ಸಿಂಧನೂರು(ಏ.07): ಕಳೆದ ಮೂರು ತಿಂಗಳಿನಿಂದಲೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮುಖ್ಯಮಂತ್ರಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯಲ್ಲಿ ತಪ್ಪಿದ್ದರೆ ಬಿಜೆಪಿ ಹೈಕಮಾಂಡ್‌ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಸಚಿವ ಈಶ್ವರಪ್ಪ ಸಹ ಮುಖ್ಯಮಂತ್ರಿ ವಿರುದ್ಧ ರಾಜ್ಯ ಪಾಲರಿಗೆ ದೂರು ನೀಡಿದ್ದಾರೆ. ತಾಕತ್ತಿದ್ದರೆ ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಯತ್ನಾಳ್‌ ಮತ್ತು ಈಶ್ವರಪ್ಪ ಅವರಿಗೆ ಆರ್‌ಎಸ್‌ಎಸ್‌ ಬೆಂಬಲವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ತಾಲೂಕಿನ ಪಗಡದಿನ್ನಿ ಕ್ಯಾಂಪಿನ ಕಾಂಗ್ರೆಸ್‌ ಮುಖಂಡ ಚಿಟ್ಟೂರಿ ಶ್ರೀನಿವಾಸ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಮೇಶ ಜಾರಕಿಹೊಳಿ ಸಿಡಿ ವಿಚಾರ ಬಳಸಿಕೊಂಡು ಕಾಂಗ್ರೆಸ್‌ ಚುನಾವಣೆ ಮಾಡುವುದಿಲ್ಲ. ಬದಲಾಗಿ ಈಶ್ವರಪ್ಪ ರಾಜ್ಯ ಪಾಲರಿಗೆ ದೂರು ನೀಡಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಅನ್ನಭಾಗ್ಯ ಯೋಜನೆ ಬಿಜೆಪಿ ಸರ್ಕಾರದ್ದು, ಆದರೆ 2013ರಲ್ಲಿ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಫೈಲ್‌ಗೆ ಸಹಿ ಹಾಕಿಲ್ಲ ಎಂದು ಹೇಳುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ನಾಚಿಕೆಯಾಗಬೇಕು. ಅನ್ನಭಾಗ್ಯ ಬಗ್ಗೆ ಕಾಳಜಿ ಇದ್ದರೆ ಅಕ್ಕಿ ಕಡಿತಗೊಳಿಸುವ ಬದಲು ಜಾಸ್ತಿ ಯಾಕೆ ಮಾಡಿಲ್ಲ. ಇಂತಹ ಸುಳ್ಳುಗಳನ್ನು ನಂಬುವಷ್ಟು ಜನ ದಡ್ಡರಲ್ಲ ಎಂದು ಹೇಳಿದರು.

ಈಶ್ವರಪ್ಪ ನಾಮ್‌ಕೇ ವಾಸ್ತೆ ಮಂತ್ರಿ: ನಾನಾಗಿದ್ದರೆ ಒಂದು ಸೆಕೆಂಡೂ ಸಚಿವನಾಗಿರುತ್ತಿರಲಿಲ್ಲ, ಸಿದ್ದು

ಮಸ್ಕಿಯಲ್ಲಿ ತುರ್ವಿಹಾಳ ಪರವಾಗಿ ಅನಿರೀಕ್ಷಿತ ಬೆಂಬಲವಿದೆ. ಬಸವಕಲ್ಯಾಣದಲ್ಲಿ ನಾರಾಯಣರಾವ್‌ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಮಲ್ಲಮ್ಮ ಬಗ್ಗೆ ಅನುಕಂಪ ಇದೆ. ಬೆಳಗಾವಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಆದ್ದರಿಂದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.

ಮಸ್ಕಿ ಉಪಚುನಾವಣೆ ಉಸ್ತುವಾರಿ ಆರ್‌.ಧ್ರುವನಾರಾಯಣ, ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ನಾಯಕ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಕಾಂಗ್ರೆಸ್‌ ಮುಖಂಡರಾದ ಸೈಯ್ಯದ್‌ ಜಾಫರ ಅಲಿ ಜಾಗೀರದಾರ್‌, ಚಿಟ್ಟೂರಿ ಶ್ರೀನಿವಾಸ ಇದ್ದರು.