ಯಾರ ಬಗ್ಗೆಯೂ ದೂರು ನೀಡದಿರುವುದಕ್ಕೆ ಹೈಕಮಾಂಡ್ ನಾಯಕರು ನನ್ನ ಬಗ್ಗೆ ಖುಷಿಪಟ್ಟು ಗ್ರೇಟ್ ಎನ್ನುತ್ತಾರೆ. ಯತ್ನಾಳ್ ಎಂದಿಗೂ ದೂರು ಹೇಳಲ್ಲ ಎನ್ನುತ್ತಾರೆ. ನಾವು ಪಕ್ಷಕ್ಕೆ ಮತಗಳನ್ನು ತರುವವರು. ನಾವು ಯಾಕೆ, ಯಾರಿಗೆ ದೂರು ಹೇಳೋಣ? ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಆದರೂ ಇರಲಿ ಅಥವಾ ಬೇರೆ ಯಾರೇ ಇರಲಿ. ನಾವು ಪಕ್ಷದ ಪರ ಮಾತ್ರ ಕೆಲಸ ಮಾಡುತ್ತೇವೆ ಎಂದ ಬಸನಗೌಡ ಪಾಟೀಲ್ ಯತ್ನಾಳ್‌

ಬೆಂಗಳೂರು(ಜ.03): 'ನಾವು ಚಾಡಿಕೋರರಲ್ಲ. ಹೈಕಮಾಂಡ್‌ಗೆ ದೂರು ನೀಡುವವರು ನಾವಲ್ಲ' ಎಂದು ಬಿಜೆಪಿಯ ಅತೃಪ್ತ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಪರೋಕ್ಷವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ. ಖುದ್ದು ವಿಜಯೇಂದ್ರ ಅವರೇ ಬಂದು ನನ್ನನ್ನು ಮಾತನಾಡಿಸಿದರೂ ಮಾತನಾಡುವುದಿಲ್ಲ ಎಂದೂ ಅವರು ತೀಕ್ಷ್ಮವಾಗಿ ಹೇಳಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರ ಬಗ್ಗೆಯೂ ದೂರು ನೀಡದಿರುವುದಕ್ಕೆ ಹೈಕಮಾಂಡ್ ನಾಯಕರು ನನ್ನ ಬಗ್ಗೆ ಖುಷಿಪಟ್ಟು ಗ್ರೇಟ್ ಎನ್ನುತ್ತಾರೆ. ಯತ್ನಾಳ್ ಎಂದಿಗೂ ದೂರು ಹೇಳಲ್ಲ ಎನ್ನುತ್ತಾರೆ. ನಾವು ಪಕ್ಷಕ್ಕೆ ಮತಗಳನ್ನು ತರುವವರು. ನಾವು ಯಾಕೆ, ಯಾರಿಗೆ ದೂರು ಹೇಳೋಣ? ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಆದರೂ ಇರಲಿ ಅಥವಾ ಬೇರೆ ಯಾರೇ ಇರಲಿ. ನಾವು ಪಕ್ಷದ ಪರ ಮಾತ್ರ ಕೆಲಸ ಮಾಡುತ್ತೇವೆ ಎಂದರು. ಒಂದು ವೇಳೆ ಹೈಕಮಾಂಡ್ ನನ್ನನ್ನು ಕರೆದರೆ ಖಂಡಿತವಾಗಿಯೂ ಹೋಗುತ್ತೇನೆ. ನಾನು ಯಾರ ಮೇಲೂ ದೂರು ಕೊಡುವುದಿಲ್ಲವಾದ್ದರಿಂದ ಹೈಕಮಾಂಡ್ ನನ್ನನ್ನು ಕರೆಯುವುದಿಲ್ಲ ಎಂದರು.

ಹೊಸವರ್ಷ ದಿನವೇ ಭಿನ್ನರ ವಿರುದ್ಧ ಶಾಗೆ ವಿಜಯೇಂದ್ರ ದೂರು

ವಕ್ಫ್‌ ಇಂದು ಸಭೆ 

ವಕ್ಫ್‌ ಆಸ್ತಿ ವಿವಾದ ಕುರಿತ ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದ ಯತ್ನಾಳ, ಎರಡನೇ ಹಂತದ ಹೋರಾಟ ಸಂಬಂಧ ಶುಕ್ರವಾರ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ವಕ್ಫ್‌ ವಿರೋಧಿ ಹೋರಾಟದ ಮಹತ್ವವನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಾಗುವುದು. ಮುಂದಿನ ದಿನದಲ್ಲಿ ಸಭಾಧ್ಯಕ್ಷರ ಪೀಠದ ಮೇಲೆ ಮೌಲ್ವಿಗಳು ಬಂದು ಕುಳಿತುಕೊಳ್ಳುತ್ತಾರೆ. ಹಿಂದೂಗಳಿಗೆ, ರೈತರಿಗೆ ಅನ್ಯಾಯವಾಗಿದೆ. ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.