ಹೊಸವರ್ಷ ದಿನವೇ ಭಿನ್ನರ ವಿರುದ್ಧ ಶಾಗೆ ವಿಜಯೇಂದ್ರ ದೂರು
ದಿಟ್ಟ ಗೃಹ ಸಚಿವ ಅಮಿತ್ ಶಾ ಅವರನ್ನು ನೂತನ ಕ್ಯಾಲೆಂಡರ್‌ಹೊಸ ವರ್ಷದ ದಿನವಾದ ಬುಧವಾರ ಭೇಟಿಯಾಗಿ ಶುಭಾಶಯ ಕೋರಿ ಆಶೀರ್ವಾದ ಪಡೆಯಲಾಯಿತು ಎಂದು ತಿಳಿಸಿದ ವಿಜಯೇಂದ್ರ
ಬೆಂಗಳೂರು(ಜ.02): ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಚಟುವಟಿಕೆಗಳಿಂದ ಪಕ್ಷ ಸಂಘಟನೆಗೆ ಅಡ್ಡಿಯಾಗುತ್ತಿದ್ದು, ಕಡಿವಾಣ ಹಾಕಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವರೂ ಆಗಿರುವ ಪಕ್ಷದ ಪ್ರಭಾವಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.
ಬುಧವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ವಿಜಯೇಂದ್ರ ಅವರು ರಾಜ್ಯದ ಪ್ರಸಕ್ತ ಬೆಳವಣಿಗೆಗಳನ್ನು ಸವಿಸ್ತಾರವಾಗಿ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ.ನಡ್ಡಾರನ್ನೂ ಭೇಟಿಮಾಡಲು ವಿಜಯೇಂದ್ರ ಅವರು ಪ್ರಯತ್ನ ನಡೆಸುವ ನಿರೀಕ್ಷೆಯಿದೆ. ಹೆಚ್ಚ ಕಡಿಮೆ ವಿಜಯೇಂದ್ರ ಅವರು ರಾಜಾ ಧ್ಯಕ್ಷರಾದಾಗಿನಿಂದಲೂ ಅವರ ನಾಯಕತ್ವದ ವಿರುದ್ಧ, ಯಡಿಯೂರಪ್ಪ ವಿರುದ್ಧ ಯತ್ನಾಳ ಬಹಿರಂಗವಾಗಿ ಹರಿಹಾಯುತ್ತಲೇ ಇದ್ದಾರೆ. ಇದೀಗ ಯತ್ನಾಳ ಅವರೊಂದಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಇತರ ಕೆಲ ನಾಯಕರೂ ಕೈಜೋಡಿಸಿದ್ದಾರೆ. ಅಲ್ಲದೆ, ವಕ್ಸ್ ವಿಚಾರವಾಗಿ ಪಕ್ಷವನ್ನು ಕಡೆಗಣಿಸಿ ತಮ್ಮದೇ ತಂಡ ಕಟ್ಟಿಕೊಂಡು ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿದ್ದಾರೆ. ಇದೆಲ್ಲದರಿಂದ ಪಕ್ಷ ಸಂಘಟನೆಗೆ ಅಡಚಣೆಯಾಗುತ್ತಿದೆ. ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರ ಆಹಾರವಾಗುತ್ತಿದೆ ಎಂಬ ಅಂಶವನ್ನು ವಿಜಯೇಂದ್ರ ಅವರು ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ ಎಂದು ಎನ್ನಲಾಗಿದೆ. ವಿಶ್ವಸನೀಯ ಮೂಲಗಳು ತಿಳಿಸಿವೆ.
ಯತ್ನಾಳ ಬಣದ ಈ ಚಟುವಟಿಕೆಗಳಿಂದ ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ, ಬಿಬಿಎಂಪಿ ಚುನಾವಣೆ ಎದುರಾಗುವುದರಿಂದ ಪಕ್ಷ ಸಂಘಟನೆ ಬಲಪಡಿಸಬೇಕಾಗಿದೆ. ಎಲ್ಲ ನಾಯಕರೂ ಪಕ್ಷದ ಶಿಸ್ತಿಗೆ ಒಳಪಟ್ಟು ಕೆಲಸ ಮಾಡುವಂತಾಗಬೇಕು. ಪಕ್ಷದ ನಾಯಕತ್ವವನ್ನು ಮೀರಿ ತಮ್ಮದೇ ಹಾದಿ ತುಳಿದರೆ ಅದು ದೊಡ್ಡ ಹೊಡೆತ ನೀಡಲಿದೆ ಎಂಬ ಆತಂಕವನ್ನು ವಿಜಯೇಂದ್ರ ಅವರು ಅಮಿತ್ ಶಾ ಮುಂದೆ ವಿವರಿಸುವ ಪ್ರಯತ್ನ ಮಾಡಿದ್ದಾರೆ ವಿಜಯೇಂದ್ರ ಅವರ ಮಾತ ಮಾತುಗಳನ್ನು ಆಲಿಸಿರುವ ಅಮಿತ್ ಶಾ ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷ ಸಂಘಟನೆಗೆ ಮಾರ್ಗದರ್ಶನ-ಬಿವೈವಿ:
ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿರುವ ವಿಜಯೇಂದ್ರ, 'ದಿಟ್ಟ ಗೃಹ ಸಚಿವ ಅಮಿತ್ ಶಾ ಅವರನ್ನು ನೂತನ ಕ್ಯಾಲೆಂಡರ್‌ಹೊಸ ವರ್ಷದ ದಿನವಾದ ಬುಧವಾರ ಭೇಟಿಯಾಗಿ ಶುಭಾಶಯ ಕೋರಿ ಆಶೀರ್ವಾದ ಪಡೆಯಲಾಯಿತು' ಎಂದು ತಿಳಿಸಿದ್ದಾರೆ.
'ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದೀಚೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಕಾಂಗ್ರೆಸ್ ಆಡಳಿತದ ಪರಿಣಾಮವಾಗಿ ಪ್ರಸ್ತುತ ರಾಜ್ಯದಲ್ಲಿ ಉದ್ಭವಿಸಿರುವ ಅನೇಕ ಸಮಸ್ಯೆಗಳು, ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧದ ಆರೋಪಗಳ ಕುರಿತು ಹಾಗೂ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲವೃದ್ಧಿಗೊಳಿಸಲು ಯೋಜಿಸಿರುವ ಕಾರ್ಯಕ್ರಮಗಳ ಕುರಿತು ವಿವರಿಸಿ ಸೂಕ್ತ ಮಾರ್ಗದರ್ಶನ ಕೋರಲಾಯಿತು' ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
'ದೇಶ ಸುಭದ್ರತೆಗಾಗಿ ಪ್ರಧಾನಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಐತಿಹಾಸಿಕ ಹೆಜ್ಜೆಗಳನ್ನಿಡುತ್ತಿರುವ ಅಮಿತ್ ಶಾ ಅವರು ಪಕ್ಷ ಸಂಘಟನೆಗಾಗಿಯೂ ಅಷ್ಟೇ ಬದ್ಧತೆ ಹಾಗೂ 52723 ವಹಿಸುವುದು ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಆತ್ಮವಿಶ್ವಾಸದ ಛಲ ತುಂಬಲು ಕಾರಣವಾಗಿದೆ. ಅವರ ಸಂಘಟನಾ ಸಾಮರ್ಥ್ಯದ ಚತುರತೆ ಪಕ್ಷ ಕಟ್ಟುವ ಕಾಯಕ ಸದಾ ನನಗೆ ಪ್ರೇರಣೆ ಶಕ್ತಿಯಾಗಿದೆ. ಇಂದಿನ ಅವರ ಭೇಟಿಯ ಕ್ಷಣಗಳು ಎಂದಿನಂತೆ ಇನ್ನಷ್ಟು ಉತ್ಸಾಹತುಂಬಿ ಸಂಘಟನೆಯನ್ನು ನಿರೀಕ್ಷೆಯ ಗುರಿ ತಲುಪಿಸಲು ಆತ್ಮವಿಶ್ವಾಸ ತುಂಬಿತು' ಎಂದಿದ್ದಾರೆ.
ಸಚಿವ ಪ್ರಿಯಾಂಕ್ ವಿರುದ್ಧದ ಆರೋಪ ಬಗ್ಗೆ ಶಾಗೆ ಮಾಹಿತಿ
ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ವಿವಿಧ ಸಚಿವರ ವಿರುದ್ಧದ ಆರೋಪಗಳು ಮತ್ತು ಪ್ರಕರಣಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಅವರಿಗೆ ಬುಧವಾರದ ದೆಹಲಿ ಭೇಟಿ ವೇಳೆ ಮಾಹಿತಿ ನೀಡಿದ್ದಾರೆ. ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ್ ರೈಲಿಗೆ ತಲೆಕೊಟ್ಟು ಆತ್ಮ ಹತ್ಯೆ ಶರಣಾಗಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನೇ ಕಾರಣ. ಇದಕ್ಕೆ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿದೆ ಎಂದು ಆರೋಪಿಸಿ ಅಮಿತ್ ಶಾ ಅವರಿಗೆ ವಿಜಯೇಂದ್ರ ಅವರು ವಿವರಣೆ ನೀಡಿದ್ದಾರೆ ಎನ್ನಲಾಗಿದೆ.