BSY ಮತ್ತು ವಿಜಯೇಂದ್ರಗೆ ಯತ್ನಾಳ್ ಮತ್ತೊಂದು ಸವಾಲು.. ನಿಜ ಬಣ್ಣ ಬಯಲು!
ಸಿಎಂ ವಿರುದ್ಧ ಯತ್ನಾಳ್ ಮತ್ತೆ ಆಕ್ರೋಶ/ ಮೀಸಲಾತಿ ಕೊಡದಿದ್ದರೆ ಸಿಎಂ ಬದಲಾವಣೆ ನಿಶ್ಚಿತ/ ಕರ್ನಾಟಕದಲ್ಲಿ ವಿರೋಧ ಪಕ್ಷವೇ ಇಲ್ಲ/ ವಿಪಕ್ಷ ನಾಯಕರ ಸೌಲಭ್ಯ ನನಗೆ ಕೊಡಬೇಕು
ಬೆಂಗಳೂರು(ಏ. 07) ಸೂರ್ಯಚಂದ್ರ ಇರೋವರೆಗೂ ಯಡಿಯೂರಪ್ಪ ಸಿಎಂ ಎಂದು ಹೇಳ್ತಾರೆ. ಜಮ್ಮು ಕಾಶ್ಮೀರಗೆ ವಿಶೇಷ ಸ್ಥಾನ ಕೊಟ್ಟಂತೆ ಯಡಿಯೂರಪ್ಪಗೆ ಬಿಜೆಪಿಯಲ್ಲಿ ವಿಶೇಷ ಸ್ಥಾನಮಾನ ಕೊಟ್ಟಿಲ್ಲ. ಕಾರ್ಯಕರ್ತರ ಪಕ್ಷ ಇದು. ಯಡಿಯೂರಪ್ಪಗೆ ಎರಡು ವರ್ಷ ಬೋನಸ್ ಸಿಕ್ಕಿದೆ.ಇನ್ನು ಮುಂದೆ ಅವರೇ ದೂರ ಸರಿಯುವುದು ಉತ್ತಮ. ಇಲ್ಲ ಅಂದ್ರೆ 17 ರ ಬಳಿಕ ಶಾಸಕರು ರೊಚ್ಚಿಗೇಳ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕೆಂಡ ಕಾರಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರು ಯಡಿಯೂರಪ್ಪ ಅವರ ವಕ್ತಾರರಾ..? ಅವರ ವಕ್ತಾರರ ರೀತಿ ಹೇಳಿಕೆ ಕೊಡ್ತಿದ್ದಾರೆ. ಯಡಿಯೂರಪ್ಪ ಮುಂದುವರಿದ್ರೆ ಕಾಂಗ್ರೆಸ್ ಮುಂದಿನ ಸಾರಿ ಸುಲಭವಾಗಿ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕ್ತಿದ್ದಾರೆ. ಇದು ನಡೆಯಲ್ಲ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ. ಮೇ 2ರ ಬಳಿಕ ಸಿಎಂ ಬದಲಾಗುವುದು ಖಚಿತ. ಎರಡು ಮೂರು ಜನ ಶಾಸಕರು ನನ್ನ ವಿರುದ್ಧ ಮಾತನಾಡ್ತಾರೆ. ಉಳಿದ ಬಿಜೆಪಿ ನಿಷ್ಠಾವಂತ ಶಾಸಕರು ನನ್ನ ಜತೆ ಇದ್ದಾರೆ ಎಂದರು.
ಈಶ್ವರಪ್ಪ ಪರ ಬ್ಯಾಟ್ ಬೀಸಿದ ಯತ್ನಾಳ್
ರಾಜ್ಯದಲ್ಲಿ ವಿಪಕ್ಷ ಇಲ್ಲ. ವಿಪಕ್ಷ ನಾಯಕರು ಕಾವೇರಿಯಲ್ಲಿ ಯಡಿಯೂರಪ್ಪನ ಜತೆ ಇದ್ದಾರೆ. ಕಾವೇರಿ ಬಿಡಲು ಸಿದ್ದರಾಮಯ್ಯ ಹಿಂದೇಟು ಹಾಕಿದ್ದಾರೆ. ಯಡಿಯೂರಪ್ಪ ಮತ್ತು ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆ ಆಗಿದೆ. ಸ್ಪೀಕರ್ ವಿಪಕ್ಷ ನಾಯಕರ ಸೌಲಭ್ಯ ನನಗೆ ಕೊಡಬೇಕು ಎದು ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದರು.
ಬೆಳಗಾವಿ ಮತ್ತು ಬಸವಕಲ್ಯಾಣಕ್ಕೆ ಪ್ರಚಾರಕ್ಕೆ ಹೋಗ್ತೀನಿ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಅವರು ಸಿಎಂ ಆಗಿದ್ದಾಗ ಸಮುದಾಯವನ್ನು 2 ಎ ಗೆ ಸೇರಿಸಿದ್ರು. ಹೀಗಾಗಿ ನಾನು ಪ್ರಚಾರಕ್ಕೆ ಹೋಗ್ತಿದ್ದೇನೆ ಬೆಳಗಾವಿ ಮತ್ತು ಬಸವಕಲ್ಯಾಣದಲ್ಲಿ ಪಂಚಮಸಾಲಿ ಸಮುದಾಯ ಬಿಜೆಪಿ ಪರವಾಗಿ ನಿಲ್ಲುವಂತೆ ಮನವಿ ಮಾಡ್ತೀನಿ. ಈ ಸಿಎಂ ಮೀಸಲಾತಿ ಕೊಡದಿದ್ದರೂ ಮುಂದೆ ಬರುವ ಸಿಎಂ ಮೀಸಲಾತಿ ಕೊಡ್ತಾರೆ ಎಂದರು.
ಮೀಸಲಾತಿ ಯಡಿಯೂರಪ್ಪ ಕೊಡಲಿಲ್ಲ ಅಂದ್ರು ಮೇ 2 ರ ಮೇಲೆ ಬರುವ ಮುಖ್ಯಮಂತ್ರಿ ಮಾಡ್ತಾರೆ. ಮೇ ಎರಡರ ನಂತರ ಉತ್ತರ ಕರ್ನಾಟಕದ ನಾಯಕರೊಬ್ಬರು ಸಿಎಂ ಆಗ್ತಾರೆ . ಇನ್ನೂ ಸ್ವಲ್ಪ ದಿನಗಳಲ್ಲೇ ಅಪ್ಪ ಮಗನ ನಿಜ ಬಣ್ಣ ಬಯಲಾಗಲಿದೆ. ವಿಜಯೇಂದ್ರ ಎಷ್ಟು ಲೂಟಿ ಮಾಡಿದ್ರು ಎಂಬುದು ಗೊತ್ತಾಗುತ್ತೆ ಫೆಡರಲ್ ಬ್ಯಾಂಕ್ ವ್ಯವಹಾರ ದಲ್ಲಿ ವಿಜಯೇಂದ್ರರನ್ನು ಇಡಿಯವರು ಕರೆದುಕೊಂಡು ಹೋಗಿಲ್ಲ ಎಂದು ಹೇಳಲಿ.. ನಾನು ಅವರಿಗೆ ಚಾಲೆಂಜ್ ಮಾಡ್ತೇನೆ. ಇದೇ ಡಿಕೆಶಿ ಯನ್ನು ಇಡಿಯವರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ರಲ್ಲ. ಅಲ್ಲಿಗೆ ವಿಜಯೇಂದ್ರರನ್ನು ಕರೆದುಕೊಂಡು ಹೋಗಿ ಇಡಿಯವರು ವಿಚಾರಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸೂಟು ಬೂಟು ಹಾಕೊಂಡು ಹೋಗಿದ್ರು. ಅದೆನ್ನೆಲ್ಲಾ ಬಿಚ್ಚಿಸಿ, ಡಿಕೆಶಿ ತರನೇ ವಿಜಯೇಂದ್ರರನ್ನು ವಿಚಾರಣೆ ಮಾಡಿದ್ದಾರೆ. ಇದೆಲ್ಲೆವೂ ಸ್ವಲ್ಪ ದಿನಗಳಲ್ಲೇ ಗೊತ್ತಾಗಲಿದೆ.ಯಾರೋ ಒಬ್ಬರು ಚಿಲ್ಲರೆ ಪಲ್ಲರೆಗಳ ಕೈಯಲ್ಲಿ ಮಾತಡಿಸ್ತಾರೆ ತಾಕತ್ ಇದ್ರೆ ನನ್ನ ಬಗ್ಗೆ ಅಪ್ಪ ಮಗ ಮಾತಾಡಲಿ ಎಂದು ಸಿಎಂ ಬಿಎಸ್ವೈ ಹಾಗೂ ಪುತ್ರ ವಿಜಯೇಂದ್ರಗೆ ಸವಾಲು ಎಸೆದರು.