ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ನಿವೃತ್ತ ನ್ಯಾ. ನಾಗಮೋಹನ್‌ ದಾಸ್‌ ಅವರ ತನಿಖಾ ಆಯೋಗಕ್ಕೆ ಸಲ್ಲಿಸಬೇಕು. ಆ ಮೂಲಕ ತಮ್ಮ ಆರೋಪವನ್ನು ಸಾಬೀತು ಮಾಡಬೇಕು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ  

ಬೆಂಗಳೂರು(ಡಿ.29):  ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಭ್ರಷ್ಟರಿಗೆ ಶಿಕ್ಷೆಯಾಗಬೇಕು ಎಂಬ ಮನಸ್ಥಿತಿ ಇದ್ದರೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರ ತನಿಖಾ ಆಯೋಗಕ್ಕೆ ಸಲ್ಲಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾ ಮೊದಲ ಅಲೆ ತಡೆಯುವ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಕ್ರಮ ನಡೆಸಿದೆ. ಕೊರೋನಾ ತಡೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಯತ್ನಾಳ್‌ ಆರೋಪಿಸಿದ್ದಾರೆ. ಅವರು ಈ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ನಿವೃತ್ತ ನ್ಯಾ. ನಾಗಮೋಹನ್‌ ದಾಸ್‌ ಅವರ ತನಿಖಾ ಆಯೋಗಕ್ಕೆ ಸಲ್ಲಿಸಬೇಕು. ಆ ಮೂಲಕ ತಮ್ಮ ಆರೋಪವನ್ನು ಸಾಬೀತು ಮಾಡಬೇಕು ಎಂದರು.

ಸಚಿವ ಎಂ.ಬಿ.ಪಾಟೀಲ-ಯತ್ನಾಳ್‌ ನಡುವೆ ಟಿಪ್ಪು ವಾಕ್ಸಮರ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ನಿಜಕ್ಕೂ ಭ್ರಷ್ಟರಿಗೆ ಶಿಕ್ಷೆಯಾಗಬೇಕು ಎಂಬ ಉದ್ದೇಶವಿದ್ದರೆ, ಆಯೋಗದ ಮುಂದೆ ದಾಖಲೆಗಳನ್ನು ಸಲ್ಲಿಸಲಿ. ನಾವು ಅಕ್ರಮ ಪತ್ತೆಗಾಗಿಯೇ ನಿವೃತ್ತ ನ್ಯಾ. ನಾಗಮೋಹನ್‌ದಾಸ್‌ ಅವರ ತನಿಖಾ ಆಯೋಗ ರಚಿಸಿದ್ದೇವೆ. ಅಲ್ಲಿಗೆ ದಾಖಲೆ ಸಲ್ಲಿಸಿದರೆ, ತನಿಖೆಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.