಗೆ ಸಿಎಂ ಹೋಗಿರಲಿಲ್ಲ. ಎಲ್ಲ ವಿಷಯಗಳನ್ನೂ ಚರ್ಚೆ ಮಾಡಿ ಬರ್ತಾರೆ. ಸಿಎಂ ದೆಹಲಿಯಿಂದ ಬಂದ ಮೇಲೆ ಮುಂದಿನ ಹೆಜ್ಜೆ ಏನು ಎಂಬುದು ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ: ಶಾಸಕ ಯತ್ನಾಳ್‌ ಉಚ್ಚಾಟನೆಗೆ ಪ್ರತಿಕ್ರಿಯಿಸಲ್ಲ: ಸಂಸದ ಜಗದೀಶ್ ಶೆಟ್ಟರ್‌

ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸಚಿವ ರಾಜೇಂದ್ರ ರಾಜಣ್ಣ ಅವರ ಕೊಲೆಗೆ ಸುಪಾರಿ ಕೊಟ್ಟಿರುವ ವಿಚಾರ ಬಹಳ ಗಂಭೀರವಾದುದು. ತನಿಖೆ ಮಾಡಿ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ರಾಜಣ್ಣ ಕೂಡ ಹನಿಟ್ರ್ಯಾಪ್ ಬಗ್ಗೆ ದೂರು ಕೊಟ್ಟಿದ್ದಾರೆ. ಮಾಹಿತಿ ಸಂಗ್ರಹ ಆಗಿ, ಅದರಲ್ಲಿ ಯಾರಾರಿದ್ದಾರೋ ಎಲ್ಲರ ಹೆಸರು ಹೊರ ಬರಲೇಬೇಕು. ಪರಮೇಶ್ವರ್ - ರಾಜಣ್ಣ ಬಹಳ ಒಳ್ಳೆ ಬಾಂಧವ್ಯ ಇದೆ. ಅವರಿಬ್ಬರೂ ಬೆಂಚ್ ಮೇಟ್ಸ್ ಕೂಡ. ಹೀಗಾಗಿ ಒಳ್ಳೆಯ ತನಿಖೆಯೇ ಆಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ರಂಜಾನ್ ಹಬ್ಬದ ಬಗ್ಗೆ ಮಾತನಾಡಿ, ರಂಜಾನ್ ಪವಿತ್ರವಾದ ಹಬ್ಬ. ಪುನರುತ್ಥಾನ ಮಾಡಿಕೊಳ್ಳಲು ಒಂದು ಅವಕಾಶ ಇದು. ಎಲ್ಲ ಧರ್ಮಗಳು ಇರುವ ದೇಶ ನಮ್ಮದು. ಪ್ರಚೋದನಾಕಾರಿ ಮಾತುಗಳಿಗೆ ಇತಿಶ್ರೀ ಹಾಡಬೇಕು. ವಕ್ಫ್ ಕಾಯ್ದೆ ವಿರೋಧಿಸಿ ಕಪ್ಪು ಪಟ್ಟಿ ಪ್ರದರ್ಶನ ಮಾಡ್ತಿದ್ದಾರೆ. ವಕ್ಫ್ ವಿರೋಧಿಸಿ ನಮ್ಮ ಸರ್ಕಾರ ಕೂಡ ನಿಲುವಳಿ ಮಾಡಿದೆ. ಕಾನೂನುಬದ್ದವಾಗಿ ಮುಂದೆ ಸಾಗಬೇಕು. ಕೇಂದ್ರ ಸರ್ಕಾರದ ಉದ್ದೇಶ ಒಳ್ಳೆಯದಾಗಿಲ್ಲ, ಒಳ್ಳೆ ಉದ್ದೇಶ ಇಟ್ಟುಕೊಂಡಿಲ್ಲ. ವಿಶ್ವಾಸ ಪ್ರೀತಿಯಿಂದ ಗೆಲ್ಲಬೇಕೇ ಹೊರತು ದ್ವೇಷದಿಂದ ಆಗಲ್ಲ ಎಂದು ಹೇಳಿದರು.

ಇದನ್ನೂ ಓದಿ: ಶಾಸಕ ಯತ್ನಾಳ್‌ ಉಚ್ಚಾಟನೆ ಹಿಂದೆ ನಾವಿಲ್ಲ: ಬಿ.ವೈ.ವಿಜಯೇಂದ್ರ ಸ್ಪಷ್ಟನೆ